ನವದೆಹಲಿ: ನಿಮ್ಮ ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಯಾವ ರೀತಿಯ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದೀರಿ? ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನೇಕೆ ಸಮರ್ಪಕವಾಗಿ ಜಾರಿ ಮಾಡಿಲ್ಲ? ಎಂದು ಪ್ರಶ್ನಿಸುವ ಮೂಲಕ ಕರ್ನಾಟಕ ಸೇರಿ 9 ಬರಪೀಡಿತ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ಸುಪ್ರೀಂಕೋರ್ಟು ಬುಧವಾರ ತರಾಟೆಗೆ ತೆಗೆದುಕೊಂಡಿದೆ. ಬರ ಪರಿಹಾರ ಕಾಮಗಾರಿಗಳ ಬಗ್ಗೆ ಏ.26ರ ಒಳಗಾಗಿ ನ್ಯಾಯಾಲಯಕ್ಕೆ ಬಂದು ವಿವರಣೆ ನೀಡುವಂತೆ ನ್ಯಾ.ಎಂ.ಬಿ.ಲೋಕುರ್ ನೇತೃತ್ವದ ಪೀಠ ತಾಕೀತು ಮಾಡಿದೆ.
“ಸಂಸತ್‌ನಲ್ಲಿ ಅನುಮೋದನೆ ಪಡೆದ ಕಾನೂನು ಜಾರಿಯ ಬಗ್ಗೆ ಹೆಚ್ಚಿನ ಆಸ್ಥೆ ಕೊಡದೇ ಇರುವುದು ಕಳವಳ ಪಡುವ ಸಂಗತಿ. ಸಂವಿಧಾನದ ಕಲಂ 21ರಲ್ಲಿ (ಜೀವನ ರಕ್ಷಣೆ ಮತ್ತು ವೈಯಕ್ತಿಕ ಸ್ವಾತಂತ್ರÂ) ಸಂವಿಧಾನ ಕೂಡ ಇದನ್ನೇ ಹೇಳಿದೆ’ ಎಂದಿದೆ. ಕಾಯ್ದೆಯ ಸೆಕ್ಷನ್ 16ರ ಪ್ರಕಾರ, ರಾಜ್ಯಗಳು ಆಹಾರ ಭದ್ರತಾ ಆಯೋಗವನ್ನು ರಚಿಸಬೇಕಿತ್ತು. ಆದರೆ, ಅದಕ್ಕೆ ನೇಮಕಾತಿ ಕೂಡ ಮಾಡಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.
ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಈ ಹೊಣೆ ಹೊರಿಸಲಾಗಿತ್ತು. ಅಲ್ಲದೆ ಬರಪೀಡಿತ ಜಿಲ್ಲೆಗಳಲ್ಲಿ ವಿಪತ್ತು ನಿರ್ವಹಣಾಧಿಕಾರಿಯನ್ನು ನೇಮಿಸುವಂತೆಯೂ ಸೂಚಿಸಲಾಗಿತ್ತು. ಅಕ್ಕಿ, ರಾಗಿ, ಗೋಧಿಯನ್ನು ಕಡಿಮೆ ದರದಲ್ಲಿ ತಲಾ 5 ಕೆಜಿ, ಬರಪೀಡಿತ ಪ್ರದೇಶಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೂ ಕ್ರಮ ಕೈಗೊಳ್ಳಲು ಕಾಯ್ದೆ ಹೇಳಿತ್ತು. ಆದರೆ, ಇವ್ಯಾವುದನ್ನೂ ಈ ರಾಜ್ಯಗಳು ಪಾಲಿಸಿಲ್ಲ ಎಂದಿದೆ.
ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್, ಬಿಹಾರ, ಹರ್ಯಾಣ, ಛತ್ತೀಸಗಢ ರಾಜ್ಯಗಳಲ್ಲಿ ಎನ್‌ಎಫ್ಎಸ್‌ಎ ಕಾಯ್ದೆ ಸಮರ್ಪಕ ಜಾರಿ ಆಗಿಲ್ಲ. ಒರಿಸ್ಸಾ, ಉತ್ತರಪ್ರದೇಶ, ತೆಲಂಗಾಣ ಈ ಕಾಯ್ದೆಯ ಪ್ರಕಾರ ನಡೆದಿದ್ದು, ಸುಪ್ರೀಂ ಮೆಚ್ಚುಗೆ ಸೂಚಿಸಿದೆ.
ಅಂದಹಾಗೆ, ಈ ಕಾಯ್ದೆ ಜಾರಿಯಾಗಿದ್ದು, 2013ರ ಯುಪಿಎ ಸರ್ಕಾರದ ಅವಧಿಯಲ್ಲಿ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ, ಮೂರು ವರ್ಷದಿಂದ ಸತತ ಬರ ಆವರಿಸಿದ್ದರೂ ಇದರ ಸಮರ್ಪಕ ಅನುಷ್ಠಾನ ನಡೆದಿಲ್ಲ.