Advertisement
ಜಿಲ್ಲೆಯಲ್ಲಿ ಇಷ್ಟೊತ್ತಿಗಾಗಲೇ ಬಿತ್ತನೆ ಕಾರ್ಯ ಶೇ.25 ಮುಗಿಯಬೇಕಾಗಿತ್ತು. ಆದರೆ ಮಳೆರಾಯನ ಮುನಿಸು ಮುಂದುವರಿದಿರುವುದರಿಂದ ಬಿತ್ತನೆ ಕಾರ್ಯ ಇನ್ನೂ ಆರಂಭವಾಗಿಲ್ಲ. ಮಳೆಯಾಗಬಹುದೆಂಬ ಆಶಾಭಾವನೆಯಿಂದ ರೈತರು ಬಿತ್ತನೆ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
Related Articles
Advertisement
ಕೃಷಿ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ರೈತ ಸಂಪರ್ಕ ಕೇಂದ್ರಗಳಿಗೆ ರೈತರ ಬೇಡಿಕೆಗೆ ತಕ್ಕಂತೆ ಅಗತ್ಯ ಬಿತ್ತನೆ ಬೀಜ ಪೂರೈಕೆ ಮಾಡಲಾಗಿದೆ ಎಂದು ಹೇಳುತ್ತಿದ್ದರೂ ಸಾಮಾನ್ಯ ರೈತಾಪಿ ಜನಕ್ಕೆ ಮಾತ್ರ ರೈತ ಸಂಪರ್ಕ ಕೇಂದ್ರಗಳು ಇದ್ದು ಇಲ್ಲದಂತೆ ಆಗಿದೆ.
ಇದಕ್ಕೆ ತಾಜಾ ಉದಾಹರಣೆ ಜಿಲ್ಲೆಯ ಬಾಗೇಪಲ್ಲಿ, ಚಿಂತಾಮಣಿ ತಾಲೂಕುಗಳಲ್ಲಿ ರೈತ ಸಂಪರ್ಕ ಕೇಂದ್ರಗಳು ಅವ್ಯವಸ್ಥೆಯಿಂದ ಕೂಡಿ ಕೇಳಿದ ಬಿತ್ತನೆ ಬೀಜ ಕೊಡದೇ ರೈತರನ್ನು ಅಲೆದಾಡಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಸಿಬ್ಬಂದಿ ಬಂಧು ಬಳಗಕ್ಕೆ: ರೈತ ಸಂಪರ್ಕ ಕೇಂದ್ರಗಳು ರೈತರ ಪರವಾಗಿರಬೇಕಾದದ್ದು, ಬಿಟ್ಟು ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಬಂಧು ಬಳಗ ಮತ್ತು ಬೇಕಾದವರಿಗೆ ಮಾತ್ರ ಬಿತ್ತನೆ ಬೀಜ, ಶೇಂಗಾ ದೊರೆಯುತ್ತಿದೆ. ಪ್ರಶ್ನಿಸಿದವರಿಗೆ ಉಡಾಫೆಯ ಉತ್ತರಗಳು ನೀಡಿ ದಿನನಿತ್ಯ ರೈತರು ಬಿತ್ತನೆ ಬೀಜಕ್ಕಾಗಿ ಪರದಾಡುವಂತೆ ಮಾಡುತ್ತಿದ್ದಾರೆ ಎಂದು ಜಿಲ್ಲೆಯ ಬಾಗೇಪಲ್ಲಿ ಮತ್ತಿತರ ತಾಲೂಕುಗಳಿಂದ ಕೇಳಿ ಬರುತ್ತಿವೆ.
ಹಣ ಕೊಡಬೇಕು: ಇಲಾಖೆ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ ಅಲ್ಲಿಯೇ ಬಿತ್ತನೆ ಬೀಜಗಳು ಸಿಗುತ್ತವೆ ಎಂದು ಹೇಳಿ ಕಳಿಸುತ್ತಾರೆ. ಆದರೆ ನಾವು ಅಲ್ಲಿ ಹೋದರೆ ಕಾಸು ಕೊಟ್ಟರೆ ಬಿತ್ತನೆ ಬೀಜ ಕೊಡುತ್ತಾರೆ. ಇಲ್ಲಾಂದ್ರೆ ಕೇಳಿದ ಬಿತ್ತನೆ ಬೀಜ ಇನ್ನೂ ಬಂದಿಲ್ಲ ಎನ್ನುತ್ತಾರೆ.
ಇದ್ದರೂ ಇಲ್ಲಸಲ್ಲದ ದಾಖಲೆಗಳನ್ನು ತಂದು ಕೊಡಿಯೆಂದು ಹೇಳುತ್ತಾರೆಂದು ರೈತರು ಹೇಳಿದ್ದಾರೆ. ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳು ಒಂದು ಕಡೆ ಇದ್ದರೆ ಬಿತ್ತನೆ ಬೀಜದ ದಾಸ್ತಾನು ಕೊಠಡಿಗಳು ಮತ್ತೂಂದು ಕಡೆ ಇವೆ. ಅಲ್ಲಿ ಎಲ್ಲಾ ಹಣದ ಲೆಕ್ಕಾಚಾರ.
ಬಹುತೇಕ ಕಟ್ಟಡಗಳಿಗೆ ನಾಮಫಲಕಗಳು ಇಲ್ಲ. ತೂಕ, ಗುಣಮಟ್ಟದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸುವಂತಿಲ್ಲ. ಅವರು ಕೊಟ್ಟದ್ದನ್ನು ತೆಗೆದುಕೊಂಡು ಹೋಗಬೇಕು. ನೆಲೆಗಡಲೆಗೆ ಭಾರೀ ಬೇಡಿಕೆ ಇದ್ದರೂ ರೈತ ಸಂಪರ್ಕ ಕೇಂದ್ರಗಳಲ್ಲಿ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ಸಿಗುತ್ತಿಲ್ಲ ಎಂಬ ಆರೋಪ ಜಿಲ್ಲೆಯ ರೈತರಿಂದ ಕೇಳಿ ಬರುತ್ತಿದೆ.
ಒಟ್ಟಾರೆ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವ ಗಾದೆಯಂತೆ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಿಗೆ ಬಿತ್ತನೆ ಬೀಜ ಪೂರೈಕೆಯಾದರೂ ಮಧ್ಯವರ್ತಿಗಳ ಹಾಗೂ ಬಲಾಡ್ಯರ ಪಾಲಾಗಿ ಬಡ ರೈತರು ಪರದಾಡುವುದು ಸಾಮಾನ್ಯವಾಗಿದೆ. ಈ ಬಗ್ಗೆ ಜಿಲ್ಲೆಯ ಉಸ್ತುವಾರಿ ಸಚಿವ, ಕೃಷಿ ಸಚಿವರು ಇತ್ತಕಡೆ ಗಮನ ಹರಿಸಿ ರೈತರಿಗೆ ಅಗತ್ಯ ಬಿತ್ತನೆ ಬೀಜ ಸಮರ್ಪಕವಾಗಿ ಕೈಗೆಟುಕುವಂತೆ ಕೃಷಿ ಇಲಾಖೆಯನ್ನು ಕ್ರಿಯಾಶೀಲಗೊಳಿಸುವ ಕಾರ್ಯ ಮಾಡಬೇಕಿದೆ.
● ಕಾಗತಿ ನಾಗರಾಜಪ್ಪ