Advertisement

ಅಧಿವೇಶನದಲ್ಲಿ ‘ಬರ’ಹೋರಾಟ

01:28 AM Jan 28, 2019 | Team Udayavani |

ಚಿತ್ರದುರ್ಗ: ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಫೆ.6 ರಿಂದ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಘೋಷಿಸಿದ್ದಾರೆ.

Advertisement

ಜಿಲ್ಲೆಯ ವಿವಿಧೆಡೆ ಭಾನುವಾರ ಬರ ಅಧ್ಯಯನ ಕೈಗೊಂಡ ಅವರು ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಇಡೀ ರಾಜ್ಯದಲ್ಲೇ ಚಿತ್ರದುರ್ಗ ಜಿಲ್ಲೆ ಭೀಕರ ಬರ ಪರಿಸ್ಥಿತಿಗೆ ಸಿಲುಕಿದೆ. ಜಿಲ್ಲೆ ಸೇರಿ ರಾಜ್ಯಾದ್ಯಂತ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಮೃತ ರೈತರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿಲ್ಲ. ಅಲ್ಲದೆ ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಅರಿಯುವ ಪ್ರಯತ್ನ ಮಾಡಿಲ್ಲ. ಬರ ಪರಿಹಾರ ಕಾಮಗಾರಿಗಳ ಪರಿಶೀಲನೆಯನ್ನೂ ಮಾಡಿಲ್ಲ ಎಂದು ವಾಗ್ಧಾಳಿ ನಡೆಸಿದರು.

ರಾಜ್ಯದ ಅನೇಕ ಕಡೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಜನ ಗುಳೆ ಹೋಗುತ್ತಿದ್ದಾರೆ. ಜಾನುವಾರುಗಳಿಗೆ ನೀರು, ಮೇವಿನ ಕೊರತೆಯಿದೆ. ಕನಿಷ್ಠ ಪಕ್ಷ ಜಿಲ್ಲಾಧಿಕಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರು ಈ ಬಗ್ಗೆ ಗಮನ ನೀಡುತ್ತಿಲ್ಲ. ಒಬ್ಬ ಅಧಿಕಾರಿಯೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.

ತೆರಿಗೆ ಹಣ ಎಲ್ಲಿಗೆ ಹೋಗ್ತಿದೆ?: ಸಮ್ಮಿಶ್ರ ಸರ್ಕಾರ 2.20 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಿದರೂ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ. ಹಣವಿಲ್ಲದೆ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ರಾಜ್ಯ ಸರ್ಕಾರ ಜನರಿಂದ ತೆರಿಗೆ ಸಂಗ್ರಹಿಸುತ್ತಿದ್ದು, ಅದನ್ನು ಖರ್ಚು ಮಾಡುತ್ತಿಲ್ಲ. ಹಾಗಿದ್ದರೆ ಜನರ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಖಾರವಾಗಿ ಪ್ರಶ್ನಿಸಿದರು.

Advertisement

ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ಉಡಾಫೆಯಾಗಿ ಮಾತನಾಡುತ್ತಿದ್ದಾರೆ.

ಸಮರ್ಪಕವಾಗಿ ಬರ ನಿರ್ವಹಣೆ ಮಾಡುವ ಬದಲು ಮುಖ್ಯಮಂತ್ರಿಗಳು ಬರೀ ಸುಳ್ಳು ಹೇಳುತ್ತಿದ್ದಾರೆ. ಏನೇ ವಿಚಾರ ಇದ್ದರೂ ಇಡೀ ರಾಜ್ಯ ಸರ್ಕಾರ ಮೋದಿಯವರತ್ತ ಕೈ ತೋರಿಸುತ್ತದೆ. ಕುಡಿಯುವ ನೀರಿಗೆ ಹಣ ಬಿಡುಗಡೆ ಮಾಡಿದ್ದನ್ನು ಹೊರತುಪಡಿಸಿ ರಾಜ್ಯ ಸರ್ಕಾರ ಮತ್ತೇನೂ ಮಾಡಿಲ್ಲ ಎಂದು ದೂರಿದರು.

ರಾಜ್ಯದ ಜನರು ಸಂಕಷ್ಟಲ್ಲಿದ್ದಾರೆ. ಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಅದಕ್ಕಾಗಿ ಬಿಜೆಪಿಯಿಂದ ಐದು ತಂಡಗಳನ್ನು ರಚಿಸಿಕೊಂಡು ಬರ ಪ್ರವಾಸ ಮಾಡುತ್ತಿದ್ದೇವೆ. ಪ್ರವಾಸದ ಬಳಿಕ ಬರದ ಬಗ್ಗೆ ಸರ್ಕಾರ ಗಮನಕ್ಕೆ ತರಲಾಗುವುದು ಎಂದರು.

ಎಲ್ಲ 30 ಜಿಲ್ಲೆಗಳ ಬರ ವರದಿಯನ್ನು, ಸರ್ಕಾರಕ್ಕೆ ಸಲ್ಲಿಸುತ್ತೇವೆ. ನಮ್ಮ ವರದಿಯನ್ನು ಪರಿಗಣಿಸದಿದ್ದರೆ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ದಾಳಿಂಬೆ, ಅಡಿಕೆ, ತೆಂಗು, ಶೇಂಗಾ, ಈರುಳ್ಳಿ, ರಾಗಿ ಸೇರಿ ಎಲ್ಲ ಬೆಳೆಗಳು ಶೇ. ನೂರರಷ್ಟು ನಷ್ಟಕ್ಕೊಳಗಾಗಿವೆ. ಭಿಕ್ಷುಕರಿಗೆ ನೀಡಿದಂತೆ ತೆಂಗಿಗೆ 400 ರೂ. ಪರಿಹಾರ ನೀಡುವುದು ಎಷ್ಟು ಸರಿ? ಅಡಿಕೆ ಹಾನಿ ಬಗ್ಗೆ ಸರ್ಕಾರ ಏನನ್ನೂ ಹೇಳುತ್ತಿಲ್ಲ ಎಂದು ಬಿಎಸ್‌ವೈ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next