ಬಾಗಲಕೋಟೆ: ಜಿಲ್ಲೆಯಲ್ಲಿ ಆರು ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, ಜಾನುವಾರುಗಳಿಗೆ ನೀರು-ಮೇವು ಒದಗಿಸಲು ಜಿಲ್ಲಾಡಳಿತ ಪ್ರಯಾಸ ಪಡುತ್ತಿದೆ.
ಜಿಲ್ಲೆಯಲ್ಲಿ 4,65,563 (ಎಮ್ಮೆ, ಎತ್ತು, ಹಸು) ಜಾನುವಾರುಗಳಿದ್ದು, ಮೇವಿನ ಸಮಸ್ಯೆ ಇಲ್ಲ. ಆದರೆ, ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಒಂದಷ್ಟು ಗಂಭೀರ ಪ್ರಯತ್ನದಲ್ಲಿ ಜಿಲ್ಲಾಡಳಿತ ತೊಡಗಿದೆ. ಜಿಲ್ಲೆಯ ಆರು ತಾಲೂಕುಗಳ ಪೈಕಿ ಜಮಖಂಡಿ ತಾಲೂಕಿನಲ್ಲಿ ಅತೀ ಹೆಚ್ಚು 1,53,643 ಜಾನುವಾರುಗಳಿದ್ದು, ಇಲ್ಲಿ 46,562 ಮೆಟ್ರಿಕ್ ಟನ್ ಮೇವು ಇದ್ದು, ಅದು ಮುಂದಿನ 9 ವಾರಗಳವರೆಗೆ ಸಾಕಾಗಲಿದೆ ಎಂದು ಅಂದಾಜಿಸಲಾಗಿದೆ. ಜಮಖಂಡಿ ಹೊರತುಪಡಿಸಿದರೆ, ಬಾದಾಮಿ-ಮುಧೋಳ ತಾಲೂಕಿನಲ್ಲಿ ಅತಿ ಹೆಚ್ಚು ಜಾನುವಾರುಗಳಿದ್ದು, ಹುನಗುಂದದಲ್ಲಿ 17 ವಾರ, ಮುಧೋಳದಲ್ಲಿ 9 ವಾರಕ್ಕೆ ಆಗುವಷ್ಟು ಮೇವಿದೆ. ಜಿಲ್ಲೆಯಲ್ಲಿ ಸದ್ಯ 1.69 ಲಕ್ಷ ಮೆಟ್ರಿಕ್ ಮೇವು ಲಭ್ಯವಿದೆ.
ಮೇವು ಖರೀದಿ-ಗೋ ಶಾಲೆಗೆ ಸಿದ್ಧತೆ: ಜಿಲ್ಲೆಯ ಜಾನುವಾರುಗಳ ಅಗತ್ಯಕ್ಕೆ ಸಾಕಾಗುವಷ್ಟು ಮೇವು ಸಂಗ್ರಹವಿದ್ದು, ಹೀಗಾಗಿ ಗೋ ಶಾಲೆ ಆರಂಭಿಸುವ ಪ್ರಮೇಯ ಬಂದಿಲ್ಲ. ಗೋ ಶಾಲೆಗಾಗಿ ಜಿಲ್ಲೆಯ ಯಾವ ಭಾಗದಿಂದಲೂ ಬೇಡಿಕೆ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು.
ಸದ್ಯ ಜಿಲ್ಲೆಯಲ್ಲಿ 10 ವಾರಕ್ಕಾಗುವಷ್ಟು ಮೇವಿದೆ. ಅಲ್ಲದೇ ಬಾದಾಮಿ ಎಪಿಎಂಸಿಯಲ್ಲಿ 8.11 ಮೆಟ್ರಿಕ್ ಟನ್, ಬಾಗಲಕೋಟೆ ಎಪಿಎಂಸಿಯಲ್ಲಿ 8.05 ಮೆಟ್ರಿಕ್ ಟನ್ ಒಣ ಮೇವು (ಭಪರ್ ಸ್ಟಾಕ್) ಸಂಗ್ರಹಿಸಲಾಗಿದೆ. ಒಂದು ವೇಳೆ ಮೇವಿನ ಸಮಸ್ಯೆ, ಗೋ ಶಾಲೆ ತೆರೆಯಬೇಕಾದ ಅನಿವಾರ್ಯತೆ ಎದುರಾದರೆ ಅದಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಆಯಾ ತಹಶೀಲ್ದಾರರು ತಮ್ಮ ತಾಲೂಕಿನಲ್ಲಿ ಮೇವಿನ ಅವಶ್ಯಕತೆಗೆ ಅನುಗುಣವಾಗಿ ಮೇವು ಖರೀದಿಗೂ ಅನುಮತಿ ನೀಡಲಾಗಿದೆ. ಸದ್ಯ ಅಂತಹ ಪರಿಸ್ಥಿತಿ ಬಂದಿಲ್ಲ ಎಂದು ಡಿಸಿ ವಿವರಿಸಿದರು.
ಹಸಿರು ಮೇವು: ಜಿಲ್ಲೆಯಲ್ಲಿ ಒಣ ಮೇವು ಸಾಕಷ್ಟು ಸಂಗ್ರಹವಿದೆ. ಅಲ್ಲದೇ ಬಹುತೇಕ ಕಬ್ಬು ಬೆಳೆಯುವ ಪ್ರದೇಶಗಳಿದ್ದು, ಮೇವಿನ ಕೊರತೆ ನೀಗಿಸಿವೆ. ನೀರಾವರಿ ಸೌಲಭ್ಯ ಹೊಂದಿದ ರೈತರಿಗೆ 32,431 ಮೇವಿನ ಬೀಜದ ಮಿನಿ ಕಿಟ್ ಪೂರೈಸಿದ್ದು, ಇದರಿಂದ 32,431 ಮೆಟ್ರಿಕ್ ಟನ್ ಮೇವು ಲಭ್ಯವಾಗುವ ನಿರೀಕ್ಷೆ ಇದೆ. ಇದು 32,405 ರೈತರು ತಮ್ಮಲ್ಲಿರುವ ಜಾನುವಾರುಗಳಿಗೆ ನೀಡಲು ಬಳಸಲು ತಿಳಿಸಲಾಗಿದೆ ಎಂದು ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ರಾಘವೇಂದ್ರ ಹೆಗಡೆ ‘ಉದಯವಾಣಿ’ಗೆ ತಿಳಿಸಿದರು.
•ಶ್ರೀಶೈಲ ಕೆ. ಬಿರಾದಾರ