Advertisement

ಔಷಧ ಸಿಂಪಡಣೆ ಕಾರ್ಯ ಜೋರು

11:29 AM Jun 20, 2018 | Team Udayavani |

„ರಮೇಶ ಕರುವಾನೆ
ಶೃಂಗೇರಿ: ಮುಂಗಾರು ಮಳೆ ಕಡಿಮೆಯಾಗುತ್ತಿದ್ದಂತೆ ತಾಲೂಕಿನಲ್ಲಿ ಅಡಕೆ ತೋಟದಲ್ಲಿ ಕೊಳೆ ರೋಗ ನಿಯಂತ್ರಣದ ಔಷಧ ಸಿಂಪಡಣೆ ಚುರುಕುಗೊಂಡಿದೆ.

Advertisement

ಈ ವರ್ಷ ಬೇಸಿಗೆಯಲ್ಲಿ ಉತ್ತಮ ಮಳೆಯಾಗಿದ್ದು, ಮೇ ತಿಂಗಳೊಂದರಲ್ಲಿಯೇ 20 ದಿನ ಮಳೆ ದಾಖಲಾಗಿದೆ. ಸತತ ಮಳೆಯಾಗಿರುವುದು ಮತ್ತು ಜೂನ್‌ ಮೊದಲ ವಾರದಿಂದಲೇ ಮುಂಗಾರು ಆರಂಭಗೊಂಡಿದ್ದರಿಂದ ಅಡಕೆ ತೋಟದಲ್ಲಿ ಕೊಳೆ ರೋಗ ನಿಯಂತ್ರಣ ಔಷಧ ಸಿಂಪಡಣೆಗೆ ಅಡ್ಡಿಯಾಗಿತ್ತು. ಕಳೆದ ಶುಕ್ರವಾರದಿಂದ ಮಳೆ ಬಿಡುವು ನೀಡಿದ ಹಿನ್ನೆಲೆಯಲ್ಲಿ ರೈತರು ಕೊಳೆ ರೋಗ ನಿಯಂತ್ರಣ ಔಷಧ ಸಿಂಪಡಣೆಗೆ ಮುಂದಾಗಿದ್ದಾರೆ.

ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಕೊಳೆ ರೋಗದ ಭೀತಿ ಹೆಚ್ಚಾಗಿದ್ದು, ಮಳೆ ಮುಂದುವರೆಯುವ ಸಾಧ್ಯತೆಯೂ ಇರುವುದರಿಂದ ತ್ವರಿತವಾಗಿ ಔಷಧ ಸಿಂಪಡಣೆ ಮಾಡಬೇಕಾಗಿದೆ.

ಅಡಕೆಗೆ ಕೊಳೆ ರೋಗ ಬಂದರೆ ರೈತರ ವಾರ್ಷಿಕ ಆದಾಯಕ್ಕೆ ಕುತ್ತು ಬರಲಿದ್ದು, ಇದರಿಂದ ರೈತರು ಮುಂಜಾಗೃತ ಕ್ರಮ ಅನುಸರಿಸುತ್ತಾರೆ. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ 3-4 ಬಾರಿ ಔಷಧ ಸಿಂಪಡಣೆ ಮಾಡಬೇಕಾದರೆ, ಸಾಮಾನ್ಯ ಮಳೆಯಾಗುವಲ್ಲಿಯೂ ಕನಿಷ್ಠ ಎರಡು ಬಾರಿ ಔಷಧ ಸಿಂಪಡಣೆ ಮಾಡಬೇಕಾಗುತ್ತದೆ.

ದುಬಾರಿಯಾದರೂ ಮೈಲುತುತ್ತಾವನ್ನು ಬಳಸಲೇಬೇಕಿದ್ದು,ಇದರೊಂದಿಗೆ ಕಾರ್ಮಿಕರ ಸಂಬಳ, ಯಂತ್ರದ ಖರ್ಚು ಹೆಚ್ಚಿದೆ. ಔಷಧ ಸಿಂಪಡಣೆ ಮಾಡುವ ಕಾರ್ಮಿಕರು ಸೀಮಿತವಾಗಿದ್ದು, ಇದರಿಂದ ಮಳೆ ಕಡಿಮೆಯಾದ ತಕ್ಷಣ ಔಷಧ ಸಿಂಪಡಿಸುವ ಕಾರ್ಮಿಕರಿಗೆ ಬೇಡಿಕೆ ಹೆಚ್ಚುತ್ತದೆ. ಔಷಧ ಸಿಂಪಡಿಸುವ ಕಾರ್ಮಿಕರು ಅನೇಕ ರೈತರ ತೋಟದ ಔಷಧ ಸಿಂಪಡಣೆ ಜವಾಬ್ದಾರಿ ಹೊಂದಿದ್ದು, ಒಂದು ಕಡೆಯಿಂದ ಸಿಂಪಡಣೆಗೆ ಮುಂದಾಗುತ್ತಾರೆ. ಇದರಿಂದ ಅಡಕೆ ತೋಟಕ್ಕೆ ಸಿಂಪಡಣೆ ಕಾರ್ಯ ಅನೇಕ ರೈತರ ತೋಟದಲ್ಲಿ ಸಮಯಕ್ಕೆ ಸರಿಯಾಗಿ ಆಗದೇ ತೊಂದರೆಗೆ ಸಿಲುಕುತ್ತಾರೆ.

Advertisement

ಒಂದನೇ ಬಾರಿ ಸಮಯಕ್ಕೆ ಸರಿಯಾದ ಸಿಂಪಡಣೆ ಮಾಡಿ, ನಂತರ ಇಲಾಖೆ ಶಿಪಾರಸ್ಸು ಮಾಡುವಂತೆ 45 ದಿನ ಅಥವಾ 45 ಇಂಚು ಮಳೆಯಾಗುವುದರೊಳಗೆ ಮತ್ತೂಮ್ಮೆ ಔಷಧ ಸಿಂಪಡಣೆ ಅಗತ್ಯವಾಗಿದೆ. ಎರಡನೇ ಬಾರಿ ಔಷಧ ಸಿಂಪಡಣೆಗೆ ಅಡಕೆ ಮರ ಸತತ ಮಳೆಯಿಂದ ಜಾರಿಕೆ ಮತ್ತು ಮಳೆ ಮುಂದುವರೆದಲ್ಲಿ ಔಷಧ ಸಿಂಪಡಣೆ ವಿಳಂಬವಾಗಿ ಕೊಳೆ ರೋಗ ಹರಡುತ್ತದೆ. ಒಂದೇ ಕಡೆ ಅಡಕೆ ತೋಟವಿರುವ ಪ್ರದೇಶದಲ್ಲಿ ಒಂದು ತೋಟಕ್ಕೆ ರೋಗ ಬಂದರೂ ಅದು ಬೇರೆ ತೋಟಕ್ಕೆ ಹಬ್ಬುವ ಸಾಧ್ಯತೆ ಇರುತ್ತದೆ.

ಕೆಲ ವರ್ಷದ ಹಿಂದೆ ಪರಿಚಯವಾದ ಜೈವಿಕ ಔಷಧ ಇದೀಗ ರೈತರಿಂದ ದೂರವಾಗಿದ್ದು, ಮತ್ತೆ ರೈತರು ಸಾಂಪ್ರದಾಯಿಕ ಔಷಧ ಬೋರ್ಡೋ ದ್ರಾವಣದ ಮೊರೆ ಹೋಗಿದ್ದಾರೆ.

ಅಡಕೆ ತೋಟಕ್ಕೆ ಬೋರ್ಡೋ ಸಿಂಪಡಣೆಗೆ ಸೂಕ್ತ ಸಮಯವಾಗಿದೆ. ರೈತರಿಗೆ ಈಗಾಗಲೇ ಬೋರ್ಡೋ ಸಿಂಪಡಣೆಗೆ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಗುಣ ಮಟ್ಟದ ಮೈಲುತುತ್ತ, ಸುಣ್ಣ ಹಾಗೂ ರಾಳವನ್ನು ಬಳಸಬೇಕು. ಹೆಚ್ಚಿನ ಮಾಹಿತಿಯನ್ನು ಇಲಾಖೆಯಿಂದ ಪಡೆದುಕೊಳ್ಳಬಹುದಾಗಿದೆ.
ಶ್ರೀ ಕೃಷ್ಣ, ಸಹಾಯಕ ತೋಟಗಾರಿಕೆ ನಿರ್ದೇಶಕ, ಶೃಂಗೇರಿ.

ಅಡಕೆ ತೋಟಕ್ಕೆ ಬೋರ್ಡೋ ಸಿಂಪಡಿಸುವ ಕಾರ್ಮಿಕರ ಕೊರತೆ ತೀವ್ರವಾಗಿದೆ. ಈಗಾಗಲೇ 50 ಇಂಚು ಮಳೆಯಾಗಿದೆ. ಮುಂಗಾರು ಮಳೆ ಆರಂಭದಲ್ಲಿ ಅಬ್ಬರಿಸಿದ್ದು, ಇನ್ನೂ ಎರಡುವರೆ ತಿಂಗಳು ಮಳೆಗಾಲವಿದೆ. ಸತತ
ಮಳೆಯಾದಲ್ಲಿ ಸಾಮಾನ್ಯವಾಗಿ ಎರಡು ಬಾರಿ ಔಷಧ ಸಿಂಪಡಣೆ ಮಾಡಿದರೆ, ಮಳೆ ಹೆಚ್ಚಾದಲ್ಲಿ ಮೂರು ಬಾರಿ ಔಷ ಧ ಸಿಂಪಡಣೆ ಮಾಡಬೇಕಾಗುತ್ತದೆ. ಮ್ಯಾಮ್ಕೋಸ್‌ ಶಾಖೆಯಲ್ಲಿ ಗುಣ ಮಟ್ಟದ ಮೈಲುತುತ್ತ, ಸುಣ್ಣ, ರಾಳ ಲಭ್ಯವಿದ್ದು, ರೈತರು ಸದುಪಯೋಗಪಡಿಸಿಕೊಳ್ಳಬೇಕು.

ಅಂಬ್ಲೂರು ಸುರೇಶ್ಚಂದ್ರ, ಮ್ಯಾಮ್ಕೋಸ್‌  ನಿರ್ದೇಶಕರು, ಶೃಂಗೇರಿ.

Advertisement

Udayavani is now on Telegram. Click here to join our channel and stay updated with the latest news.

Next