Advertisement

ಜಡ- ತಾಜಾತನ ಅರ್ಥ ಮಾಡಿಕೊಳ್ಳುವುದೇ ಸೃಷ್ಟಿ ಶೀಲತೆ 

03:45 PM Oct 11, 2018 | |

ಪುತ್ತೂರು: ಜಡತೆ ಮತ್ತು ತಾಜಾತನ ಮನಸ್ಸಿನ ಸ್ಥಿತಿಗಳು. ಇದನ್ನು ಅರ್ಥ ಮಾಡಿಕೊಳ್ಳುವುದೇ ಸೃಷ್ಟಿಶೀಲತೆ ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ವ್ಯಾಖ್ಯಾನಿಸಿದರು. ಪರ್ಲಡ್ಕ ಬಾಲವನದ ಬಯಲು ರಂಗಮಂದಿರದಲ್ಲಿ ಅ. 10ರಂದು ನಡೆದ ಡಾ| ಶಿವರಾಮ ಕಾರಂತರ 117ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಡಾ| ಶಿವರಾಮ ಕಾರಂತರ ಸೃಷ್ಟಿಶೀಲತೆ ವಿಷಯದಲ್ಲಿ ಮಾತನಾಡಿದರು.

Advertisement

ಕೆಲ ಸಂದರ್ಭದಲ್ಲಿ ಮನಸ್ಸು ಪ್ರಫುಲ್ಲಿತ ಆಗಿರುತ್ತದೆ. ಆ ಸಂದರ್ಭ ಕೆಲಸಗಳು ಸುಲಲಿತವಾಗಿ ಹಾಗೂ ಸುಂದರವಾಗಿ ಮೂಡಿಬರುತ್ತವೆ. ಇನ್ನೂ ಕೆಲ ಸಂದರ್ಭ ಮನಸ್ಸು ಜಡವಾಗಿರುತ್ತವೆ. ನಮ್ಮ ದೊಡ್ಡ ಸಮಸ್ಯೆ ಎಂದರೆ, ಮನಸ್ಸಿನ ಜಡತ್ವ ಹಾಗೂ ತಾಜಾತನವನ್ನು ಅರ್ಥ ಮಾಡಿಕೊಳ್ಳಲು ಆಗದೇ ಇರುವುದು. ಕಾರಂತರು ಇದನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಮನಸ್ಸು ತಾಜಾ ಆಗಿರುವಾಗ ಮಾತ್ರ ಅವರು ಬರೆಯಲು ಕುಳಿತುಕೊಳ್ಳುತ್ತಿದ್ದರು. ಮನಸ್ಸಿಗೆ ಜಡತ್ವ ಆವರಿಸಿಕೊಂಡಾಗ ಸುಮ್ಮನಾಗುತ್ತಿದ್ದರು. ಆದ್ದರಿಂದಲೇ ಶಿವರಾಮ ಕಾರಂತರು ವಿಭಿನ್ನವಾಗಿ ಕಾಣಸಿಗುತ್ತಾರೆ ಎಂದು ವಿಶ್ಲೇಷಿಸಿದರು. 

ಸಾಹಿತ್ಯದಲ್ಲಿ ಅನುಭವ ತುಂಬಿರಬೇಕು. ಅನುಭವ ರಹಿತವಾದ ಸಾಹಿತ್ಯದಲ್ಲಿ ಬರಿಯ ವರ್ಣನೆ ಇರುತ್ತದೆ. ಇಂತಹ ಕವಿಗಳನ್ನು ಶಿವರಾಮ ಕಾರಂತರು ಸಹಿಸಿಕೊಳ್ಳುತ್ತಿರಲಿಲ್ಲ. ಕಾರಂತರ ‘ಚೋಮನ ದುಡಿ’ ಕಾದಂಬರಿಯಲ್ಲಿ ವಾಸ್ತವ ಅನುಭವವನ್ನೇ ನಾವು ಕಾಣಬಹುದು. ಇಲ್ಲಿ ಗದ್ಯದಲ್ಲೂ ಕಾವ್ಯವಾಗುತ್ತದೆ. ಜೀವನವನ್ನು ಬಿಡುಗಣ್ಣಿನಿಂದ, ಸಮಗ್ರವಾಗಿ, ಮುಕ್ತವಾಗಿ ನೋಡಿದಾಗ ಮಾತ್ರ ಇಂತಹ ಬರವಣಿಗೆ ಹೊರಹೊಮ್ಮುತ್ತದೆ ಎಂದು ವಿವರಿಸಿದರು. ಕಾರಂತರು ಹಾಗೂ ಕಾರ್ಲ್ ಮಾರ್ಕ್ಸ್ ಇವರಿಬ್ಬರು ಹೊರಗೆಡಹಿದ ಸಾಹಿತ್ಯ ಬೇರೆಯೇ ಆಗಿರಬಹುದು. ಆದರೆ ಸಾಹಿತ್ಯದ ಒಟ್ಟು ರೂಪ ಒಂದೇ ಆಗಿದೆ. ಪುತ್ತೂರಿಗೆ ಕಾರಂತರು ಬರುವಾಗ ಪರಿಸರದ ಹೋರಾಟದ ಮೂಲಕ ಗಮನ ಸೆಳೆಯುತ್ತಾರೆ. ಬಳಿಕ ಬರೆದ ಚೋಮನ ದುಡಿಯನ್ನು ನೋಡಿದರೆ, ಅಲ್ಲಿ ಅನುಭವ ಹರಳುಗಟ್ಟಿರುವುದು ಕಾಣಸಿಗುತ್ತದೆ ಎಂದರು.

ಕಾರಂತರು ಇಟ್ಟ ಹೆಸರು
ಹಂಪಿ ಕನ್ನಡ ವಿವಿ ವಿಶ್ರಾಂತ ಉಪಕುಲಪತಿ ಡಾ| ಬಿ.ಎ. ವಿವೇಕ ರೈ ಮಾತನಾಡಿ, ಮೆದುಳು ಹಾಗೂ ದೇಹವನ್ನು ಬೇರೆ ಮಾಡದೇ ಬದುಕಿದವರು ಕಾರಂತರು. ಮಕ್ಕಳ ಹಾಗೇ ಬದುಕುವ ಮುಗ್ಧತೆ ಹಾಗೂ ಸೂಕ್ಷ್ಮತೆ ಅವರಲ್ಲಿತ್ತು. ಆದ್ದರಿಂದಲೇ ಅವರು ಕನ್ನಡ ಸಾರಸ್ವತ ಲೋಕದಲ್ಲಿ ಮೇರು ವ್ಯಕ್ತಿತ್ವವಾಗಿ ಕಾಣಸಿಗುತ್ತಾರೆ. ಕಾರಂತರು ಅಧ್ಯಯನಶೀಲತೆ ಹಾಗೂ ಸಾಹಿತ್ಯವನ್ನು ಒಟ್ಟಿಗೆ ಕೊಂಡೊಯ್ದರು. ಇದಕ್ಕೆ ಕಾರಣ ಅವರ ಅನುಭವದ ಜೀವನ. ಕಾರಂತರು ಹಾಗೂ ತನ್ನ ಹೆತ್ತವರು ನಿಕಟ ಸಂಪರ್ಕ ಹೊಂದಿದ್ದ ಕಾರಣ, ವಿವೇಕ ಎಂಬ ಹೆಸರನ್ನು ಕಾರಂತರೇ ಇಟ್ಟಿದ್ದರು. ಅವರ ಜೀವನದ ಕೆಲ ಅಮೂಲ್ಯ ಗಳಿಗೆಗಳಿಗೆ ತಾನು ಸಾಕ್ಷಿ ಆಗಿದ್ದೇನೆ ಎಂದು ನೆನಪಿಸಿಕೊಂಡರು. ಸಹಾಯಕ ಆಯುಕ್ತ ಎಚ್‌. ಕೆ. ಕೃಷ್ಣಮೂರ್ತಿ ಉಪಸ್ಥಿತರಿದ್ದರು. ವಿವೇಕಾನಂದ ಕಾಲೇಜು ವಿಶ್ರಾಂತ ಪ್ರಾಂಶುಪಾಲ ಡಾ| ಎಚ್‌. ಮಾಧವ ಭಟ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರವಾಹದಂತೆ ಬರೆದರು!
ಕಚ್ಚೆ, ಬನಿಯನ್‌ ತೊಟ್ಟು, ಕೈಯಲ್ಲಿ ಸಿಗರೇಟು ಹಿಡಿದು ಬಾಲವನದ ಮನೆಯಲ್ಲಿ ಶಿವರಾಮ ಕಾರಂತರು ಕಾದಂಬರಿಯನ್ನು ಹೇಳುತ್ತಾ ಹೋಗುತ್ತಿದ್ದರು. ಅವರು ಬರೆಯುವುದಕ್ಕಿಂತ, ಇಡಿಯ ಕಾದಂಬರಿಯನ್ನು ತಮ್ಮ ಮನಸ್ಸಿಗೆ ಆವಾಹಿಸಿಕೊಂಡು, ಪ್ರವಾಹದ ರೀತಿ ಹೇಳುತ್ತಿದ್ದರು. ಬರೆಯಲು ಕುಳಿತ ವ್ಯಕ್ತಿ ಒಂದೂ ಮಾತು ಆಡದೆ ಬರೆಯುತ್ತಾ ಹೋಗಬೇಕು. ನಡುವಲ್ಲಿ ಅರ್ಥವಾಗದ ವಾಕ್ಯದ ಬಗ್ಗೆ ಕೇಳಿದರೆ, ಉಗ್ರರೂಪಕ್ಕೆ ತಿರುಗುತ್ತಾರೆ. ಹೊಡೆದದ್ದೂ ಇದೆ. ಗೊತ್ತಾಗದೇ ಇದ್ದರೆ ಬಿಟ್ಟು ಬಿಡಬೇಕು, ಮತ್ತೆ ಕೇಳಬೇಕು. ಇದು ಕಾರಂತರ ವ್ಯಕ್ತಿತ್ವ. ತುರ್ತು ಪರಿಸ್ಥಿತಿ ಸಂದರ್ಭ ಪದ್ಮಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿದ್ದರು. ಅದೆಂತಹ ಧೈರ್ಯ ಎಂದು ಲಕ್ಷ್ಮೀಶ ತೋಳ್ಪಾಡಿ ಬಣ್ಣಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next