Advertisement
ದೇಶ ವಿರೋಧಿ ಕೃತ್ಯಗಳಿಗೆ ಬಳಕೆ
Advertisement
ಭಾರತ ಮಾರುಕಟ್ಟೆ ಅಲ್ಲ
ಅಚ್ಚರಿ ಎಂದರೆ ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಸಾಗಾಟಕ್ಕಾಗಿ ಭಾರತ ಮಧ್ಯವರ್ತಿ ದೇಶದಂತೆ ವರ್ತಿಸುತ್ತಿದೆ. ಹೌದು ಡಿಆರ್‌ಐ ಪ್ರಕಾರ, ಈಗ ಕಳ್ಳಸಾಗಣೆಯಾಗುತ್ತಿರುವ ಡ್ರಗ್ಸ್‌ಗೆ ಭಾರತದಲ್ಲಿ ಮಾರುಕಟ್ಟೆ ಇಲ್ಲ. ಆದರೆ ಪಾಶ್ಚಾತ್ಯ ದೇಶಗಳಲ್ಲಿ ಹೆರಾಯಿನ್ ಸೇರಿದಂತೆ ಬೇರೆ ಬೇರೆ ಡ್ರಗ್ಸ್‌ಗೆ ಭಾರೀ ಬೇಡಿಕೆ ಇದೆ. ಇದನ್ನು ಆಫ್ಘಾನಿಸ್ಥಾನದಿಂದ ಸಾಗಾಟ ಮಾಡಲಾಗುತ್ತಿದ್ದು, ಭಾರತದ ಮೂಲಕವೇ ಕಳುಹಿಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಭಾರತದ ಬಂದರುಗಳನ್ನು ಬಳಸಿಕೊಂಡು 10,000 ಕೆಜಿ ಡ್ರಗ್ಸ್ ಅನ್ನು ಸಾಗಾಟ ಮಾಡಲಾಗಿದೆ. ಅಂದರೆ ಈಗ ವಶಪಡಿಸಿಕೊಳ್ಳಲಾಗಿರುವ ಶೇ.90ರಷ್ಟು ಇದಾಗಿದೆ.
ಸಾಗಾಟಕ್ಕೆ ಡ್ರೋನ್ ಬಳಕೆ
ಕಳೆದ ಎರಡು ಮೂರು ವರ್ಷಗಳಿಂದ ಡ್ರೋನ್ ಮೂಲಕ ಡ್ರಗ್ಸ್ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ. ಪಾಕಿಸ್ಥಾನ ಗಡಿಯೊಳಗೆ ಕುಳಿತ ಉಗ್ರರು, ಭಾರತಕ್ಕೆ ಡ್ರೋನ್‌ಗೆ ಡ್ರಗ್ಸ್ ಪ್ಯಾಕೇಟ್‌ಗಳನ್ನು ಕಟ್ಟಿ ಹಾರಿಬಿಡುತ್ತಿದ್ದಾರೆ. ಇಂಥ ಘಟನೆಗಳು ಪಂಜಾಬ್ ಮತ್ತು ಜಮ್ಮು ಕಾಶ್ಮೀರದಲ್ಲೇ ಹೆಚ್ಚಾಗಿ ಕಂಡು ಬರುತ್ತಿವೆ. ಬಿಎಸ್‌ಎಫ್ ಯೋಧರು ಕಾರ್ಯಾಚರಣೆ ನಡೆಸಿ, ಡ್ರೋನ್‌ಗಳನ್ನು ಹೊಡೆದುರುಳಿಸಿ ಭಾರೀ ಪ್ರಮಾಣದ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಂಡಿದ್ದಾರೆ. ಪಾಕಿಸ್ಥಾನವು ಚೀನ ನಿರ್ಮಿತ ಪುಟ್ಟ ಡ್ರೋನ್‌ಗಳನ್ನು ಬಳಸಿ ಡ್ರಗ್ಸ್ ಕಳುಹಿಸುತ್ತಿದೆ ಎಂದು ಬಿಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ವ್ಯವಸ್ಥಿತ ಜಾಲ
ಆಫ್ಘಾನಿಸ್ಥಾನ ಮತ್ತು ಪಾಕಿಸ್ಥಾನದಿಂದ ಭಾರತಕ್ಕೆ ಡ್ರಗ್ಸ್ ಕಳುಹಿಸುವುದಕ್ಕೆ ವ್ಯವಸ್ಥಿತ ಜಾಲವನ್ನೇ ಸ್ಥಾಪಿಸಲಾಗಿದೆ. ದುಬೈ, ಲಾಹೋರ್ ಮತ್ತು ಕರಾಚಿದ ಸಂಪರ್ಕದಲ್ಲಿರುವ ಡ್ರಗ್ಸ್ ಪೆಡ್ಲರ್‌ಗಳು, ಭಾರತದಲ್ಲಿರುವ ಸ್ಲಿàಪರ್ ಸೆಲ್‌ಗಳಿಗೆ ಡ್ರಗ್ಸ್ ಅನ್ನು ಕಳುಹಿಸುತ್ತಾರೆ. ಇವರು ರವಾನೆಯಷ್ಟೇ ಅಲ್ಲ, ಭಾರತದಲ್ಲಿ ಕಸ್ಟಮ್ ಕ್ಲಿಯರೆನ್ಸ್ ಗೂ ಬೇಕಾದ ಸಹಾಯ ಮಾಡುತ್ತಾರೆ. ಒಮ್ಮೆ ಭಾರತಕ್ಕೆ ಬಂದ ಮೇಲೆ ಎಲ್ಲೆಡೆ ವಿತರಿಸಿ, ಹಣವನ್ನು ಸಂಗ್ರಹಿಸಿಕೊಂಡು, ಭಯೋತ್ಪಾದನೆ ಕೃತ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತಾರೆ. ವಿದೇಶದಿಂದ ಬಂದ ಡ್ರಗ್ಸ್ ಅನ್ನು ಸಂಗ್ರಹಿಸಿ ಇಡಲು ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಗೋದಾಮುಗಳೂ ಇವೆಯಂತೆ.
ಐಎಸ್‌ಐ ನೆರವು
ಸದ್ಯ ಡ್ರಗ್ಸ್ ಕಳ್ಳಸಾಗಣೆ ಮಾದಕ ಭಯೋತ್ಪಾದನೆಯಾಗಿ ಪರಿವರ್ತಿತವಾಗಿದೆ. ಪಾಕಿಸ್ಥಾನ, ಆಫ್ಘಾನಿಸ್ಥಾನ ಮತ್ತು ಇರಾನ್ ದೇಶಗಳು ಈ ನಿಟ್ಟಿನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿವೆ. ಆಫ್ಘಾನಿಸ್ಥಾನವಾಗಲಿ, ಇರಾನ್ ಆಗಲಿ, ಈ ದೇಶಗಳು ಉತ್ಪಾದಿಸಿದ ಡ್ರಗ್ಸ್‌ಗೆ ನೇರ ಮಾರುಕಟ್ಟೆ ಇಲ್ಲ. ಸದ್ಯ ತಾಲಿಬಾನಿಯರು ಬೆಳೆದ ಡ್ರಗ್ಸ್ ಅನ್ನು ಮಾರಾಟ ಮಾಡಲು ಪಾಕಿಸ್ಥಾನದ ಐಎಸ್‌ಐ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಇದು ಆಫ್ಘಾನಿಸ್ಥಾನದಿಂದ ಡ್ರಗ್ಸ್ ಅನ್ನು ತರಿಸಿಕೊಂಡು ಕರಾಚಿಯ ತನ್ನ ಬಂದರು ಮೂಲಕ ಭಾರತವೂ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಕಳುಹಿಸುತ್ತಿದೆ. ಇಂಥ ಡ್ರಗ್ಸ್ ಹೊತ್ತ ಎರಡು ದೊಡ್ಡ ಹಡಗುಗಳು ಗುಜರಾತ್‌ನ ಕರಾವಳಿಯಲ್ಲಿ ಸಿಕ್ಕಿಬಿದ್ದಿವೆ. ಒಂದು ಅಲ್ ಹುಸೇನಿ ಎಂಬ ಹಡಗಿನಲ್ಲಿ 400 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದರೆ, ಇನ್ನೊಂದರಲ್ಲಿ 550 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲದೆ ಕಳೆದ ಮೂರು ವರ್ಷಗಳಲ್ಲಿ 30,000 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ನವೆಂಬರ್‌ನಲ್ಲಿ ಗುಜರಾತ್‌ನ ಮೋರ್ಬಿ ಜಿಲ್ಲೆಯಲ್ಲಿ 600 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಇದನ್ನೂ ಪಾಕಿಸ್ಥಾನದಿಂದಲೇ ಕಳುಹಿಸಲಾಗಿತ್ತು. ಹಾಗೆಯೇ ಸೆಪ್ಟಂಬರ್ ತಿಂಗಳಲ್ಲಿ ಗುಜರಾತ್‌ನ ಮುಂದ್ರಾ ಬಂದರಿನಲ್ಲಿ 3,000 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಕೇವಲ ಗುಜರಾತ್ ಅಷ್ಟೇ ಅಲ್ಲ, ಪಂಜಾಬ್‌ನಲ್ಲೂ ಭಾರೀ ಪ್ರಮಾಣದ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಉತ್ಪಾದನೆಯೂ ಹೆಚ್ಚು
ಆಫ್ಘಾನಿಸ್ಥಾನದಲ್ಲಿ ಕೊರೊನಾ ಬಳಿಕ ಒಪಿಯಂನ ಉತ್ಪಾದನೆಯೂ ಹೆಚ್ಚಾಗಿದೆ. 2020ರಲ್ಲಿ 224,000 ಹೆಕ್ಟೇರ್ ಪ್ರದೇಶದಲ್ಲಿ ಒಪಿಯಂ ಕೃಷಿ ಮಾಡಲಾಗಿದೆ. 2019ಕ್ಕೆ ಹೋಲಿಕೆ ಮಾಡಿದರೆ, ಈ ಪ್ರಮಾಣ ಶೇ.37ರಷ್ಟು ಅಥವಾ 61 ಸಾವಿರ ಹೆಕ್ಟೇರ್‌ನಷ್ಟು ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಆಫ್ಘಾನಿಸ್ಥಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಬಂದ ಮೇಲೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.