Advertisement

ಕೇಂದ್ರ ತಂಡಕ್ಕೆ ಬರಗಾಲ ದರ್ಶನ

09:57 AM Mar 01, 2019 | Team Udayavani |

ಕಲಬುರಗಿ: ರಾಜ್ಯದಲ್ಲಿ ಬರ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರ ತಂಡಕ್ಕೆ ಕಲಬುರಗಿ ಜಿಲ್ಲೆಯಲ್ಲಿ ಸಂಪೂರ್ಣ ಬರ ಆವರಿಸಿರುವುದು ವೀಕ್ಷಣೆಯಿಂದ ಖಾತ್ರಿಯಾಗಿದ್ದು, ಶೀಘ್ರದಲ್ಲಿಯೇ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥೆ, ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ| ಸುಪರ್ಣಾ ಪಚೌರಿ ತಿಳಿಸಿದರು.

Advertisement

ಆಳಂದ ತಾಲೂಕು ಲಾಡ್‌ ಚಿಂಚೋಳಿ ಗ್ರಾಮದ ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮದ ರೈತ ಸಿದ್ದರಾಮ ಮತ್ತು ಶಿವಶರಣಪ್ಪ ಅವರ ಹೊಲದಲ್ಲಿ ಬೆಳೆದ ಜೋಳ ಮತ್ತು ಕಡಲೆ ಬೆಳೆಗಳು ಮಳೆ ಇಲ್ಲದ ಕಾರಣ ಸಂಪೂರ್ಣ ಬೆಳೆ ನಾಶವಾಗಿರುವುದನ್ನು ವೀಕ್ಷಿಸಲಾಗಿದೆ. ಸ್ಥಳೀಯ ರೈತರಿಂದ ಮಾಹಿತಿ ಪಡೆಯುತ್ತಿದ್ದೇವೆ. ಇದಲ್ಲದೆ ಜಿಲ್ಲಾಡಳಿತದಿಂದ ಬೆಳೆ ನಾಶ, ಮಳೆ ಪ್ರಮಾಣ, ಕುಡಿಯುವ ನೀರಿನ ಅಭಾವ ಸೇರಿದಂತೆ ಅಗತ್ಯ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದರು.

ಆಯಾ ತಂಡಗಳು ಜಿಲ್ಲೆಗಳಲ್ಲಿ ಬರ ಅಧ್ಯಯನದ ನಂತರ ಮರಳಿ ಬೆಂಗಳೂರಿನಲ್ಲಿ ಒಟ್ಟಾಗಿ ಸೇರಿ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯ ಎನಿಸಿದಲ್ಲಿ ಇನ್ನಿತರ ಪೂರಕ ಮಾಹಿತಿ ಪಡೆಯಲಾಗುತ್ತದೆ. ದೆಹಲಿಗೆ ಮರಳಿದ ನಂತರ ಕೇಂದ್ರ ಸರ್ಕಾರಕ್ಕೆ ಅಧ್ಯಯನ ತಂಡ ತನ್ನ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು. 

ಲಾಡ ಚಿಂಚೋಳಿ ಗ್ರಾಮದ ಸಿದ್ದರಾಮ ಬಾಬುರಾವ ಸಾಳುಂಕೆ ಮಾತನಾಡಿ, 9 ಎಕರೆಯಲ್ಲಿ ಕಡಲೆ ಹಾಗೂ 5 ಎಕರೆಯಲ್ಲಿ ಜೋಳ ಬೆಳೆದಿದ್ದು ಸಂಪೂರ್ಣ ಬೆಳೆ ನೆಲಕಚ್ಚಿದೆ. ಇನ್ನೋರ್ವ ರೈತ ಶಿವಶರಣಪ್ಪ ಮಾತನಾಡಿ, 12 ಎಕರೆಯಲ್ಲಿ ಸಂಪೂರ್ಣ ಜೋಳ ಬೆಳೆದಿದ್ದೇನೆ. ಬೆವರು ಸುರಿಸಿದ್ದಕ್ಕೆ ಫಲವಾಗಿ ಇಳುವರಿಯೂ ಇಲ್ಲ. ಅತ್ತ ದನಕರುಗಳಿಗೂ ಮೇವು ಇಲ್ಲ ಎನ್ನುವ ಮೂಲಕ ಭೀಕರ ಬರಗಾಲದ ಚಿತ್ರಣ ತಂಡದ ಮುಂದಿರಿಸಿ ಸರ್ಕಾರ
ನಮಗೆ ಹೆಚ್ಚಿನ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ತಂಡಕ್ಕೆ ಮನವಿ ಮಾಡಿಕೊಂಡರು.

ನಂತರ ಬರ ಅಧ್ಯಯನ ತಂಡ ಕಲಬುರಗಿ ತಾಲೂಕು ಹರಸೂರ ಗ್ರಾಮದಲ್ಲಿ ಬರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಗ್ರಾಮದಲ್ಲಿ 2018-19ನೇ ಸಾಲಿನ ಮಹಾತ್ಮ ಗಾಂಧಿರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ಕೆರೆ ಹೂಳೆತ್ತುವ ಕಾಮಗಾರಿ ನಿರ್ವಹಿಸುತ್ತಿದ್ದ ರೈತ ಸಮುದಾಯದಿಂದ ಸಮಸ್ಯೆಆಲಿಸಿತು. ಉದ್ಯೋಗ ಖಾತ್ರಿ ಯೋಜನೆಯಡಿ ಎಷ್ಟು ದಿನ ಕೂಲಿ ಕೆಲಸ ನೀಡಲಾಗಿದೆ? ಜಾಬ್‌ ಕಾರ್ಡ್‌ ವಿತರಣೆ
ಮಾಡಲಾಗಿದೆಯೆ? ವಸತಿ ಸೌಲಭ್ಯ ಕಲ್ಪಿಸಲಾಗಿದೆಯೆ ಎಂಬಿತ್ಯಾದಿ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆಯಿತು. ಜಿಲ್ಲೆಯಲ್ಲಿ ಬರ ಹಿನ್ನೆಲೆಯಲ್ಲಿ ರೈತ ಸಮುದಾಯದ ವಲಸೆ ತಡೆಗಟ್ಟಲು ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸದ ದಿನದ ಮಿತಿಯನ್ನು 150ಕ್ಕೆ ಹೆಚ್ಚಿಸಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ರಾಜಾ ಪಿ., ತಂಡಕ್ಕೆ ಮಾಹಿತಿ ನೀಡಿದರು.

Advertisement

ತಂಡದ ಸದಸ್ಯರಾದ ಖರ್ಚು ಇಲಾಖೆ ಸಲಹೆಗಾರ ಆರ್‌.ಬಿ. ಕೌಲ್‌ ಹಾಗೂ ಮಹಾಲನೋಬಿಸ್‌ ರಾಷ್ಟ್ರೀಯ ಬೆಳೆ ಮುನ್ಸೂಚನಾ ಕೇಂದ್ರದ (ಎಂಎನ್‌
ಸಿಎಫ್‌ಸಿ) ಸಹಾಯಕ ನಿರ್ದೇಶಕಿ ಡಾ| ಶಾಲಿನಿ ಸಕ್ಸೆನಾ, ಬರ ಅಧ್ಯಯನ ತಂಡದ ಜತೆಗೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ, ಜಂಟಿ ಕೃಷಿ
ನಿರ್ದೇಶಕ ರತೇಂದ್ರನಾಥ್‌ ಸೂಗೂರ, ಆಳಂದ ತಹಶೀಲ್ದಾರ್‌ ಬಸವರಾಜ, ಕಲಬುರಗಿ ತಹಶೀಲ್ದಾರ್‌ ಸಂಜೀವಕುಮಾರ, ಆಳಂದ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ, ಕಲಬುರಗಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ಕಲಬುರಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ ಸೇರಿದಂತೆ ಕೃಷಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next