Advertisement
ಭಾನುವಾರ ಸಂಜೆ ಸಿದ್ದರಾಮಯ್ಯ ಅಧ್ಯಕ್ಷತೆಯ ಸಮನ್ವಯ ಸಮಿತಿ ಸಭೆ ನಡೆದಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲದಕ್ಕೆ ಕಾರಣವಾಗಿರುವ ಹೇಳಿಕೆಗಳಿಗೂ ತಮಗೂ ಯಾವುದೇ ಸಂಬಂಧ ಇಲ್ಲ. ಬಜೆಟ್ ಮಂಡನೆಗೂ ಯಾವುದೇ ತಕರಾರಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ತಿಳಿದು ಬಂದಿದೆ. ಅಲ್ಲದೆ, ಬಜೆಟ್‌ನಲ್ಲಿ ಬೆಳೆಸಾಲ ಮನ್ನಾ ಸೇರಿದಂತೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿ ನೀಡಿರುವ ವರದಿಗೆ ಸಮನ್ವಯ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
Related Articles
Advertisement
ಈ ಮಧ್ಯೆ ಆರ್ಥಿಕ ಮಿತವ್ಯಯ ಮತ್ತು ಸಾಲ ಮನ್ನಾಕ್ಕೆ ಹಣ ಹೊಂದಿಸುವ ಉದ್ದೇಶದಿಂದ ಹಿಂದಿನ ಸರ್ಕಾರದ ಕೊನೆಯ ಬಜೆಟ್‌ನಲ್ಲಿ ಘೋಷಿಸಿದ್ದ ಕೆಲವು ಹೊಸ ಯೋಜನೆಗಳನ್ನು ಈ ಬಜೆಟ್‌ನಲ್ಲಿ ಕೈಬಿಡುವ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಉಪಮುಖ್ಯಮಂತ್ರಿ ಪರಮೇಶ್ವರ್ ಕೂಡ ಪರೋಕ್ಷವಾಗಿ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸಭೆ ನಂತರ ಮಾತನಾಡಿದ ಸಮಿತಿ ಸಂಚಾಲಕ ಡ್ಯಾನಿಶ್ ಅಲಿ, ಬಜೆಟ್ ಮಂಡನೆ ಬಗ್ಗೆ ಎರಡೂ ಪಕ್ಷಗಳಲ್ಲಿ ಯಾವುದೇ ಗೊಂದಲವಿಲ್ಲ. ಯಾರೋ ಕಿಡಿಗೇಡಿಗಳು ಸಿದ್ದರಾಮಯ್ಯ ಅವರು ಖಾಸಗಿಯಾಗಿ ಮಾತನಾಡಿರುವ ದೃಶ್ಯ ಬಿಡುಗಡೆ ಮಾಡಿದ್ದಾರೆಯೇ ಹೊರತು ಯಾವ ನಾಯಕರಿಗೂ ಈ ಬಗ್ಗೆ ಅಸಮಾಧಾನವಿಲ್ಲ. ಇದು ಹೊಸ ಸರ್ಕಾರವಾಗಿರುವುದರಿಂದ ಹೊಸ ಬಜೆಟ್ ಮಂಡನೆಯಾಗುತ್ತದೆ. ಆದರೆ, ಹಿಂದಿನ ಸರ್ಕಾರದ ಎಲ್ಲ ಪ್ರಮುಖ ಯೋಜನೆಗಳನ್ನೂ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದರು.
ರೈತರ ಸಾಲ ಮನ್ನಾ ವಿಷಯದಲ್ಲಿಯ ಯಾವುದೇ ಗೊಂದಲವಿಲ್ಲ. ಎಷ್ಟು ಸಾಲ ಮನ್ನಾ ಆಗುತ್ತದೆ ಮತ್ತು ಯಾವ ದಿನಾಂಕದವರೆಗಿನ ಸಾಲ ಮನ್ನಾ ಆಗುತ್ತದೆ ಎನ್ನುವುದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಘೋಷಿಸುತ್ತಾರೆ ಎಂದು ಹೇಳಿದರು.
ಮುಂದಿನ ಐದು ವರ್ಷದಲ್ಲಿ 1 ಕೋಟಿ ಉದ್ಯೋಗ ಸೃಷ್ಠಿ ಮಾಡುವುದು, ವಸತಿ ರಹಿತರಿಗೆ 20 ಲಕ್ಷ ಮನೆ ನಿರ್ಮಾಣ, ಕ್ರೀಡಾ ನೀತಿ ಜಾರಿ, ಹೆಚ್ಚಿನ ಯುವಕರಿಗೆ ಉದ್ಯೋಗ ತರಬೇತಿ ನೀಡಲು ಕೌಶಲ್ಯ ತರಬೇತಿಗೆ ಆದ್ಯತೆ ನೀಡುವುದು ಹಾಗೂ ಐದು ವರ್ಷ ನೀರಾವರಿ ಯೋಜನೆಗಳಿಗೆ 1.25 ಲಕ್ಷ ಕೋಟಿ ರೂ. ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಸಂಪೂರ್ಣ ಯೋಜನೆಗಳ ಪುಸ್ತಕ ಬಿಡುಗಡೆಗೆ ನಿರ್ಧರಿಸಲಾಗಿದೆ ಎಂದರು.
ನಿಗಮ ಮಂಡಳಿ ಪಟ್ಟಿ ಸಿದ್ದ: ಎರಡೂ ಪಕ್ಷಗಳೂ ಈಗಾಗಲೇ ಹಂಚಿಕೆ ಮಾಡಿಕೊಂಡಿರುವಂತೆ ಮೊದಲ ಹಂತದಲ್ಲಿ 30 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಲು ಎರಡೂ ಪಕ್ಷಗಳ ಪಟ್ಟಿ ಅಂತಿಮಗೊಳಿಸಲಾಗಿದ್ದು, ಕಾಂಗ್ರೆಸ್‌ನಿಂದ 20 ಹಾಗೂ ಜೆಡಿಎಸ್‌ನಿಂದ 10 ಶಾಸಕರ ಪಟ್ಟಿ ಸಿದ್ದಪಡಿಸಲಾಗಿದೆ. ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್ ಸಿದ್ಧತೆಯಲ್ಲಿರುವುದರಿಂದ ಮತ್ತು ಸೋಮವಾರದಿಂದಲೇ ಅಧಿವೇಶನ ಆರಂಭವಾಗುತ್ತಿರುವುದರಿಂದ ಬಜೆಟ್ ಅಧಿವೇಶನ ಮುಗಿಯುವವರೆಗೂ ಘೋಷಣೆ ಮಾಡುವುದು ಅನುಮಾನ ಎನ್ನಲಾಗಿದೆ.
ಪ್ರಮುಖ ನಿರ್ಣಯಗಳು* ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ ಬೆಳೆ ಸಾಲ ಮನ್ನಾ
* ಐದು ವರ್ಷದಲ್ಲಿ ನೀರಾವರಿ ಯೋಜನೆಗೆ 1.25 ಲಕ್ಷ ಕೋಟಿ ರೂ. ವೆಚ್ಚ
* ವಸತಿ ರಹಿತರಿಗೆ ಐದು ವರ್ಷದಲ್ಲಿ 20 ಲಕ್ಷ ಮನೆ ನಿರ್ಮಾಣದ ಗುರಿ
* ಕೌಶಲ್ಯ ತರಬೇತಿ ನೀಡುವುದರೊಂದಿಗೆ 1 ಕೋಟಿ ಉದ್ಯೋಗ ಸೃಷ್ಠಿ
* ಕ್ರೀಡಾಪಟುಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲು ಕ್ರೀಡಾ ನೀತಿ ಜಾರಿ
* ಎಲ್ಲರಿಗೂ ಆರೋಗ್ಯ ವಿಮೆ ಒದಗಿಸುವ ಆರೋಗ್ಯ ಕರ್ನಾಟಕ ಜಾರಿ