Advertisement

Drought: ಪ್ರತೀ ತಾಲೂಕಿಗೂ ಭೇಟಿ ನೀಡಿ- ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಿಎಂ ಟಾಸ್ಕ್

09:29 PM Nov 04, 2023 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಬರಪೀಡಿತ ಪ್ರದೇಶಗಳ ಪಟ್ಟಿ ಬೆಳೆಯುತ್ತಿರುವಂತೆಯೇ, ಉಸ್ತುವಾರಿ ಸಚಿವರು ಬರಪೀಡಿತ ಜಿಲ್ಲೆಗಳಲ್ಲಿನ ಪ್ರತಿ ತಾಲೂಕುಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟಪ್ಪಣೆ ಮಾಡಿದ್ದಾರೆ.
ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡುತ್ತಿಲ್ಲ ಎನ್ನುವ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌ ಹಾಗೂ ರಣದೀಪ್‌ ಸುಜೇìವಾಲಾ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

ಸಚಿವರಿಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರು ಮುಂದಿನ 2 ವಾರಗಳಲ್ಲಿ ತಮ್ಮ ಜಿಲ್ಲೆಯ ಪ್ರತೀ ತಾಲೂಕಿಗೆ ಭೇಟಿ ನೀಡಿ ಕುಡಿಯುವ ನೀರು, ಮೇವು, ಉದ್ಯೋಗ, ಬೆಳೆಹಾನಿ ಮುಂತಾದವುಗಳ ಸ್ಥಿತಿಗತಿ ಕುರಿತು ಪರಿಶೀಲಿಸಿ, ಪರಿಸ್ಥಿತಿ ಅವಲೋಕಿಸಿ ಅಗತ್ಯ ಮಾಹಿತಿ ಸಂಗ್ರಹಿಸಬೇಕು. ಸ್ಥಳೀಯ ಶಾಸಕರೊಂದಿಗೆ ಗೋಶಾಲೆ, ಮೇವು ಬ್ಯಾಂಕ್‌, ಕುಡಿಯುವ ನೀರು, ಉದ್ಯೋಗ ಸೃಷ್ಟಿ ಮುಂತಾದ ಪರಿಹಾರ ಕ್ರಮಗಳ ಬಗ್ಗೆ ಸಮಾಲೋಚಿಸಿ, ಅಗತ್ಯವಿರುವ ಕಡೆ ಭೇಟಿ ನೀಡಿ ಪರಿಶೀಲಿಸಬೇಕು. ಬರ ನಿರ್ವಹಣೆ ಕಾಮಗಾರಿಗಳ ಅನುಷ್ಠಾನದಲ್ಲಿ ಯಾವುದೇ ವೈಫ‌ಲ್ಯಗಳು ಆಗದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಬರಪರಿಸ್ಥಿತಿಯ ಸಂಪೂರ್ಣ ವಸ್ತುಸ್ಥಿತಿ ಹಾಗೂ ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಬರ ನಿರ್ವಹಣೆ ಕಾರ್ಯಕ್ರಮಗಳ ಬಗ್ಗೆ ಪ್ರತೀ ತಾಲೂಕಿನ ವರದಿಯನ್ನು ನ. 15ರೊಳಗಾಗಿ ನೀಡಬೇಕು ಎಂದು ಸೂಚಿಸಿದ್ದಾರೆ.

ಬರ ಪಟ್ಟಿಗೆ ಮತ್ತೆ 7 ತಾಲೂಕುಗಳು
ಬರಪೀಡಿತ ತಾಲೂಕುಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈ ಪಟ್ಟಿಗೆ ಹೊಸದಾಗಿ 7 ತಾಲೂಕುಗಳನ್ನು ಸೇರಿಸಿ ರಾಜ್ಯ ಸರಕಾರ ಆದೇಶಿಸಿದೆ. ಮೊದಲ ಹಂತದಲ್ಲಿ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದ ರಾಜ್ಯ ಸರ್ಕಾರ, ಎರಡನೇ ಹಂತದಲ್ಲಿ 21 ತಾಲೂಕುಗಳನ್ನು ಪಟ್ಟಿಗೆ ಸೇರಿಸಿತ್ತು. ಇದೀಗ 7 ತಾಲೂಕುಗಳನ್ನು ಹೊಸದಾಗಿ ಬರಗಾಲ ಬಾಧಿತ ಪ್ರದೇಶವೆಂದು ಪ್ರಕಟಿಸಿದೆ. ಇವೆಲ್ಲವೂ ಬೀದರ್‌, ರಾಯಚೂರು ಮತ್ತು ವಿಜಯಪುರ ಜಿಲ್ಲೆಯ ತಾಲೂಕುಗಳು. ಈ ಮೂಲಕ ರಾಜ್ಯದ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದಂತಾಗಿದೆ.

ವಿಪಕ್ಷಗಳಿಂದ ಬರ ಅಧ್ಯಯನ
ಈ ಮಧ್ಯೆ ಬಿಜೆಪಿಯ ವಿವಿಧ ತಂಡಗಳು ರಾಜ್ಯದೆಲ್ಲೆಡೆ ಬರ ಅಧ್ಯಯನ ಆರಂಭಿಸಿದ್ದರೆ, ಜೆಡಿಎಸ್‌ 24 ತಂಡಗಳನ್ನು ರಚಿಸಿದ್ದು ಪ್ರವಾಸ ಮಾಡಿ ನ. 18ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next