Advertisement

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧ ಕೊರತೆ

04:33 PM May 14, 2021 | Team Udayavani |

ಮೈಸೂರು: ಜಿಲ್ಲೆಯಲ್ಲಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಸಾಮಾನ್ಯ ಕಾಯಿಲೆ ಗಳಿಗೆ ಅಗತ್ಯವಿರುವ ಔಷಧ ಕೊರತೆ ಉಂಟಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಅಮರನಾಥ್‌ ಹೇಳಿದರು.

Advertisement

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಎಂ. ಜಯರಾಮ್‌ ಅಧ್ಯಕ್ಷತೆಯಲ್ಲಿ ವರ್ಚುವಲ್‌ ಆಗಿ ನಡೆದ ಜಿಪಂ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಆಸ್ಪತ್ರೆಗಳಲ್ಲೂ ಜ್ವರ, ಕೆಮ್ಮು ಇನ್ನಿತರ ಸಾಮಾನ್ಯ ಕಾಯಿಲೆಗಳಿಗೆ ಕಳೆದ 2-3 ದಿನಗಳಿಂದ ಔಷಧದ ಕೊರತೆ ಎದುರಾಗಿದೆ. ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಿಗೆ ಔಷಧ ಪೂರೈಸುವ ಕರ್ನಾಟಕ ಸ್ಟೇಟ್‌ ಡ್ರಗ್ಸ್‌ ಲಾಜಿಸ್ಟಿಕ್ಸ್‌ ಆ್ಯಂಡ್‌ ವೇರ್‌ ಹೌಸಿಂಗ್‌ ಸೊಸೈಟಿಯಿಂದ ನಾಲ್ಕೈದು ದಿನಗಳಲ್ಲಿ ಔಷಧ ಪೂರೈಕೆಯಾಗಲಿದ್ದು, ಸಮಸ್ಯೆ ಬಗೆಹರಿಯಲಿದೆ ಎಂದು ಮಾಹಿತಿ ನೀಡಿದರು.

ಸದ್ಯಕ್ಕೆ ಔಷಧ ಕೊರತೆ ನೀಗಿಸುವ ಸಲುವಾಗಿ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ 25 ಲಕ್ಷ ರೂ. ವೆಚ್ಚದಲ್ಲಿ ಔಷಧ ಖರೀದಿ ಮಾಡಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಆಡಳಿತಾಧಿಕಾರಿ ಎಂ.ಜಯರಾಮ್‌, ಟೆಂಡರ್‌ ಕರೆಯದೇ ಹೇಗೆ ಔಷಧ ಖರೀದಿ ಮಾಡುತ್ತೀರಿ? ಇದಕ್ಕೆ ಸರ್ಕಾರ ರಿಯಾಯಿತಿ ಕೊಟ್ಟಿದೆಯೇ? ಈ ವಿಷಯದಲ್ಲಿ ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳ ಬೇಕು. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು. ಆರ್ಥಿಕ ವರ್ಷ ಏಪ್ರಿಲ್‌ 1ರಿಂದ ಆರಂಭವಾದರೂ, ನವೆಂಬರ್‌, ಡಿಸೆಂಬರ್‌ನಲ್ಲಿ ವಿವಿಧ ಕಾಮಗಾರಿಗಳು ಶುರುವಾಗುತ್ತವೆ. ಮಾರ್ಚ್‌, ಏಪ್ರಿಲ್‌ನಲ್ಲಿ ಕಾಮಗಾರಿ ಗಳನ್ನು ತರಾತುರಿಯಲ್ಲಿ ಮುಗಿಸಲಾಗುತ್ತದೆ. ಇದು ಪ್ರತಿ ವರ್ಷ ನಡೆದು ಬಂದಿರುವ ಅಲಿಖೀತ ನಿಯಮದಂತಾಗಿದೆ. ಈ ಕೆಟ್ಟ ಪದ್ಧತಿ ನಿಲ್ಲಬೇಕು. ಪ್ರಸ್ತಕ ಸಾಲಿನಲ್ಲಿ ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದು ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

2020-21ನೇ ಸಾಲಿನ ವರ್ಷದಲ್ಲಿ ರಸ್ತೆ ಕಾಮಗಾರಿ ಶೇ.70ರಷ್ಟು ಅನುದಾನ ಬಂದಿಲ್ಲ. ಜತೆಗೆ, ಪ್ರಸ್ತುತ 2021-22ನೇ ಸಾಲಿನಲ್ಲಿ 5.96 ಕೋಟಿ ರೂ.ವೆಚ್ಚದಲ್ಲಿ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಉದ್ದೇಶಿಸಲಾಗಿದೆ. ಆದರೆ, ಕಳೆದ ವರ್ಷದ ಮುಂದುವರಿದ ಕಾಮಗಾರಿಗೆ ಮತ್ತು ಹೊಸ ಕಾಮಗಾರಿಗಳಿಗೂ ಅನುದಾನ ನಿಗದಿಯಾಗಿಲ್ಲ ಎಂದು ಅಧಿಕಾರಿಗಳು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಆಡಳಿತಾಧಿಕಾರಿ, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next