ಹೈದರಾಬಾದ್ : ಪ್ರಧಾನಿ ನರೇಂದ್ರ ಮೋದಿ ಅವರ 67ನೇ ಹುಟ್ಟು ಹಬ್ಬಕ್ಕೆ ಬರಪೀಡಿತ ರಾಯಲಸೀಮೆ ಪ್ರಾಂತ್ಯದ ರೈತರು ವಿಶೇಷ ಉಡುಗೊರೆಯನ್ನು ಕಳುಹಿಸಿದ್ದಾರೆ
– ಅದೆಂದರೆ ತಲಾ 68 ಪೈಸೆಗಳ 400 ಚೆಕ್‌ಗಳು !
ಇದು ನಿಮ್ಮ ಹುಟ್ಟು ಹಬ್ಬಕ್ಕೆ ನಮ್ಮಿಂದ ಕೊಡಲು ಸಾಧ್ಯವಿರುವ ಗರಿಷ್ಠ ಉಡುಗೊರೆಯಾಗಿದೆ ಎಂದು ರೈತರು ಹೇಳಿದ್ದಾರೆ.
ಬರ ಪೀಡಿತ ರಾಯಲಸೀಮೆ ಪ್ರಾಂತ್ಯದ ರೈತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಲಾಭದ ಉದ್ದೇಶವಿಲ್ಲದ “ರಾಯಲಸೀಮಾ ಸಗುಣೀತಿ ಸಾಧನಾ ಸಮಿತಿ (ಆರ್‌ಎಸ್‌ಎಸ್‌ಎಸ್)’ ಎಂಬ ಸರಕಾರೇತರ ಸೇವಾ ಸಂಘಟನೆಯು ರೈತರ ಪರವಾಗಿ ಪ್ರಧಾನಿ ಮೋದಿ ಅವರಿಗೆ ತಲಾ 68 ಪೈಸೆಗಳ 400 ಚೆಕ್‌ಗಳನ್ನು ಕಳುಹಿಸಿಕೊಟ್ಟಿದೆ.
ರಾಯಲಸೀಮೆ ಪ್ರಾಂತ್ಯದ ನಾಲ್ಕು ತೀವ್ರ ಬರಪೀಡಿತ ಜಿಲ್ಲೆಗಳಾದ ಕರ್ನೂಲ್, ಕಡಪ, ಅನಂತಪುರ ಮತ್ತು ಚಿತ್ತೂರು – ಇಲ್ಲಿನ ರೈತಾಪಿ ಜನರ ದಯನೀಯ ಮತ್ತು ಗಂಭೀರ ಬವಣೆಯನ್ನು ಪ್ರಧಾನಿಗೆ ಅವರ ಹುಟ್ಟಿದ ಹಬ್ಬದ ಸಂದರ್ಭದಲ್ಲಿ ಮನವರಿಕೆ ಮಾಡಿಕೊಡುವುದೇ ಈ ವಿಶೇಷ ಉಡುಗೊರೆಯ ಹಿಂದಿನ ಆಶಯವಾಗಿದೆ ಎಂದು ಸಂಘಟನೆಯು ಹೇಳಿದೆ.
ಕೇಂದ್ರ ಸರಕಾರವು ಬರಪೀಡಿತ ರಾಯಲಸೀಮೆ ಪ್ರಾಂತ್ಯದ ಬಡ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಸಂಘಟನೆಯು ಆರೋಪಿಸಿದೆ.