Advertisement

ಮುದಗಲ್ಲ ಭಾಗದಲ್ಲಿ ಕಾಡಿದ ಬರ!

11:40 AM Mar 18, 2019 | Team Udayavani |

ಮುದಗಲ್ಲ: ಕೊಳವೆ ಬಾವಿ ಮತ್ತು ಮಳೆಯನ್ನೇ ಆಶ್ರಯಿಸಿರುವ ಮುದಗಲ್ಲ ಭಾಗದ ರೈತರು ಕಳೆದ ಎರಡು ವರ್ಷದಿಂದ ಬರದ ಬವಣೆ ಎದುರಿಸುತಿದ್ದಾರೆ.ಈ ಭಾಗದಲ್ಲಿ ಮುಂಗಾರು-ಹಿಂಗಾರು ಹಂಗಾಮಿಗೆ ವರ್ಷದಲ್ಲಿ 609 ಎಂಎಂ ಮಳೆ ನಿರೀಕ್ಷೆ ಇತ್ತು. ಆದರೆ ಆಗಿರುವುದು ಕೇವಲ 316 ಎಂಎಂ ಮಳೆ ಮಾತ್ರ.

Advertisement

ಇದರಿಂದ ಈ ಭಾಗದಲ್ಲಿ ಶೇ.82 ಮುಂಗಾರು-ಹಿಂಗಾರು ಬೆಳೆ ನಷ್ಟವಾಗಿದ್ದರೆ, ಮತ್ತೂಂದೆಡೆ ಕೆರೆಗಳಲ್ಲಿ ಹನಿ ನೀರಿಲ್ಲದೆ
ಒಣಗಿರುವುದು ಕಂಡು ಬರುತ್ತಿದೆ. ತಾಲೂಕಿನಲ್ಲೇ ಮುದಗಲ್ಲ ಭಾಗದಲ್ಲಿ ಅತಿ ಹೆಚ್ಚು ಬೆಳೆ ನಷ್ಟವಾಗಿರುವುದು ಇಲಾಖೆಯ
ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. 

ಕಳೆದ ವರ್ಷ ಇದ್ದುದರಲ್ಲಿಯೇ ಅಲ್ಪ ಸ್ವಲ್ಪ ಮಳೆಯಾಗಿದ್ದರಿಂದ ರೈತರು ಬದುಕಿಗೆ ಬೇಕಾಗುವಷ್ಟು ಬೆಳೆ ಬೆಳೆದಿದ್ದರು. ಆದರೆ ಈ ವರ್ಷ ಮುಂಗಾರು-ಹಿಂಗಾರು ಸೇರಿ ಎರಡೂ ಬೆಳೆ ಬಾರದೆ ರೈತರು ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ಲಿಂಗಸುಗೂರು ತಾಲೂಕನ್ನು ಬರಗಾಲ ಪ್ರದೇಶ ಪಟ್ಟಿಗೆ ಸೇರಿಸಿ ಜನರಿಗೆ ಹಲವು ಸೌಕರ್ಯ ಕಲ್ಪಿಸಲು ಯೋಜನೆ ರೂಪಿಸಿದೆ.

ಕೈ ಕೊಟ್ಟ ಖಾತ್ರಿ: ಗ್ರಾಮೀಣ ಜನರು ಬರದಿಂದ ತತ್ತರಿಸಿ ಗುಳೆ ಹೋಗದಂತೆ ತಡೆಯಲು ಉದ್ಯೋಗ ಖಾತ್ರಿ ಯೋಜನೆ
ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರೂ ಗ್ರಾಪಂ ಮಟ್ಟದಲ್ಲಿ ಖಾತ್ರಿ ಇನ್ನೂ ಸರಿಯಾಗಿ ಕಾರ್ಯಾರಂಭಗೊಂಡಿಲ್ಲ. 

ಮುದಗಲ್ಲ ಭಾಗದ ನಾಗಲಾಪುರ, ಹೂನೂರು, ಬನ್ನಿಗೋಳ, ಆಮದಿಹಾಳ, ನಾಗರಹಾಳ, ಹಲ್ಕಾವಟಗಿ, ಖೈರವಾಡಗಿ,
ಉಪ್ಪರನಂದಿಹಾಳ, ಕಾಚಾಪುರ ಸೇರಿದಂತೆ ಅನೇಕ ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಿಂದ ಖಾತ್ರಿ ಕೆಲಸದಲ್ಲಿ ದುಡಿದ ಕೂಲಿಕಾರರಿಗೆ ಇದುವರೆಗೂ ಕೂಲಿ ಪಾವತಿಯಾಗಿಲ್ಲ ಎಂದು ಹೇಳಲಾಗುತ್ತಿದೆ. 

Advertisement

ಬಿತ್ತನೆಯ ಗುರಿ-ಬೆಳೆ ನಷ್ಟ: ಮುದಗಲ್‌ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಒಟ್ಟು 50 ಹಳ್ಳಿಗಳಲ್ಲಿ ನೀರಾವರಿ(ಪಂಪ್‌ ಸೆಟ್‌) ಹಾಗೂ ಖುಷ್ಕಿ ಸೇರಿ ಒಟ್ಟು ಮುಂಗಾರು ಬಿತ್ತನೆ 18,324 ಹೆಕ್ಟೇರ್‌ ಪ್ರದೇಶ ಗುರಿ ಇದೆ. ಇದರಲ್ಲಿ ಹಿಂಗಾರು ಹಂಗಾಮಿಗೆ ಮುಂದುವರಿಯುವ ಬೆಳೆಯೂ ಸೇರಿ ಒಟ್ಟು 21,231 ಹೆಕ್ಟೇರ್‌ ಪ್ರದೇಶ ಬಿತ್ತನೆಯಾಗಿದೆ.

ಹಿಂಗಾರಿ ನೀರಾವರಿ ಪ್ರದೇಶ 4445 ಹೆ., ಖುಷ್ಕಿ 19,990 ಹೆ. ಸೇರಿ ಒಟ್ಟು 24,435 ಹೆ. ಗುರಿಯಲ್ಲಿ ನೀರಾವರಿ ಪ್ರದೇಶ 1829 ಹಾಗೂ ಖುಷ್ಕಿ 11,976 ಸೇರಿ ಒಟ್ಟು 21,805 ಹೆ.ನಷ್ಟು ಬೆಳೆ ಬಿತ್ತನೆಯಾಗಿತ್ತು. ಇದರಲ್ಲಿ ಹಿಂಗಾರು ಹಂಗಾಮಿನ ಜೋಳ 4441, ಗೋಧಿ 200, ಕಡಲೆ 11,901, ಸೂರ್ಯಕಾಂತಿ 626 ಹಾಗೂ ಕುಸುಬಿ 62 ಸೇರಿ ಒಟ್ಟು 17,230. ಹೆ.ನಷ್ಟು. ಹಾಗೂ ಮುಂಗಾರು ಹಂಗಾಮಿನ ಸಜ್ಜೆ 4138, ತೊಗರಿ 3895, ಸೂರ್ಯಕಾಂತಿ 200 ಹಾಗೂ ಹೆಸರು 551 ಸೇರಿ ಒಟ್ಟು 8,784 ಹೆ. ಅಂದರೆ ಶೇ.82 ರಷ್ಟು ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಒಂದೆಡೆ ತುಂಗಭದ್ರಾ, ಮತ್ತೂಂದೆಡೆ ನಾರಾಯಣಪುರ ಬಲದಂಡೆ ಕಾಲುವೆಗಳು ಹಾಯ್ದು ಹೋಗಿದ್ದರೂ ಮುದಗಲ್ಲ ಭಾಗ ಮಾತ್ರ ನೀರಾವರಿ ಸೌಲಭ್ಯದಿಂದ ವಂಚಿತವಾದಂತಾಗಿದೆ. ಹೀಗಾಗಿ ಜನರು ಉದ್ಯೋಗ ಅರಸಿ ದೂರದ ಊರುಗಳಿಗೆ ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 

ಕಳೆದ ಎರಡು ವರ್ಷದಿಂದ ರೈತರು ಬೆಳೆ ನಷ್ಟ ಅನುಭವಿಸುತಿದ್ದಾರೆ. ಆದರೆ ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಮತ್ತೂಂದೆಡೆ ಗೋಶಾಲೆ ಆರಂಭವಾಗಿಲ್ಲ. ಜಾನುವಾರುಗಳಿಗೆ ನೀರು, ಮೇವು ಸಿಗದೆ ರೈತರು ಸಂಕಷ್ಟಪಡುವಂತಾಗಿದೆ. ಇದರಿಂದ ಜನ ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 
 ಅಮರಣ್ಣ ಗುಡಿಹಾಳ, ರಾಜ್ಯ ರೈತ ಸಂಘದ ಮುಖಂಡ.

ದೇವಪ್ಪ ರಾಠೊಡ

Advertisement

Udayavani is now on Telegram. Click here to join our channel and stay updated with the latest news.

Next