ಬೆಂಗಳೂರು: ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಾದಕವಸ್ತು ಸಾಗಿಸುತ್ತಿದ್ದ ಕೇರಳ ಮೂಲದ ಆರೋಪಿಯನ್ನು ಬೈಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಹಾಗೂ ರೈಲ್ವೆ ಭದ್ರತಾ ಪಡೆ ಸಿಬ್ಬಂದಿ ಭಾನುವಾರ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ಕೇರಳ ಮೂಲದ ಮೊಹಮ್ಮದ್ ಅಕ್ಸರ್ ಉಮರ್(26) ಬಂಧಿತ. ಆರೋಪಿಯಿಂದ 23 ಲಕ್ಷ ರೂ. ಮೌಲ್ಯದ 23 ಕೆ.ಜಿ.ಗಾಂಜಾ ಜಪ್ತಿ ಮಾಡಲಾಗಿದೆ.
ಭಾನುವಾರ ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕೇರಳ ಮೂಲದ ಡ್ರಗ್ಸ್ ಪೆಡ್ಲರ್ ನಗರಕ್ಕೆ ಮಾದಕವಸ್ತು ಸಾಗಿಸುವ ಬಗ್ಗೆ ದೊರೆತ ಖಚಿತ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಚನ್ನಸಂದ್ರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಒಂದರಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಮಾಲು ಸಮೇತ ಬಂಧಿಸಲಾಗಿದೆ ಎಂದು ರೈಲ್ವೆ ಪೊಲೀಸರು ಹೇಳಿದರು.
ಆರೋಪಿ ಲಗೇಜ್ ಬ್ಯಾಗ್‌ನಲ್ಲಿ ಗಾಂಜಾವನ್ನು ಬಚ್ಚಿಟ್ಟುಕೊಂಡು ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ಸಾಗಿಸಿದ್ದಾನೆ. ಈ ಮಾದಕವಸ್ತುವನ್ನು ನಗರದಲ್ಲಿ ಯಾರಿಗೆ ತಲುಪಿಸಲು ತಂದಿದ್ದ, ಕೇರಳದಲ್ಲಿ ಯಾರಿಂದ ಅದನ್ನು ಖರೀದಿಸಿದ್ದ ಎಂಬಬಗ್ಗೆ ತನಿಖೆ ನಡೆಯಬೇಕಿದೆ.
ಈ ಸಂಬಂಧ ಬೈಯಪ್ಪನಹಳ್ಳಿ ರೈಲ್ವೆ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ರೈಲ್ವೆ ಪೊಲೀಸರು ಹೇಳಿದರು.