ರಾಜ್ಯದ 195 ತಾಲೂಕುಗಳನ್ನು ಬರಪೀಡಿತ ಎಂದು ಸರಕಾರ ಘೋಷಿಸಿದೆ. ಇದರೊಂದಿಗೆ ಇನ್ನೂ 21 ತಾಲೂಕುಗಳನ್ನು ಈ ಪಟ್ಟಿಗೆ ಸೇರಿಸಲು ಮುಂದಾಗಿದೆ. ತಾಂತ್ರಿಕ ಕಸರತ್ತುಗಳನ್ನು ನಡೆಸಿ,
ಎನ್‌ಡಿಆರ್‌ಎಫ್ ನಿಬಂಧನೆಗಳನ್ನು ಪೂರೈಸಿ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುತ್ತದೆ ಎಂದೇ ಇಟ್ಟುಕೊಳ್ಳೋಣ. ಬರವನ್ನು ನಿರ್ವಹಿಸುವುದು ಘೋಷಿಸಿದಷ್ಟು ಸುಲಭವಂತೂ ಇಲ್ಲ. ನಿಸರ್ಗದ ಮೇಲೆ ತಪ್ಪು ಹೊರಿಸಿ ಕೈ ಕಟ್ಟಿ ಕೂರುವುದಕ್ಕೆ ಸಾಧ್ಯವಿಲ್ಲ. ಕೇಂದ್ರದಿಂದ ಸಿಗುವ ಪರಿಹಾರವನ್ನೇ ನಂಬಿ ಕೂರುವಂತಿಲ್ಲ. ಬರಗಾಲದ ಸವಾಲುಗಳನ್ನು ಎದು ರಿಸಲು ಸರಕಾರ ಮುನ್ನೆಚ್ಚರಿಕೆ ಕ್ರಮಗಳನ್ನಂತೂ ತೆಗೆದುಕೊಳ್ಳಲೇಬೇಕಿದೆ. ಐದರಲ್ಲಿ ನಾಲ್ಕು ಗ್ಯಾರಂಟಿ ಜಾರಿಗೊಳಿಸಿರುವ ಸರಕಾರ, ಅಭಿವೃದ್ಧಿ ಕಾಮಗಾರಿಗಳತ್ತ ಚಿಂತಿಸುವ ಸ್ಥಿತಿಯಲ್ಲಿಲ್ಲ. ಆದರೆ ಬರಗಾಲ ಎದುರಿಸುವ ಸವಾಲು ಸ್ವೀಕರಿಸಿ ಮುನ್ನಡೆಯಬೇಕಿದೆ. ಇದು ಸರಕಾರಕ್ಕೆ ಗೊತ್ತಿಲ್ಲದ ವಿಚಾರಗಳೂ ಅಲ್ಲ. ಆದರೂ ಅಗತ್ಯ ಕ್ರಮಗಳನ್ನು ಮುಂಜಾಗ್ರತೆಯಿಂದ ತೆಗೆದುಕೊಳ್ಳುತ್ತಿಲ್ಲ ಎನ್ನುವ ಭಾವನೆಗಳು ನಾಡಿನ ಜನರ ಮನಸ್ಸಲ್ಲಿ ಮೂಡುತ್ತಿದೆ. ಬರ ಎದುರಿಸುವ ವಿಚಾರದಲ್ಲಿ ಸರಕಾರವೂ ಧೃತಿ ಗೆಡಬಾರದು, ಜನರನ್ನೂ ಕಂಗಾಲಾಗಿಸಬಾರದು.
ಒಂದೆಡೆ ಜಲಾಶಯಗಳಲ್ಲಿನ ನೀರನ್ನು 2024 ರ ಎಪ್ರಿಲ್-ಮೇ ತಿಂಗಳ ವರೆಗೆ ಕಾಪಾಡಿಕೊಳ್ಳಬೇಕಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಆದ್ಯತೆ ನೀಡಬೇಕಿದೆ. ಜತೆಗೆ ಕೃಷಿ, ಕೈಗಾರಿಕೆಯೂ ನೀರು ಸರಬರಾಜು ಮಾಡುವ ಹೊಣೆಗಾರಿಕೆ ಇದೆ. ಸಕಾಲದಲ್ಲಿ ನೀರು ಹಾಗೂ ವಿದ್ಯುತ್ ಸಿಗದೆ ನಷ್ಟವಾದ ಬೆಳೆಗೂ ಪರಿಹಾರ ಕೊಡಬೇಕಾಗುತ್ತದೆ. ಕೈಗಾರಿಕೆಗಳ ಕೈಯನ್ನೂ ಹಿಡಿದು ಮೇಲೆತ್ತಬೇಕಾಗಬಹುದು. ಕಾವೇರಿ ಕೊಳ್ಳದ 4 ಜಲಾಶಯಗಳಿಂದ ಮುಂದಿನ 15 ದಿನಗಳ ಕಾಲ ನಿತ್ಯ 3 ಸಾವಿರ ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಬಿಡಬೇಕಿದೆ. ಅವುಗಳನ್ನಾಧರಿಸಿ ಕೊಡಗು, ಹಾಸನ, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ನಗರ, ತುಮಕೂರು ಜಿಲ್ಲೆಗಳು ಅವಲಂಬಿತವಾಗಿವೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಈ ಜಲಾಶಯಗಳೇ ಮೂಲವೆನಿಸಿವೆ. ಪರಿಸ್ಥಿತಿ ಹೀಗಿರುವಾಗ ತಮಿಳುನಾಡು ನೀರು ಕೇಳುತ್ತಲೇ ಇದೆ.
ಇನ್ನು ಕೃಷ್ಣಾ ಕೊಳ್ಳದ ರೈತರಿಗೆ ನ.30ರ ವರೆಗೆ ಮಾತ್ರ ಬೆಳೆಗೆ ನೀರು ಕೊಡುವ ಭರವಸೆ ಸಿಕ್ಕಿದೆ. ಹಿಂಗಾರು ಮಳೆಯ ಮೇಲೆ ಯಾವುದೇ ಭರವಸೆ ಇಟ್ಟುಕೊಳ್ಳಲಾಗುತ್ತಿಲ್ಲ. ಜಲಾಶಯದ ನೀರು ನಂಬಿ ಬೆಳೆ ಬೆಳೆಯದಂತೆ ರೈತರಿಗೆ ಸರಕಾರ ಮನವಿ ಮಾಡುತ್ತಲೇ ಇದೆ. ಆದರೆ ಮಳೆ ನಂಬಿ ಬಿತ್ತಿದ್ದ ಬೆಳೆ ಬೆಳೆದು ನಿಂತಿದೆ. ಅಷ್ಟಾಕ್ಕಾದರೂ ನೀರುಣಿಸದಿದ್ದರೆ, ಬೆಳೆಯೂ ನಷ್ಟವಾಗುತ್ತದೆ. ಆಹಾರೋತ್ಪಾದನೆಯೂ ಕುಸಿಯುತ್ತದೆ.
ಅನಿಯಮಿತ ಲೋಡ್ ಶೆಡ್ಡಿಂಗ್ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವೆಡೆ ಕೆರೆಗಳಲ್ಲಿ ಕೊಂಚ ನೀರಿದ್ದು, ಅಂತರ್ಜಲ ಇರುವುದರಿಂದ ಕೊಳವೆ ಬಾವಿಗಳಿಂದಾದರೂ ನೀರೆತ್ತಿ ಕೃಷಿ ಮಾಡೋಣ ಎಂದುಕೊಂಡವರಿಗೆ ವಿದ್ಯುತ್ ಕೈ ಕೊಡುತ್ತಿದೆ. ಬೋರ್‌ವೆಲ್, ಪಂಪ್‌ಸೆಟ್ ಎಲ್ಲ ಇದ್ದರೂ ವಿದ್ಯುತ್ ಇಲ್ಲದೆ ಕೃಷಿ ಚಟುವಟಿಕೆ ನಿಲ್ಲುವಂತಾಗಿದೆ. ಇದರಿಂದ ಕೃಷಿ ಆಧಾರಿತ ಕುಟುಂಬಗಳು ಉದ್ಯೋಗವಿಲ್ಲದೆ ಕೂರು ವಂತಾಗಿದೆ. ಬೆಳೆಗಳು ನೀರಿಲ್ಲದೆ ಕಣ್ಣೆದುರೇ ಒಣಗುತ್ತಿರುವುದರಿಂದ ರೈತರು ಎಸ್ಕಾಂಗಳ ಮೇಲೆ ಸಿಟ್ಟು ತೀರಿಸಿಕೊಳ್ಳಲಾರಂಭಿಸಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಸಣ್ಣ ಕೈಗಾರಿಕೆಗಳಿಗೂ ವಿದ್ಯುತ್ ವ್ಯತ್ಯಯವಾಗುವ ಅಪಾಯವಿದೆ.