Advertisement

ಬರ ಪರಿಹಾರ: ಬಿಡುಗಡೆಯಾದ್ರೂ ತಕ್ಷಣ ಸಿಗಲ್ಲ

03:45 AM Jan 23, 2017 | Team Udayavani |

ಬೆಂಗಳೂರು: ಈ ಬಾರಿ ರಾಜ್ಯದ ರೈತರ ಅದೃಷ್ಟವೇ ಸರಿ ಇಲ್ಲ. ಬರದಿಂದ ಬೆಳೆ ಕೈಕೊಟ್ಟಿತು. ಬಂದ ಅಲ್ಪ-ಸ್ವಲ್ಪ ಬೆಳೆಗೂ ನೋಟು ರದ್ದತಿಯಿಂದ ಬೆಲೆ ಸಿಗಲಿಲ್ಲ. ಈಗ ಬರ ಪರಿಹಾರವೂ ಸಕಾಲದಲ್ಲಿ ದೊರೆಯುವುದು ಅನುಮಾನವಾಗಿದೆ!

Advertisement

ಏಕೆಂದರೆ, ಸರ್ಕಾರದ ಬಳಿ ಬರ ಪರಿಹಾರದ ಫ‌ಲಾನುಭವಿಗಳ ಪಟ್ಟಿಯೇ ಇನ್ನೂ ಸಿದ್ಧವಿಲ್ಲ. ಹಾಗಾಗಿ, ಕೇಂದ್ರ ಸರ್ಕಾರ ಘೋಷಿಸಿದ 1,782 ಕೋಟಿ ರೂ. ಪರಿಹಾರ ತಕ್ಷಣ ಬಿಡುಗಡೆಯಾದರೂ, ಅದು ಸಕಾಲದಲ್ಲಿ ರೈತರಿಗೆ ತಲುಪುವುದು ಕಷ್ಟಸಾಧ್ಯ.

ಪರಿಹಾರ ನೀಡುವಿಕೆಯಲ್ಲಿ ಪುನರಾವರ್ತನೆ ಆಗುವುದನ್ನು ತಡೆಯಲು ದೇಶದಲ್ಲಿ ಮೊದಲ ಬಾರಿಗೆ ಸರ್ಕಾರ “ಭೂಮಿ ಆನ್‌ಲೈನ್‌ ಪರಿಹಾರ’ ವ್ಯವಸ್ಥೆ ಜಾರಿಗೊಳಿಸಿದೆ. ಇದರಡಿ ಆಧಾರ್‌ ಮತ್ತು ಬ್ಯಾಂಕ್‌ ಖಾತೆ ಹಾಗೂ ರೈತರ ಸರ್ವೇ ನಂಬರ್‌ ಜೋಡಣೆ ಮಾಡಿ, ಪರಿಹಾರ ಬಿಡುಗಡೆ ಮಾಡಲಾಗುತ್ತದೆ. ಆದರೆ ಈ ವ್ಯವಸ್ಥೆ ಗೊಂದಲಗಳ ಗೂಡಾಗಿದ್ದು, ಈವರೆಗೆ ಶೇ. 50ರಷ್ಟು ರೈತರ ಮಾಹಿತಿ ಕೂಡ ಸಾಫ್ಟ್ವೇರ್‌ನಲ್ಲಿ ದಾಖಲಾಗಿಲ್ಲ.

ರಾಜ್ಯಾದ್ಯಂತ ರೈತರ ಸಂಖ್ಯೆ ಅಂದಾಜು 35 ಲಕ್ಷ. ಜತೆಗೆ 55ರಿಂದ 60 ಲಕ್ಷ ಜಮೀನುಗಳ ಸರ್ವೇ ನಂಬರ್‌ಗಳಿವೆ. ಇದರ ಜತೆಗೆ ಬ್ಯಾಂಕ್‌ ಹೆಸರು, ಖಾತೆ, ಐಎಫ್ಎಸ್ಸಿ ಸಂಖ್ಯೆ, ಆಧಾರ್‌ ಸಂಖ್ಯೆಯನ್ನು ಸಾಫ್ಟ್ವೇರ್‌ನಲ್ಲಿ ನಮೂದಿಸಬೇಕು. ಇದೆಲ್ಲವೂ ಆನ್‌ಲೈನ್‌ನಲ್ಲೇ ನಡೆಯಬೇಕು. ಈ ದತ್ತಾಂಶಗಳ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ರೈತರಿಗೆ ಪರಿಹಾರ ನೀಡಲು ಬರುವುದಿಲ್ಲ. ಹಾಗಾಗಿ, ತಕ್ಷಣ ಕೇಂದ್ರದಿಂದ ಹಣ ಬಿಡುಗಡೆಯಾದರೂ ಅದು ರೈತರ ಕೈಸೇರಲು ತಿಂಗಳು ಕಾಯಬೇಕಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಒಂದೆರಡು ವಾರಗಳಲ್ಲಿ ಪೂರ್ಣ; ಅಧಿಕಾರಿ
“ಆದರೆ ನಮ್ಮಲ್ಲಿ 37 ಲಕ್ಷ ರೈತರಿದ್ದು, ಅವರೆಲ್ಲರ ಮಾಹಿತಿಯೂ ನಮ್ಮ ಬಳಿ ಲಭ್ಯವಿದೆ. ಈಗೇನಿದ್ದರೂ ಆಧಾರ್‌ ಸಂಖ್ಯೆ ಪಡೆದು, ಸಾಫ್ಟ್ವೇರ್‌ನಲ್ಲಿ ಹಾಕುವುದಷ್ಟೇ ಬಾಕಿ. ಇದರಲ್ಲಿ ಈಗಾಗಲೇ 26 ಲಕ್ಷ ರೈತರ ಮಾಹಿತಿ ಭರ್ತಿ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದೆ. ಒಂದೆರಡು ವಾರಗಳಲ್ಲಿ ಇಡೀ ಪ್ರಕ್ರಿಯೆ ಮುಗಿಯುತ್ತದೆ. ಆಗ ಕೇವಲ ಒಂದೇ ದಿನದಲ್ಲಿ ಪರಿಹಾರ ಫ‌ಲಾನುಭವಿಗಳ ಖಾತೆಗೆ ಜಮೆ ಆಗಲಿದೆ’ ಎಂದು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ, ಭೂಮಿ) ಕಾರ್ಯದರ್ಶಿ ಗಂಗಾರಾಮ್‌ ಬಡೇರಿಯಾ ಸ್ಪಷ್ಟಪಡಿಸುತ್ತಾರೆ.
“ಅರ್ಹ ಫ‌ಲಾನುಭವಿಗಳಿಗೆ ಸಕಾಲದಲ್ಲಿ ಪರಿಹಾರ ತಲುಪಿಸಲು ಇದೊಂದು ಅತ್ಯುತ್ತಮ ವ್ಯವಸ್ಥೆ. ಈ ಮೊದಲು ಪರಿಹಾರ ವಿತರಣೆಗೆ ಐದಾರು ತಿಂಗಳು ಸಮಯ ಹಿಡಿಯುತ್ತಿತ್ತು. ಈಗ ಒಂದೇ ದಿನದಲ್ಲಿ ತಲುಪಿಸಬಹುದು. ಕೇಂದ್ರ ತಕ್ಷಣ ಹಣ ಬಿಡುಗಡೆ ಮಾಡಿದರೂ, ಅದನ್ನು ಕೆಲವೇ ದಿನಗಳಲ್ಲಿ ರೈತರಿಗೆ ತಲುಪಿಸಲು ನಾವು ಸಿದ್ಧ. ಅಷ್ಟಕ್ಕೂ ಇನ್ನೂ ಸರ್ಕಾರದಿಂದ ಹಣ ಬಿಡುಗಡೆ ಆಗಿಲ್ಲವಲ್ಲ’ ಎಂದೂ ಅವರು ತಿಳಿಸುತ್ತಾರೆ.

Advertisement

ವಾಸ್ತವ ಹಾಗಿಲ್ಲ; ಗ್ರಾಮ ಲೆಕ್ಕಿಗರು
ಆದರೆ, ವಾಸ್ತವ ಸ್ಥಿತಿ ಬೇರೆಯೇ ಆಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಸೌಲಭ್ಯ ಇರುವುದಿಲ್ಲ. ಇದ್ದರೂ ತುಂಬಾ ನಿಧಾನಗತಿಯಲ್ಲಿರುತ್ತದೆ. ಕೆಲವೊಮ್ಮೆ “ಸರ್ವರ್‌ ಡೌನ್‌’ ಆಗಿರುತ್ತದೆ. ಜತೆಗೆ ಆಧಾರ್‌ ಚೀಟಿಯಲ್ಲಿದ್ದಂತೆಯೇ ಹೆಸರು ನಮೂದಿಸಬೇಕು. ಸ್ವಲ್ಪ ವ್ಯತ್ಯಾಸವಾದರೂ ಆ ಖಾತೆಗೆ ಹಣ ಜಮೆ ಆಗುವುದಿಲ್ಲ. ಇಂತಹ ಹಲವಾರು ಸಮಸ್ಯೆಗಳು ನೂತನ ವ್ಯವಸ್ಥೆಯ ಕುರಿತು ಕೇಳಿಬರುತ್ತಿವೆ. ಇದೆಲ್ಲವನ್ನೂ ಒಂದೊಂದಾಗಿ ಸರಿಪಡಿಸಲಾಗುತ್ತಿದೆ. ಆದರೆ, ಸಾಕಷ್ಟು ಪ್ರಮಾಣದ ದತ್ತಾಂಶಗಳನ್ನು ಸಾಫ್ಟ್ವೇರ್‌ನಲ್ಲಿ ದಾಖಲಿಸಬೇಕಿದೆ. ಇದಕ್ಕೆ ಸಮಯ ಹಿಡಿಯುತ್ತಿದೆ ಎಂದು ಧಾರವಾಡ ಜಿಲ್ಲೆಯ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಪೂರ್ಣಗೊಳ್ಳದೆ ಪರಿಹಾರ ಇಲ್ಲ?
ಒಬ್ಬ ರೈತರ ಹೆಸರಿನಲ್ಲಿ ಹಲವು ಸರ್ವೇ ನಂಬರ್‌ಗಳಿರುತ್ತವೆ. ಒಂದೊಂದು ನಾಡಕಚೇರಿಯಲ್ಲಿ ಅರ್ಜಿ ಹಾಕಿದಾಗ, ಪರಿಹಾರ ಪುನರಾವರ್ತನೆಯಾಗುವ ಸಾಧ್ಯತೆ ಹೆಚ್ಚು. ಈ ಮಧ್ಯೆ ಪರಿಹಾರ ಎರಡು ಹೆಕ್ಟೇರ್‌ಗೆ ಸೀಮಿತವಾಗಿದ್ದರೂ, ಅದನ್ನು ಅನುಷ್ಠಾನಗೊಳಿಸುವುದು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆನ್‌ಲೈನ್‌ ಪರಿಹಾರ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆದರೆ, ನೂತನ ವ್ಯವಸ್ಥೆಯಲ್ಲಿ ಯಾವೊಂದು ಹಳ್ಳಿಯಲ್ಲಿ ನೂರಕ್ಕೆ ನೂರರಷ್ಟು ಮಾಹಿತಿಗಳ ನಮೂದು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಪರಿಹಾರ ಬಿಡುಗಡೆ ಮಾಡಲು ಬರುವುದಿಲ್ಲ.

ಆಧಾರ್‌ ಸಂಖ್ಯೆ ಆಧರಿಸಿಯೇ ಸರ್ವೇನಂಬರ್‌ಗಳನ್ನು ವಿಂಗಡಿಸಲಾಗುವುದು. ನಂತರ ಆಯಾ ಪ್ರದೇಶವಾರು ಪರಿಹಾರ ಬಿಡುಗಡೆ ಮಾಡಲಾಗುವುದು. ಒಂದು ವೇಳೆ ಅಪೂರ್ಣವಾಗಿದ್ದಾಗಲೇ ಪರಿಹಾರ ಬಿಡುಗಡೆ ಮಾಡಿದರೆ ಮುಂದಿನ ಹಂತಗಳಲ್ಲಿ ಒಂದೇ ಹೆಸರಿನ ಮತ್ತಷ್ಟು ಸರ್ವೇ ನಂಬರ್‌ ಇರುವವರು ಪಟ್ಟಿಯಲ್ಲಿ ಸೇರಿಕೊಳ್ಳಬಹುದು. ಆಗ, ಉದ್ದೇಶ ಈಡೇರುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಆಧಾರ್‌ ಕಡ್ಡಾಯ:
ಬರ ಪರಿಹಾರ ತಲುಪಬೇಕಾದರೆ, ಈ ಸಲ ಆಧಾರ್‌ ಮತ್ತು ಬ್ಯಾಂಕ್‌ ಖಾತೆ ಕಡ್ಡಾಯವಾಗಿ ಹೊಂದಿರಬೇಕು. ಆಧಾರ್‌ ಇಲ್ಲದವರಿಗೆ ಪರಿಹಾರ ವಿತರಣೆ ಹೇಗೆ ಎಂಬುದರ ಬಗ್ಗೆಯೂ ಇನ್ನೂ ಕಂದಾಯ ಇಲಾಖೆ ನಿರ್ಧರಿಸಿಲ್ಲ. ಆದರೆ, ಮೂಲಗಳ ಪ್ರಕಾರ ಶೇ. 90ರಷ್ಟು ರೈತರು ಆಧಾರ್‌ ಮತ್ತು ಬ್ಯಾಂಕ್‌ ಖಾತೆ ಹೊಂದಿದ್ದಾರೆ.

ಹೀಗಿದೆ ಹೊಸ ವ್ಯವಸ್ಥೆ
ಹೊಸ ವ್ಯವಸ್ಥೆಯ “ಭೂಮಿ’ ಸಾಫ್ಟ್ವೇರ್‌ನಲ್ಲಿ ಆಧಾರ್‌ ಸಂಖ್ಯೆ ಟೈಪ್‌ ಮಾಡಿದರೆ ಸಾಕು, ರೈತನ ಹೆಸರು, ಸರ್ವೇ ನಂಬರ್‌ಗಳು, ಅದರ ವಿಸ್ತೀರ್ಣ, ಆ ಜಮೀನು ಎಲ್ಲಿದೆ? ರೈತನ ಬ್ಯಾಂಕ್‌ ಖಾತೆ ಸೇರಿ ಸಮಗ್ರ ಮಾಹಿತಿ ಪರದೆ ಮೇಲೆ ಬರುತ್ತದೆ. ಅದನ್ನು ಆಧರಿಸಿ ಪರಿಹಾರ ಬಿಡುಗಡೆ ಮಾಡಬಹುದು. ಇದಲ್ಲದೆ, ಸರ್ಕಾರ ಮುಂದಿನ ಹಲವು ಯೋಜನೆಗಳಿಗೂ ಇದು ಅನುಕೂಲವಾಗಲಿದೆ.

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next