ತುಮಕೂರು: ಅಧಿಕಾರಿಗಳು ಬರಗಾಲದ ಈ ಪರಿಸ್ಥಿತಿಯನ್ನು ಅರಿತು ಕೆಲಸ ಮಾಡಬೇಕು. ಸುಳ್ಳು ಅಂಕಿ-ಅಂಶಗಳನ್ನು ನೀಡಿದರೆ ಸಹಿಸುವುದಿಲ್ಲ. ಜಿಲ್ಲೆ ಯಲ್ಲಿರುವ ಜಾನುವಾರುಗಳ ಅಂಕಿ-ಅಂಶಗಳನ್ನು ನೀಡುವಲ್ಲಿ ಲೋಪ ಮಾಡಿರುವ ಪಶುಸಂಗೋ ಪನೆಯ ಉಪ ನಿರ್ದೇಶಕರಿಗೆ ನೋಟಿಸ್ ನೀಡಿ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಪರಿಹಾರ ಕಾರ್ಯಗಳ ಬಗ್ಗೆ ಪ್ರಗತಿ ಪರಿಶೀಲನೆ ವೇಳೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಎಲ್. ಪ್ರಕಾಶ್ ಜಿಲ್ಲೆಯಲ್ಲಿ 7,08,185 ಜಾನುವಾರುಗಳು ಇವೆ ಎಂದು ಮಾಹಿತಿ ನೀಡುತ್ತಾಲೇ, ಸಿಡಿಮಿಡಿಗೊಂಡ ಡಿಸಿಎಂ ಡಾ.ಪರಮೇಶ್ವರ್, ಕಳೆದ ಸಭೆಯಲ್ಲಿ 7,28,185 ಜಾನುವಾರುಗಳು ಇವೆ ಎಂದು ಅಂಕಿ-ಅಂಶ ಕೊಟ್ಟಿದ್ದೀರಿ. ಈಗ ಈ ರೀತಿ ಅಂಕಿ-ಅಂಶಗಳನ್ನು ನೀಡಿದ್ದೀರಿ ಉಳಿದ 14,000 ಜಾನುವಾರುಗಳು ಎಲ್ಲಿ ಹೋಗಿವೆ ತಿಳಿಸಿ ಎಂದು ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಅಧಿಕಾರಿ, ಪ್ರಿಟಿಂಗ್ ಸಮಸ್ಯೆ ಯಿಂದ ಅ ರೀತಿಯಾಗಿದೆ. ಜಿಲ್ಲೆಯಲ್ಲಿ 7,08185 ಜಾನುವಾರುಗಳು ಮಾತ್ರ ಇವೆ ಎಂದು ಉತ್ತರಿ ಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಸಭೆಗೆ ಬರುವಾಗ ಅಂಕಿ-ಅಂಶಗಳನ್ನು ಸರಿಯಾಗಿ ತನ್ನಿ. ನಾನು ಕಳೆದ ಸಭೆಯಲ್ಲಿ ಆದ ಅಂಕಿ-ಅಂಶಗಳನ್ನು ಇಟ್ಟಿರುತ್ತೇನೆ. ಅಂಕಿ-ಅಂಶಗಳು ವ್ಯತ್ಯಾಸವಾಗಬಾರದು ಎಂದು ಹೇಳುತ್ತಾ ಸಭೆಯಲ್ಲಿ ಸರಿಯಾಗಿ ಮಾಹಿತಿ ನೀಡದ ಇವರಿಗೆ ನೋಟಿಸ್ ನೀಡಿ ಎಂದು ಸೂಚಿಸಿದರು.
ಪ್ರತಿನಿತ್ಯ ನೀರು ಪೂರೈಕೆ ಮಾಡಿ: ಜಿಲ್ಲೆ ತೀವ್ರ ಬರದಿಂದ ತತ್ತರಿಸಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ನರೇಗಾ ಯೋಜನೆಯಡಿ ದುಡಿಯಲು ಕೆಲಸ ಒದಗಿಸಲು ತುರ್ತು ಕ್ರಮ ಕೈಕೊಳ್ಳಬೇಕು. ಜಿಲ್ಲೆಯಲ್ಲಿ ಡೀಸಿ ಹಾಗೂ ಜಿಪಂ ಸಿಇಒ ಸಮಪರ್ಕವಾಗಿ ಬರನಿರ್ವಹಣೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಇರುವ ಕಡೆ, ಹೊಸದಾಗಿ ಬೋರ್‌ವೆಲ್ ಕೊರೆಯಲಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸಿ, ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯ 74 ಗ್ರಾಪಂಗಳ 122 ಗ್ರಾಮಗಳಿಗೆ 455 ಟ್ರಿಪ್‌ಗ್ಳಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 182 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿದ್ದು, ಪ್ರತಿ ಕೊಳವೆಬಾವಿಗೆ ಮಾಸಿಕ 16 ಸಾವಿರ ರೂ.ಗಳಿಂದ 18 ಸಾವಿರ ರೂ.ಗಳವರೆಗೆ ಬಾಡಿಗೆ ಹಣ ಪಾವತಿಸಿ ನೀರು ಪಡೆಯಲಾಗುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ ಪ್ರತಿ ವ್ಯಕ್ತಿಗೆ 40 ಲೀಟರ್‌ನಂತೆ ಪ್ರತಿನಿತ್ಯ ನೀರು ಪೂರೈಕೆ ಮಾಡಬೇಕು ಎಂದು ತಿಳಿಸಿದರು.
ಕುಡಿಯುವ ನೀರಿಗೆ ಆದ್ಯತೆ ನೀಡಿ: ಜಿಲ್ಲೆಯಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಆರ್‌ಓ ಪ್ಲಾಂಟ್‌ಗಳ ಕಾರ್ಯನಿರ್ವಹಣೆಯ ಬಗ್ಗೆ ಪ್ರತಿನಿತ್ಯ ಎಂಜಿನಿಯರ್‌ಗಳು ಪರಿಶೀಲನೆ ನಡೆಸ ಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಬಾರದು. ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಜಿಲ್ಲೆ ಯಲ್ಲಿರುವ ಎಲ್ಲಾ ಆರ್‌ಒ ಪ್ಲಾಂಟ್‌ಗಳನ್ನು ಸುಸ್ಥಿತಿ ಯಲ್ಲಿಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ಮಾಡಿದರು.
ಜಿಲ್ಲೆಯಲ್ಲಿ 21 ಮೇವು ಬ್ಯಾಂಕ್ ಸ್ಥಾಪನೆ: ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ.ಪ್ರಕಾಶ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ 7,08,175 ದನ ಮತ್ತು ಎಮ್ಮೆಗಳಿದ್ದು, ರೈತರ ದಾಸ್ತಾನಿ ನಲ್ಲಿ 2,64,519 ಟನ್ ಒಣಮೇವು ಲಭ್ಯವಿದೆ. ಲಭ್ಯವಿರುವ ಮೇವು ಇನ್ನೂ 11 ವಾರಗಳಿಗೆ ಸಾಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಬರ ಪೀಡಿತ ಜಿಲ್ಲೆಯೆಂದು ಘೋಷಣೆಯಾಗುವ ಮುನ್ನವೇ ರೈತರಿಗೆ ಮೇವಿನ ಕಿರು-ಪೊಟ್ಟಣಗಳನ್ನು ವಿತರಿಸಲಾಗಿತ್ತು. ಇದರಿಂದ 7,35,237 ಟನ್‌ಗಳಷ್ಟು ಹಸಿರು ಮೇವು ಉತ್ಪಾದನೆಯಾಗಿದೆ. ಪ್ರತಿ ವಾರ ಜಿಲ್ಲೆಯಲ್ಲಿ ಮೇವು ಲಭ್ಯತೆಯ ಬಗ್ಗೆ ಅಂದಾಜಿಸಿ, ಸರ್ಕಾರಕ್ಕೆ ಹಾಗೂ ಡೀಸಿಗೆ ವರದಿ ಸಲ್ಲಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 21 ಮೇವು ಬ್ಯಾಂಕ್‌ಗಳನ್ನು ಪ್ರಾರಂಭಿಸಿ ಮೇವನ್ನು ವಿತರಿಸಲಾಗುತ್ತಿದೆ ಎಂದರು.
ಯಾವುದೇ ಅನುಮತಿಗೆ ಕಾಯದಿರಿ: ಈ ವೇಳೆ ಅಧಿಕಾರಿಗಳಿಗೆ ಎಚ್ಚರಿಸಿದ ಡಿಸಿಎಂ, ಜಿಲ್ಲೆಯಲ್ಲಿರುವ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲೂ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು. ಕುಡಿಯುವ ನೀರಿಗೆ ಸಮಸ್ಯೆ ಉಂಟಾದರೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ನೀರು ಪೂರೈಸಬೇಕು. ಯಾವುದೇ ಅನುಮತಿಗಾಗಿ ಕಾಯಬಾರದು. ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಡೀಸಿ ಹಾಗೂ ಜಿಪಂ ಸಿಇಒಗೆ ಸೂಚನೆ ನೀಡಿದರು.
ಸಭೆಯಲ್ಲಿ ಡೀಸಿ ಡಾ.ಕೆ.ರಾಕೇಶ್ ಕುಮಾರ್, ಜಿಪಂ ಸಿಇಒ ಶುಭಾ ಕಲ್ಯಾಣ್, ಪಾಲಿಕೆ ಆಯುಕ್ತ ಟಿ. ಭೂಬಾಲನ್ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.