ನರೇಗಲ್ಲ: ಬರಗಾಲ ಅನ್ನದಾತನ ಬದುಕಿಗೆ ಮತ್ತೂಮ್ಮೆ ಬರೆ ಎಳೆದಿದೆ. ಮಳೆ ಕೊರತೆಯಿಂದ ಬೆಳೆಗಳು ಒಣಗಿದ್ದು, ಕೀಟ ಬಾಧೆಯೂ ಕೆಲವೆಡೆ ಕಂಡುಬರುತ್ತಿದೆ. ಇದರಿಂದ ರೈತರು ತತ್ತರಿಸಿಹೋಗಿದ್ದಾರೆ. ಒಂದೊಮ್ಮೆ ಮಳೆಯಾದರೆ ಹೊಸ ಬೆಳೆ ತೆಗೆಯುವ ಉದ್ದೇಶದಿಂದ ಒಣಗಿ ನಿಂತ ಬೆಳೆಗಳನ್ನು ಹರಗುವ (ಹಾಳು ಮಾಡುವ)ಕೆಲಸವನ್ನು ಹೋಬಳಿ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ರೈತರು ಮುಂದುವರಿಸಿದ್ದಾರೆ.
ಕಳೆದ ಜೂನ್ ತಿಂಗಳ ಮುಂಗಾರು ಆರಂಭದಲ್ಲಿ ಮಳೆಯು ಬಿತ್ತನೆಗೆ ಆಸೆ ತೋರಿಸಿದ್ದರಿಂದ ರೈತರು ಹತ್ತಿ, ಹೆಸರು, ಸೂರ್ಯಕಾಂತಿ, ಮೆಕ್ಕೆಜೋಳ, ತೊಗರಿ, ಅಲಸಂದಿ, ಈರುಳ್ಳಿ, ಮೆಣಸಿಕಾಯಿ ಸೇರಿದಂತೆ ನಾನಾ ಬೆಳೆಯನ್ನು ಬಿತ್ತನೆ ಮಾಡಿದ್ದರು. ಬಿತ್ತನೆ ಬಳಿಕ ಒಮ್ಮೆಯು ಕೂಡ ಮಳೆ ಸರಿಯಾಗಿ ಸುರಿದಿಲ್ಲ. ಹೀಗಾಗಿ ಬೆಳೆದು ನಿಂತ ಬೆಳೆ ಒಣಗಿ ಸಂಪೂರ್ಣ ಹಾಳಾಗಿದೆ. ರವಿವಾರ ಜಕ್ಕಲಿ ಗ್ರಾಮದ ರೈತರು ಅಲಸಂದಿ ಬೆಳೆಯನ್ನು ನಾಶಪಡಿಸಿದ್ದಾರೆ. ಸುಮಾರು 21 ಎಕರೆ ಜಮೀನಿನಲ್ಲಿ ಅಲಸಂದಿ ಬೆಳೆದಿದ್ದರು. ಮಳೆ ಮತ್ತು ಕೀಟ ಬಾಧೆಯಿಂದ ಇಳುವರಿ ಒಣಗಲು ಶುರುವಾಗಿತ್ತು. ಜಮೀನಿನಲ್ಲಿ ಬೆಳೆ ಬಿಟ್ಟರೆ ಮತ್ತಷ್ಟು ಹಾನಿಯಾಗುವ ಸಾಧ್ಯತೆ ಅರಿತು ಟ್ರ್ಟಾಕ್ಟರ್ ಬಳಸಿ ನಾಶಗೊಳಿಸಿದ್ದಾರೆ. ಆದರೆ, ಅನ್ನದಾತನ ಕೈಗೆ ಹತ್ತು ಪೈಸೆಯೂ ಬಂದಿಲ್ಲ.
15 ಸಾವಿರ ಹೆಕ್ಟೇರ್ ಬಿತ್ತನೆ: ಹೋಬಳಿ ವ್ಯಾಪ್ತಿಯ ಒಟ್ಟು ಕ್ಷೇತ್ರ 44,820 ಹೆಕ್ಟೇರ್ ಇದ್ದು, ಇದರಲ್ಲಿ ಅಂದಾಜು 15 ಸಾವಿರ ಹೆಕ್ಟೇರ್ ಮಾತ್ರ ಬಿತ್ತನೆ ಮಾಡಲಾಗಿತ್ತು. ಬಹುತೇಕ ಖುಷ್ಕಿ ಜಮೀನು ಆಗಿದ್ದು, ಹೆಸರು, ಸೂರ್ಯಕಾಂತಿ, ಜೋಳ, ಹತ್ತಿ, ಈರುಳ್ಳಿ, ಮೆಣಸಿನಕಾಯಿ, ಅಲಸಂದಿ, ತೊಗರಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಆದರೆ, ಮಳೆ ಇಲ್ಲದೆ ತೇವಾಂಶ ಕೊರತೆ, ಕೀಟ ಭಾಧೆಯಿಂದ ಬೆಳೆಗಳು ಒಣಗಿವೆ. ಹೀಗಾಗಿ ಬೆಳೆಯನ್ನು ಹರಗಲಾಗುತ್ತಿದೆ. ಜಕ್ಕಲಿ, ಮಾರನಬಸರಿ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ, ಬೂದಿಹಾಳ, ಅಬ್ಬಿಗೇರಿ, ಹೊಸಳ್ಳಿ, ಕಳಕಾಪುರ, ಡ.ಸ. ಹಡಗಲಿ, ಯರೇಬೇಲೇರಿ, ಕುರಡಗಿ, ಗುಜಮಾಗಡಿ, ನಾಗರಾಳ, ನರೇಗಲ್ಲ ಪಟ್ಟಣ ಸೇರಿದಂತೆ ವಿವಿಧ ಕಡೆಗಳಲ್ಲಿ ರೈತರಿಂದ ಹರಗುವ ಕೆಲಸ ಜೋರಾಗಿದೆ.
ಸಾವಿರಾರು ರೂ. ನಷ್ಟ : ಬಿತ್ತನೆ ಬೀಜ ಖರೀದಿ, ಬಿತ್ತುವ ಕೂಲಿ ಸೇರಿದಂತೆ ವಿವಿಧ ಕಾರ್ಯಕ್ಕೆ ಎಕರೆಗೆ ಸುಮಾರು 20-25 ಸಾವಿರ ರೂ. ಖರ್ಚು ಮಾಡಲಾಗಿದೆ. ಒಂದು ಬಾರಿ ಕ್ರಿಮಿನಾಶಕ ಸಿಂಪಡಣೆಯೂ ಮಾಡಿಯಾಗಿದೆ. ಆದರೆ, ಬೆಳೆ ಮಾತ್ರ ಕೈಗೆ ಬಾರದೇ ಬೆಳೆಯುವ ಹಂತದಲ್ಲಿಯೇ ನೆಲಸಮವಾಗುತ್ತಿದೆ. ಇದರಿಂದಾಗಿ ಈ ಬಾರಿಯೂ ರೈತರು ಪುನಃ ನಷ್ಟವನ್ನೇ ಅನುಭವಿಸುವಂತಾಗಿದೆ.
ಮುಂಗಾರು ಆರಂಭದಲ್ಲಿ ಸುರಿದ ಅಲ್ಪಸ್ವಲ್ಪ ಮಳೆ ನೆಚ್ಚಿಕೊಂಡು ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಲಾಗಿದೆ. ಆದರೆ, ತೇವಾಂಶ ಕೊರತೆಯಿಂದ ಬೆಳೆ ಸಂಪೂರ್ಣ ಒಣಗಿದೆ. ಹೀಗೆ ಬಿಟ್ಟರೆ ಯಾವ ಫಸಲೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಬೆಳೆ ಹರಗಲಾಗುತ್ತಿದ್ದು, ಮಳೆ ಸುರಿದರೆ ಮತ್ತೂಮ್ಮೆ ಬಿತ್ತನೆ ಮಾಡಬಹುದು.
–ಎಂ.ಎಸ್. ಧಡೇಸೂರಮಠ, ರೈತ
ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯು ವಾಡಿಕೆ ಪ್ರಮಾಣಕ್ಕಿಂತ ಕಡಿಮೆಯಾಗಿದೆ. ಮೆಕ್ಕೆಜೋಳದಲ್ಲಿ ಸೈನಿಕ ಹುಳು, ಶೇಂಗಾ ಹಾಗೂ ವಿವಿಧ ಬೆಳೆಗಳಿಗೆ ಕೀಟ ಬಾಧೆ ಹೆಚ್ಚಾಗಿ ಕಂಡುಬಂದಿದ್ದರಿಂದ ರೈತರು ನಿರೀಕ್ಷಿತ ಇಳುವರಿ ಪಡೆಯಲು ಸಾಧ್ಯವಾಗುತ್ತಿಲ್ಲ
. ಜಗದೀಶ ಹಾದಿಮನಿ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ.
-ಸಿಕಂದರ ಎಂ. ಆರಿ