Advertisement
ಹೇಮಾವತಿ ನಾಲಾ ಪ್ರದೇಶದಲ್ಲಿ ಈಗಾಗಲೇ ಭತ್ತ ಒಕ್ಕಣೆ ಮಾಡಲಾಗುತ್ತಿದೆ. ಅಲ್ಲಿನ ಭತ್ತದ ಹುಲ್ಲನ್ನು ತಂದು ಶೇಖರಣೆ ಮಾಡಿಕೊಂಡರೆ ಮುಂದೆ ಎದುರಾಗಬಹುದಾದ ಮೇವಿನ ಕೊರತೆ ನೀಗಿಸಲು ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ರೈತರು ನಾಲೆಬಯಲು ಪ್ರದೇಶದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ.
Related Articles
Advertisement
ಮಳೆನಂಬಿ ಕೃಷಿಯಲ್ಲಿ ಕೈ ಸುಟ್ಟುಕೊಂಡಾಗಿದೆ. ಮತ್ತೆ ಮೇವಿನ ಕೊರತೆಯಿಂದ ಹೈನುಗಾರಿಯಕೆಲ್ಲಿಯೂ ತೊಂದರೆ ಅನುಭವಿಸುವ ಬದಲಾಗಿ ಹೈನುಗಾರಿಕೆಯನ್ನು ಬೇಸಿಗೆಯಲ್ಲಿ ಯಾವ ರೀತಿ ನಿಭಾಯಿಸಬಹುದು ಎಂಬ ಲೆಕ್ಕಾಚಾರದಿಂದ ಮೇವು ಸಂಗ್ರಹಿಸಿಟ್ಟುಕೊಳ್ಳುವಲ್ಲಿ ನಿರತರಾಗಿದ್ದಾರೆ.
ಗಡಿಭಾಗದಲ್ಲಿ ಅಭಾವ: ತಾಲೂಕಿನ ಗಡಿಭಾಗದ ಹಲವು ಗ್ರಾಮದಲ್ಲಿ ಈಗಾಗಲೇ ಕುಡಿಯುವ ನೀರು ಹಾಗೂ ರಾಸುಗಳಿಗೆ ಮೇವಿನ ಅಭಾವ ತಲೆದೋರಿದೆ. ಹಿರೀಸಾವೆ, ದಂಡಿಗನಹಳ್ಳಿ ಮತ್ತು ನುಗ್ಗೇಹಳ್ಳಿ ಹೋಬಳಿಯಲ್ಲಿ ಸಂಪೂರ್ಣ ಮೇವಿನ ಅಭಾವವಿದೆ. ಶ್ರವಣಬೆಳಗೊಳ, ಬಾಗೂರು ಹಾಗೂ ಕಸಬಾ ಹೋಬಳಿಯಲ್ಲಿ ಕೆಲ ಭಾಗದಲ್ಲಿ ಹೇಮಾವತಿ ನಾಲೆ ಹರಿಯುತ್ತಿರುವುದರಿಂದ ಅಲ್ಲಿನ ರೈತರು ಮೆಕ್ಕೆಜೋಳ ಹಾಗೂ ರಾಸುಗಳ ಮೇವು ಬೆಳೆದಿರುವುದರಿಂದ ಅವರಿಗೆ ಅಷ್ಟಾಗಿ ಮೇವಿನ ತೊಂದರೆ ಸಮಸ್ಯೆ ಎದುರಾಗಿಲ್ಲ.
ದಿನಕ್ಕೆ ಬೇಕು ಸಾವಿರ ಟನ್ ಮೇವು: ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಪಶುಗಣತಿಯ ಪ್ರಕಾರ ತಾಲೂಕಿನಲ್ಲಿ 76,885 ಹಸುಗಳಿದ್ದು, 47,688 ಎಮ್ಮೆಗಳಿವೆ. ಇವುಗಳಿಗೆ ನಿತ್ಯ 6,22,865 ಕೆ.ಜಿ. ಮೇವು ಅಗತ್ಯವಿದೆ. ಕೊಳವೆಬಾವಿ ಹೊಂದಿರುವ ರೈತರು ಮಾತ್ರ ತಮ್ಮ ಕೃಷಿ ಭೂಮಿಯಲ್ಲಿ ಪಶುಗಳಿಗೆ ಅಗತ್ಯ ಮೇವು ಬೆಳೆದುಕೊಳ್ಳುತ್ತಿದ್ದಾರೆ. ಉಳಿದ ರೈತರಿಗೆ ಸಾಕಷ್ಟು ತೊಂದರೆ ಆಗುತ್ತಿದೆ.
ಲೋಡ್‌ಗೆ 16ರಿಂದ 18 ಸಾವಿರ ರೂ. : ಟ್ರ್ಯಾಕ್ಟರ್ ಲೋಡು ರಾಗಿ ಹುಲ್ಲಿಗೆ 16 ರಿಂದ 18 ಸಾವಿರ ರೂ. ಇದೆ. ಬಾಡಿಗೆ ಸೇರಿ 21 ಸಾವಿರ ರೂ. ಪಾವತಿ ಮಾಡಬೇಕಿದೆ. ಇದರಿಂದ ಭತ್ತದ ಹುಲ್ಲಿನ ಮೊರೆ ಹೋಗಿದ್ದು, ಒಂದು ಲಾರಿ ಲೋಡ್‌ಗೆ 9 ರಿಂದ 12 ಸಾವಿರ ರೂ. ಇದ್ದು ಬಾಡಿಗೆ ಸೇರಿ 15 ಸಾವಿರ ರೂ. ಪಾವತಿ ಮಾಡಬೇಕಿದೆ. ಇದೇ ಪರಿಸ್ಥಿತಿ ಮುಂದುವರೆದರೆ 25 ಸಾವಿರ ರೂ. ಬೆಲೆ ಮೀರಬಹುದೆಂದು ರೈತರು ಸಂಗ್ರಹಿಸಿಟ್ಟುಕೊಟ್ಟಲು ಮುಂದಾಗಿದ್ದಾರೆ.
ತಾಲೂಕಿನಲ್ಲಿ ಸದ್ಯಕ್ಕೆ ಮೇವಿನ ಸಮಸ್ಯೆ ಇಲ್ಲ, ಮುಂದೆ ಸಾಕಷ್ಟು ತೊಂದರೆ ಆಗಲಿದೆ. ಬಾಗೂರು, ಹಿರೀಸಾವೆ ಹೋಬಳಿಯ ಗಡಿ ಭಾಗಗಳಲ್ಲಿ ಮೇವಿನ ಸಮಸ್ಯೆ ಸಲ್ಪ ಮಟ್ಟಿಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದ್ದು, ಮೇವಿನ ಸಮಸ್ಯೆ ನೀಗಿಸಲು ಮೇವಿನ ಕಿಟ್‌ಗೆ ಬೇಡಿಕೆ ಸಲ್ಲಿಸಲಾಗಿದೆ. –ಸೋಮಶೇಖರ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸಹಾಯಕ ನಿರ್ದೇಶಕ
ಈಗ ಮೇವು ಸಂಗ್ರಹ ಮಾಡದೇ ಹೋದರೆ ಮುಂದೆ ಮೇವಿಗೆ ಹೆಚ್ಚು ಹಣ ತೆತ್ತು ಕೊಳ್ಳಬೇಕಾಗುತ್ತದೆ. ಮೇವು ದೊರೆಯುವ ಪ್ರದೇಶಗಳಲ್ಲಿ ಸಂಚಾರ ಮಾಡಿ ಭತ್ತ ಅಥವಾ ರಾಗಿ ಹುಲ್ಲು ಕೊಳ್ಳಲು ಮುಂದಾಗುತ್ತಿದ್ದೇವೆ. ● ಕಾಂತರಾಜು, ನೆಟ್ಟಕೆರೆ, ತಾಲೂಕಿನ ಗಡಿ ಭಾಗದ ಗ್ರಾಮ
-ಶಾಮಸುಂದರ್ ಕೆ.ಅಣ್ಣೇನಹಳ್ಳಿ