ಮಂಗಳೂರು: ಅಕ್ರಮವಾಗಿ ಮೆಥಾಂಪೆಟಾಮೈನ್ ಮಾದಕ ದ್ರವ್ಯವನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕೆ.ಸಿ ರೋಡ್ ತಲಪಾಡಿ ನಿವಾಸಿಯಾಗಿರುವ ಅಬ್ಬುಲ್ ರಶೀದ್ ಮೊಯದ್ದೀನ್ (41), ದೇರಳಕಟ್ಟೆಯ ಪಿ ಆರೀಫ್ (40) ಬಂಧಿತ ಆರೋಪಿಗಳು.
ರವಿವಾರ ಕೊಣಾಜೆ ಪೊಲೀಸ್ ಠಾಣಾ ಪಿ.ಎಸ್.ಐ ಅಶೋಕ್ ರವರಿಗೆ ನೆತ್ತಿಲಪದವು ಸೈಟ್ ಕಂಬಳ ನಡೆಸುವ ಜಾಗದ ಬಳಿ ಅಕ್ರಮವಾಗಿ ಮೆಥಾಂಪೆಟಾಮೈನ್ ಮಾದಕ ದ್ರವ್ಯವನ್ನು ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯಂತೆ ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ ವೇಳೆ ಇಬ್ಬರು ಆರೋಪಿಗಳು ಖಾಕಿ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಆರೋಪಿಗಳಿಂದ 20 ಗ್ರಾಂ ಮೆಥಾಂಪೆಟಾಮೈನ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ 1,06,500/ ಎಂದು ಪೊಲೀಸರು ಹೇಳಿದ್ದಾರೆ.
ಈ ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್ ಐಪಿಎಸ್ ಹಾಗೂ ಅಂಶು ಕುಮಾರ್, ಉಪ ಪೊಲೀಸ್ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ ಹಾಗೂ ದಿನೇಶ್ ಕುಮಾರ್, ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ರವರ ನಿರ್ದೇಶನದಂತೆ, ಸಹಾಯಕ ಪೊಲೀಸ್ ಆಯುಕ್ತರಾದ ಪರಮೇಶ್ವರ ಹೆಗಡೆರವರ ಮಾರ್ಗದರ್ಶನದಲ್ಲಿ ಕೊಣಾಜೆ ಪೊಲೀಸ್ ಉಪ ನಿರೀಕ್ಷಕರಾದ ನಾಗರಾಜ್ ಎಸ್, ಅಶೋಕ್ ರವರ ಸಾರಥ್ಯದಲ್ಲಿ ಸಿಬ್ಬಂದಿಗಳಾದ ನವೀನ್, ಮಂಜಪ್ಪ, ಶಿವಕುಮಾರ್, ಪುರುಷೋತ್ತಮ, ಚಂದ್ರಕಾಂತ್, ಅನೀಲ್ ಕುಮಾರ್, ಬರಮ ಬಡಿಗೇರ, ಹೇಮಂತ್ ಕುಮಾರ್ ಅವರೊಂದಿಗೆ ಕಾರ್ಯಚರಣೆ ನಡೆಸಿದ್ದಾರೆ.