Advertisement

ಬರ ನಿರ್ವಹಣೆ: ಸಮನ್ವಯ-ಸಹಕಾರ-ಸ್ಪಂದನೆ ಅಗತ್ಯ

03:57 PM Apr 26, 2019 | Team Udayavani |

ಗದಗ: ಜಿಲ್ಲೆಯ ಲೋಕಸಭೆ ಚುನಾವಣೆ ಮತದಾನ ಪ್ರಕ್ರಿಯೆ ಯಶಸ್ಸಿಗೊಳಿರುವಂತೆ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಬರ ಪರಿಸ್ಥಿತಿ ಎದುರಿಸಬೇಕು. ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು ಎಂದು ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಮ್ಲನ್‌ ಆದಿತ್ಯ ಬಿಸ್ವಾಸ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಜಿಲ್ಲೆಯ ಬರ ನಿರ್ವಹಣೆ ಕುರಿತು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಕುರಿತು ಪ್ರಗತಿ ಪರಿಶೀಲಿಸಿ ಅವರು ಮಾತನಾಡಿ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಕೃಷಿ ಕಾರ್ಮಿಕರಿಗೆ ಉದ್ಯೋಗ ನೀಡುವಿಕೆಗೆ ಕುರಿತಂತೆ ಸತತ ನಿಗಾವಹಿಸಲು ಸೂಚಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ವಾಡಿಕೆ ಮಳೆ 368.93 ಮಿ.ಮೀ.ಗೆ 209.6 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದ್ದು ಶೇ.43 ಮಳೆ ಕೊರತೆಯಾಗಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಡಿಬಿಓಟಿ ಆಧಾರದ ಯೋಜನೆಯಡಿ ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿದ್ದು, ಪರಿಸ್ಥಿತಿ ಸೂಕ್ತವಾಗಿ ನಿಭಾಯಿಸಲಾಗುತ್ತಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 1629 ಕೊಳವೆ ಬಾವಿಗಳು ಕಾರ್ಯಾಚರಣೆಯಲ್ಲಿವೆ. ಜಿಲ್ಲೆಯಲ್ಲಿ ಕುಡಿಯುವ ನೀರು ಸರಬರಾಜಿಗಾಗಿ ಒಟ್ಟು 101 ಕಾಮಗಾರಿ ಕೈಗೆತ್ತಿಕೊಂಡಿದ್ದು, ಅವುಗಳಲ್ಲಿ 114.96 ಲಕ್ಷಗಳ 91 ಕಾಮಗಾರಿ ಪ್ರಗತಿಯಲ್ಲಿವೆ ಎಂದರು.

ಟ್ಯಾಂಕರ್‌ ನೀರು ಪೂರೈಕೆ: ಜಿಲ್ಲೆಯ ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ನರೇಗಲ್ಲ 6, ಗಜೇಂದ್ರಗಡದಲ್ಲಿ 8 ಹಾಗೂ ರೋಣದಲ್ಲಿ 4 ಖಾಸಗಿ ಕೊಳವೆ ಬಾವಿ ಬಾಡಿಗೆ ಪಡೆದು ಸ್ಥಳೀಯ ಸಂಸ್ಥೆಗಳ ಸರ್ಕಾರಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಬರ ನಿರ್ವಹಣೆ ಕುರಿತಂತೆ ಒಟ್ಟು 16.16 ಕೋಟಿ ರೂ. ಜಿಲ್ಲಾಡಳಿತದ ಬಳಿ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

32.01 ಲಕ್ಷ ಮಾನವ ದಿನ ಸೃಷ್ಟಿ: ಮಹಾತ್ಮ ಗಾಂಧಿಧೀಜಿ ಉದ್ಯೋಗ ಖಾತ್ರಿ ಯೋಜನೆಯಡಿ 2018-19ರಲ್ಲಿ 96.57 ಕೋಟಿ ರೂ. ವೆಚ್ಚದಲ್ಲಿ 26.07 ಲಕ್ಷ ಮಾನವ ಉದ್ಯೋಗ ಸೃಷ್ಟಿಸಲಾಗಿದೆ. ಪ್ರಸಕ್ತ 2019-20 ಸಾಲಿನಲ್ಲಿ 140.77 ಕೋಟಿ ರೂ. ಅನುದಾನದಲ್ಲಿ 32.01 ಲಕ್ಷ ಮಾನವ ದಿನ ಸೃಜಿಸಲಾಗಿದೆ ಎಂದು ಜಿಪಂ ಸಿಇಒ ಮಂಜುನಾಥ ಚವ್ಹಾಣ ತಿಳಿಸಿದರು.

ಲೋಕಸಭೆ ಚುನಾವಣೆಗಾಗಿ ಊರಿಗೆ ಆಗಮಿಸಿರುವ ಜಿಲ್ಲೆಯ ಕೃಷಿ ಕಾರ್ಮಿಕರಿಗೆ ಉದ್ಯೋಗ ನೀಡುವ ಕಾರ್ಯಕ್ರಮವನ್ನು ಆಯಾ ಪಂಚಾಯತ್‌ ಅಧಿಕಾರಿಗಳು ಕೈಕೊಳ್ಳಬೇಕೆಂದು ನಿರ್ದೇಶಿಸಿದರು.

ಯೋಜನೆ ಜಾರಿಗೆ ಮುಂದಾಗಿ: ಉದ್ಯೋಗ ಖಾತ್ರಿ ಯೋಜನೆಯಡಿ ಗುರಿ ಸಾಧನೆಗಿಂತ ಹೆಚ್ಚಾಗಿ ಬರ ಪರಿಸ್ಥಿತಿಯಲ್ಲಿ ಗ್ರಾಮೀಣ ಕುಟುಂಬಸ್ಥರ ಸಂಕಷ್ಟ ನಿವಾರಣೆಯಾಗುವಂತೆ ಸಾಮಾಜಿಕ ಪರಿಸ್ಥಿತಿ ನಿರ್ವಹಣೆ ಅಂಶ ಪ್ರಮುಖವಾಗಬೇಕು. ಅಧಿಕಾರಿಗಳು ವಿಶೇಷವಾಗಿ ಗ್ರಾಪಂಗಳು ಈ ಕುರಿತು ಗ್ರಾಮದ ಕೃಷಿ ಕಾರ್ಮಿಕರು, ರೈತರಿಗೆ ಆಸ್ತಿ ಆಗುವ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಲು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲಹೆ ನೀಡಿದರು.

ಜಿಲ್ಲೆಯ 37,571 ರೈತರಿಗೆ 10.15 ಕೋಟಿ ರೂ. 2018ರ ಮುಂಗಾರು ಬೆಳೆ ಹಾನಿ ಕುರಿತ ಇನ್‌ಪುಟ್ ಸಬ್ಸಿಡಿ ವಿತರಣೆ ಆಗಿದೆ. ಒಟ್ಟು 147.14 ಕೋಟಿ ಇನ್‌ಪುಟ್ ಸಬ್ಸಿಡಿಗೆ ಕ್ಲೇಮು ಸಲ್ಲಿಸಲಾಗಿದೆ. 2018ರ ಹಿಂಗಾರು ಕೃಷಿ ಬೆಳೆ ಹಾನಿಗಾಗಿ 132.23 ಕೋಟಿ ರೂ. ಇನ್‌ಪುಟ್ ಸಬ್ಸಿಡಿ ಬೇಡಿಕೆ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಹಾಗೂ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದರು. ರೈತರ ಸಾಲ ಮನ್ನಾ ಯೋಜನೆಯಡಿ ಜಿಲ್ಲೆಗೆ 71 ಕೋಟಿ ರೂ. ಅಗತ್ಯ ಗುರುತಿಸಲಾಗಿದ್ದು ಈವರೆಗೆ 6,718 ರೈತರಿಗಾಗಿ 27 ಕೋಟಿ ರೂ.ಬ್ಯಾಂಕ್‌ಗಳಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದು ಸಹಕಾರಿ ಇಲಾಖೆ ಉಪನಿಬಂಧಕರು ಸಭೆಯಲ್ಲಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next