Advertisement
ನಗರಕ್ಕೆ ನೀರು ಸರಬರಾಜಿನ ಮೂಲ ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ಕಡಿಮೆ ಆಗುತ್ತಿರುವುದರಿಂದ ಮತ್ತು ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಇಳಿಕೆ ಆಗುತ್ತಿರುವ ಕಾರಣ ಮುನ್ನೆಚ್ಚೆರಿಕೆ ಕ್ರಮವಾಗಿ ಈ ಸೂಚನೆ ನೀಡಲಾಗಿದೆ. ಕುಡಿಯುವ ನೀರನ್ನು ಕಟ್ಟಡ ರಚನೆ, ಗಿಡ ಮರಗಳಿಗೆ ಉಪಯೋಗ ಮಾಡುವುದನ್ನು ಸದ್ಯಕ್ಕೆ ನಿಷೇಧಿಸಲಾಗಿದೆ ಎಂದು ನಗರಾಡಳಿತ ಸಾರ್ವಜನಿಕ ಪ್ರಕಟನೆ ಮೂಲಕ ಜನರ ಗಮನಕ್ಕೆ ತರಲು ಮುಂದಾಗಿದೆ.
ನಗರದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಇಲ್ಲದ ಕಾರಣ ವರ್ಷಂಪ್ರತಿ ಬೇಸಗೆ ಕಾಲದಲ್ಲಿ ಕಲ್ಲುಮುಟ್ಲು ಬಳಿ ಪಯಸ್ವಿನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತಾತ್ಕಾಲಿಕ ಮರಳು ಕಟ್ಟವೇ ನೀರು ಪೂರೈಕೆಗಿರುವ ಆಧಾರ. ಈ ಬಾರಿ ಮೇ ಮೊದಲ ವಾರದಲ್ಲಿ ಕೊಡಗು ಪರಿಸರದಲ್ಲಿ ಮಳೆ ಉಂಟಾದ ಕಾರಣ ಪಯಸ್ವಿನಿಯಲ್ಲಿ ನೀರಿನ ಹರಿವು ಉಂಟಾಗಿ ಮರಳುಕಟ್ಟ ತುಂಬಿತ್ತು. ಆದರೆ ಅನಂತರ ಮಳೆ ಬಾರದ ಕಾರಣ ಹರಿವಿನ ಪ್ರಮಾಣ ಕ್ಷೀಣಿಸಿದೆ. ಸದ್ಯದ ಸ್ಥಿತಿಯಲ್ಲಿ ಮರಳು ಕಟ್ಟದಲ್ಲಿ 15 ದಿನಗಳಿಗೆ ಪೂರೈಕೆಗೆ ಸಾಕಾಗುವಷ್ಟು ನೀರು ಲಭ್ಯವಿದ್ದು, ಮಳೆ ಬಾರದಿದ್ದರೆ ನೀರಿಗಾಗಿ ತತ್ವಾರ ಪಡುವ ಆತಂಕವಿದೆ. ಮರಳು ಕಟ್ಟದಿಂದ ಕೆಳಭಾಗಕ್ಕೆ ಹೆಚ್ಚುವರಿಯಾಗಿ ಹರಿಯುತ್ತಿದ್ದ ನೀರನ್ನು ಚೀಲವಿಟ್ಟು ತಡೆಯುವ ಕಾಮಗಾರಿ ಪ್ರಾರಂಭಿಸಲಾಗಿದೆ. ನೀರೆತ್ತಲು ಅಸಾಧ್ಯ!
ಕಲ್ಲುಮಟ್ಲು ಪಂಪ್‌ಹೌಸ್ ಬಳಿಯಲ್ಲಿ 50 ಎಚ್ಪಿ1 ಮತ್ತು 45 ಎಚ್ಪಿ 2 ಪಂಪ್ ಇರಿಸಲಾದ ನದಿ ಆಳದಲ್ಲಿ ಸಾಕಷ್ಟು ನೀರು ಲಭ್ಯವಿರದಿದ್ದರೆ ನೀರೆತ್ತಲು ಸಾಧ್ಯವಾಗುವುದಿಲ್ಲ. ಕೆಲವು ದಿನಗಳಲ್ಲಿ ಆ ಪರಿಸ್ಥಿತಿ ಬಂದೊದಗುವ ಚಿತ್ರಣ ಕಂಡು ಬಂದಿದೆ. ಇದರಿಂದ ನಗರದ ಮನೆ ಹಾಗೂ ಗೃಹೇತರ ಕಟ್ಟಡಗಳಿಗೆ ನಳ್ಳಿ ಸಂಪರ್ಕದ ಮುಖಾಂತರ ನೀರು ಹರಿಸುವುದು ಅಸಾಧ್ಯವೆನಿಸಲಿದೆ. ನಗರದ ವಿವಿಧ ಭಾಗದಲ್ಲಿರುವ 42 ಕೊಳವೆಬಾವಿ ಪೈಕಿ ಹಲವು ನೀರಿನ ಸಂಕಟ ಎದುರಿಸುತ್ತಿವೆ.
Related Articles
ಪಯಸ್ವಿನಿ ಹರಿವು ಮತ್ತು ಕೊಳವೆಬಾವಿ ನೀರಿನ ಪ್ರಮಾಣ ಇಳಿಕೆ ಆಗಿದೆ. ಈಗಿರುವ ಸಂಗ್ರಹ 15 ದಿನಕ್ಕೆ ಸಾಕಾಗಬಹುದು. ಹೀಗಾಗಿ ಮಿತ ಬಳಕೆ ನಿಟ್ಟಿನಲ್ಲಿ ಕಟ್ಟಡ ಕಾಮಗಾರಿ, ಗಿಡ, ಇತರ ಕೃಷಿ ಕಾರ್ಯಗಳಿಗೆ ಕುಡಿಯುವ ನೀರು ಬಳಸದಂತೆ ಮನವಿ ಮಾಡಲಾಗಿದೆ. ಜತೆಗೆ ನೀರಿನ ಪೂರೈಕೆಯನ್ನು ಎರಡು ದಿನಕ್ಕೊಮ್ಮೆ ನಿಗದಿಪಡಿಸಲಾಗಿದೆ.
– ಶಿವಕುಮಾರ್, ಮುಖ್ಯ ಎಂಜಿನಿಯರ್, ನ.ಪಂ.ಸುಳ್ಯ
Advertisement