ಬೆಂಗಳೂರು: ಮಾದಕ ವಸ್ತು ಮಾರಾಟ ಆರೋಪ ಸಂಬಂಧ ಮೂವರು ವಿದೇಶಿ ಪ್ರಜೆಗಳು ಸೇರಿ ನಾಲ್ವರನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಗಾಂಡಾದ ಲುಟಾಯಾ ಪಟ್ರಿಕಾ(36), ಸೂಡಾನ್ ದೇಶದ ಸಬೋಸಿಯೋ ಪೌಲ್(22) ಹಾಗೂ ನೈಜಿರಿಯಾದ ಚುಕುವಾನೊಸೋ (42), ಕೇರಳ ಮೂಲದ ಡಾನ್ ಕೆ. ಥಾಮಸ್(24) ಬಂಧಿತರು.
ಆರೋಪಿಗಳಿಂದ 6 ಲಕ್ಷಕ್ಕೂ ಹೆಚ್ಚು ಮೌಲ್ಯದ 27 ಗ್ರಾಂ ಮೆಥಾಫಿಟಾಮಿನ್, 6 ಗ್ರಾಂ ಕೊಕೇನ್, 25 ಗ್ರಾಂ ಚರಸ್, 110 ಗ್ರಾಂ ತೂಕದ 254 ಎಂಡಿಎಂಎ ಮಾತ್ರೆಗಳು, 8 ಎಲ್‌ಎಸ್‌ಡಿ ಪೇಪರ್‌ಗಳು, 1 ಕೆ.ಜಿ.ಗಾಂಜಾ, ವೆಡ್ ಆಯಿಲ್ ಬಾಟಲ್, ಮಾದಕ ವಸ್ತು ಸೇವನೆಗೆ ಬಳಸುವ ಫಿಲ್ಟರ್ ಪೇಪರ್, 6 ಮೊಬೈಲ್‌ಗಳು, 3 ತೂಕದ ಯಂತ್ರಗಳು, 12 ಸಾವಿರ ನಗದು, 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.
ಪ್ರವಾಸಿ ವೀಸಾದಡಿ 2018ರಲ್ಲಿ ಚೀನಾದಿಂದ ಮಲೇಷಿಯಾ ಮೂಲಕ ಭಾರತಕ್ಕೆ ಬಂದಿರುವ ಉಗಾಂಡಾದ ಲುಟಾಯಾ ಪಟ್ರಿಕಾ ಬೆಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದಾನೆ. ಈತನ ಸಹಚರ ಸೂಡಾನ್ ದೇಶದ ಸಬೋಸಿಯೋ ಪೌಲ್ ವಿದ್ಯಾರ್ಥಿ ವೀಸಾದಡಿ 2018ರ ಏಪ್ರಿಲ್‌ನಲ್ಲಿ ಭಾರತಕ್ಕೆ ಬಂದಿದ್ದು, ಕೆ.ಆರ್.ಪುರನ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾನೆ.
ಆರೋಪಿಗಳು ಉತ್ತರ ಭಾರತ ರಾಜ್ಯಗಳ ಮೂಲಕ ಮಾದಕ ವಸ್ತು ತರಿಸುತ್ತಾರೆ ಎಂದು ಪೊಲೀಸರು ತಿಳಿಸಿದರು. ವ್ಯವಹಾರಿಕ ವೀಸಾದಡಿ 2012ರಲ್ಲೇ ಭಾರತಕ್ಕೆ ಬಂದಿರುವ ನೈಜಿರಿಯಾದ ಚುಕುವಾನೊಸೋ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದು, 2012ರಿಂದ 2017ರವರೆಗೆ ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 4ಕ್ಕೂ ಹೆಚ್ಚು ಮಾದಕ ವಸ್ತು ಮಾರಾಟ ಪ್ರಕರಣಗಳು ದಾಖಲಾಗಿವೆ.
2012ರಲ್ಲಿ ರಾಮಮೂರ್ತಿನಗರದಲ್ಲಿ ಕೊಲೆ ಯತ್ನ ಪ್ರಕರಣ, 2014ರಲ್ಲಿ ಹೆಣ್ಣೂರಿನಲ್ಲಿ ಕೊಲೆ ಪ್ರಕರಣ, 2017ರಲ್ಲಿ ಸಿಸಿಬಿ ಪೊಲೀಸರಿಂದ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಸದ್ಯ ಬಿಡುಗಡೆಯಾಗಿರುವ ಆರೋಪಿ ಮತ್ತೆ ಅದೇ ಕೃತ್ಯದಲ್ಲಿ ತೊಡಗಿದ್ದಾನೆ.
ಈತನ ಸಹಚರ ಕೇರಳ ಮೂಲದ ಡಾನ್ ಕೆ. ಥಾಮಸ್ ಇಂಟಿರಿಯರ್ ಡಿಸೈನ್ ಕೆಲಸ ಮಾಡುತ್ತಿದ್ದು, ತಾನೂ ವ್ಯಾಸಂಗ ಮಾಡಿದ್ದ ಕಾಲೇಜಿನ ಹಳೇ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಾನೆ. ಆರೋಪಿಗಳು ಬಾಂಗ್ಲಾದೇಶದ ಮೂಲಕ ಮಾದಕ ವಸ್ತುಗಳನ್ನು ತರಿಸುತ್ತಾರೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದರು.