Advertisement

ಕೊರಿಯರ್‌, ಪೋಸ್ಟಲ್ಲೂ ಡ್ರಗ್ಸ್‌  ಮಾರಾಟ ದಂಧೆ: ಐವರ ಬಂಧನ

04:21 PM Aug 03, 2022 | Team Udayavani |

ಬೆಂಗಳೂರು: ಫ‌ುಡ್‌ ಡೆಲಿವರಿ ಬಾಯ್‌ಗಳು ಹಾಗೂ ಇಂಡಿಯನ್‌ ಪೋಸ್ಟಲ್‌ ಸರ್ವಿಸ್‌, ಕೊರಿಯರ್ಸ್‌ ಸಂಸ್ಥೆಗಳ ಮೂಲಕ ಡ್ರಗ್ಸ್‌ ಮಾರುತ್ತಿದ್ದ ಬೃಹತ್‌ ಜಾಲವನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಭೇದಿಸಿದ್ದಾರೆ.

Advertisement

ನವದೆಹಲಿ ಮತ್ತು ಬಿಹಾರ ಮೂಲದ ಹಿಮಾಂಶು ಠಾಕೂರ್‌, ಸಾಗರ್‌ ಮೆಹತಾ, ಸಖಜಿತ್‌ ಸಿಂಗ್‌, ವಿಶಾಲ್‌ ಕುಮಾರ್‌ ಸಿಂಗ್‌ ಮತ್ತು ಮಹಾಬಲಿಸಿಂಗ್‌ ಬಂಧಿತರು. ಆರೋಪಿಗಳು ಮಾರತ್ತಹಳ್ಳಿ ಮತ್ತು ವೈಟ್‌ ಫೀಲ್ಡ್‌ನ ಪಿಜಿಗಳಲ್ಲಿ ವಾಸವಾಗಿದ್ದರು.

ಆರೋಪಿಗಳು ಪಿಜಿಗಳಲ್ಲಿ ಸಂಗ್ರಹಿಸಿಟ್ಟಿದ್ದ 2 ಕೋಟಿ ರೂ. ಮೌಲ್ಯದ ಎಂಡಿಎಂಎ ಕ್ರಿಸ್ಟಲ್‌, ಎಕ್ಸೈಸಿ ಮಾತ್ರೆಗಳು, ಎಲ್‌ಎಸ್‌ಡಿ, ಕೊಕೇನ್‌, ಹ್ಯಾಶಿಸ್‌ ಆಯಿಲ್‌, ಚರಸ್‌ ಹಾಗೂ ಗಾಂಜಾ ವಶಕ್ಕೆ ಪಡೆಯಲಾಗಿದೆ.  ಜತೆಗೆ ಐವರು ಆರೋಪಿಗಳ ಬ್ಯಾಂಕ್‌ ಖಾತೆಯನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದನ್ನೂ ಓದಿ: ಜಿರಳೆ ಔಷಧ ಸಿಂಪಡಣೆಗೆ ಉಸಿರುಗಟ್ಟಿ ಬಾಲಕಿ ಸಾವು

ಲೊಕ್ಯಾಂಟೊ ಮೂಲಕ ಕೆಲಸ!: ಆರೋಪಿಗಳು ಪದವೀಧರರಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಾಫ್ಟ್ವೇರ್‌ಗಳನ್ನು ಬಳಸಿ, ಡಾರ್ಕ್‌ವೆಬ್‌ ಸೈಟ್‌ನಲ್ಲಿ ಡ್ರಿಡ್‌ ಎಂಬ ವೆಬ್‌ಸೈಟ್‌ನಲ್ಲಿ ವೈಕರ್‌-ಮಿ ಅಪ್ಲಿಕೇಷನ್‌ನಲ್ಲಿ ವಿದೇಶಿಯರು ಮತ್ತು ಸ್ಥಳೀಯ ಡ್ರಗ್ಸ್‌ ಪೆಡ್ಲರ್‌ಗಳಿಂದ ವಿವಿಧ ಬಗೆಯ ಮಾದಕ ವಸ್ತುಗಳನ್ನು ಕ್ರಿಪ್ಟೋ ಕರೆನ್ಸಿ ಮೂಲಕ ಖರೀದಿಸುತ್ತಿದ್ದರು. ಅದನ್ನು ಮಾರಾಟ ಮಾಡಲು ಲೋಕ್ಯಾಂಟೋ ವೆಬ್‌ನಲ್ಲಿ “ನೀವು ಗೌರವಯುತವಾಗಿ ಹಣಗಳಿಸಬೇಕೆ? ಗುರಿ ತಲುಪಲು ನಿಮಗೆ ಆಸಕ್ತಿ ಇದೆಯೇ? ಹಾಗಾದರೆ ನನ್ನನ್ನು ಸಂಪರ್ಕಿಸಿ’ ಎಂದು ಟ್ಯಾಗ್‌ಲೈನ್‌ ಹಾಕಿ ಜಾಹೀರಾತು ನೀಡುತ್ತಿದ್ದರು. ಅದನ್ನು ಗಮನಿಸಿ ಸಂಪರ್ಕಿಸುತ್ತಿದ್ದ ನಿರುದ್ಯೋಗಿಗಳಿಗೆ ಮಾಸಿಕ 30-40 ಸಾವಿರ ರೂ. ವೇತನ ಕೊಡುತ್ತೇವೆ ಎಂದು ನೇಮಕ ಮಾಡಿಕೊಳ್ಳುತ್ತಿದ್ದರು. ಬಳಿಕ ಅವರನ್ನು ಬೆಂಗಳೂರು, ನವದೆಹಲಿ, ಚೆನ್ನೈ, ಮುಂಬೈ ಮತ್ತಿತರ ನಗರಗಳ ಪಿಜಿಗಳಲ್ಲಿ ಇರಿಸುತ್ತಿದ್ದರು ಎಂದು ತಿಳಿಸಿದರು.

Advertisement

ಅಂಚೆ ಮೂಲಕ ಡ್ರಗ್ಸ್‌!: ಬಳಿಕ ಖರೀದಿಸಿದ್ದ ಡ್ರಗ್ಸ್‌ಗಳನ್ನು ಇಂಡಿಯನ್‌ ಪೋಸ್ಟಲ್‌ ಸರ್ವಿಸ್‌, ಇಂಟರ್‌ ನ್ಯಾಷನಲ್‌ ಕೊರಿಯರ್‌ ಸಂಸ್ಥೆಗಳ ಮೂಲಕ ಪೆಡ್ಲರ್‌ಗಳು ವಾಸವಾಗಿದ್ದ ಪಿಜಿಗಳಿಗೆ ಸರಬರಾಜು ಮಾಡಿಸಿ ಶೇಖರಣೆ ಮಾಡಿಸುತ್ತಿದ್ದರು. ಬಳಿಕ ಮೆಸೆಂಜರ್‌, ಟೆಲಿಗ್ರಾಂ, ಇನ್‌ಸ್ಟ್ರಾಗ್ರಾಂ, ಬ್ರೈಯರ್‌, ಕಾನ್‌ಫೈಡ್‌ ಮತ್ತು ಸೆಷನ್‌ ಎಂಬ ಆ್ಯಪ್‌ಗಳನ್ನು ಬಳಸಿಕೊಂಡು, ಗ್ರಾಹಕರಿಗೆ ವಿವಿಧ ಬಗೆಯ ಡ್ರಗ್ಸ್‌ಗಳು ಮತ್ತು ಅವುಗಳ ಮೌಲ್ಯವನ್ನು ನೋಂದಾಯಿಸಿ ಮಾಹಿತಿ ನೀಡುತ್ತಿದ್ದರು. ನಂತರ ಗ್ರಾಹಕರಿಗೆ ಬೇಕಾದ ಡ್ರಗ್ಸ್‌ ಅನ್ನು ಟೆಲಿಗ್ರಾಂ ಮೂಲಕ ಆರ್ಡರ್‌ ಪಡೆದುಕೊಂಡು ಗೂಗಲ್‌ ಪೇ, ಫೋನ್‌ ಪೇ ಮೂಲಕ ಪಾವತಿಸಿಕೊಳ್ಳುತ್ತಿದ್ದರು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ರಮಣಗುಪ್ತ, ಡಿಸಿಪಿ ಬಿ.ಎಸ್‌.ಅಂಗಡಿ, ಎಸಿಪಿ ರಾಮಚಂದ್ರ, ಪಿಐ ಅಶೋಕ್‌ ಹಾಗೂ ಇತರೆ ಸಿಬ್ಬಂದಿ ಇದ್ದರು.

ಉಡುಗೊರೆ ನೆಪದಲ್ಲಿ ಡ್ರಗ್ಸ್‌ ಸಾಗಾಟ :

ಹುಟ್ಟುಹಬ್ಬದ ಉಡುಗೊರೆ, ವಾರಪ್‌, ಮೆಡಿಕಲ್‌ ಎಮರ್ಜೆನ್ಸಿ ಕಿಟ್‌ ಹಾಗೂ ಕೊರಿಯರ್‌ ಎನ್ವಲಪ್‌ಗಳಲ್ಲಿ ಮಾದಕ ವಸ್ತುಗಳನ್ನು ಇಟ್ಟು ಡೋಂಝೋ ಮತ್ತು ಪೋರ್ಟರ್‌ ಎಂಬ ಲಾಜಿಸ್ಟಿಕ್‌ ಸರ್ವಿಸ್‌ ಅಪ್ಲಿಕೇಶನ್‌ಗಳಲ್ಲಿ ಪಿಕ್‌ಅಪ್‌ ಮತ್ತು ಡೆಲಿವರಿ ಪಾಯಿಂಟ್‌ಗಳನ್ನು ನೋಂದಾಯಿಸಿ ಅನುಮಾನ ಬಾರದಂತೆ ಗ್ರಾಹಕರಿಗೆ ಡ್ರಗ್ಸ್‌ ಪೂರೈಸುತ್ತಿದ್ದರು. ಇತ್ತೀಚೆಗೆ ಡ್ರಗ್ಸ್‌ ಪೆಡ್ಲರ್‌ ಬಂಧಿಸಿದಾಗ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಆಯುಕ್ತರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next