ಕಾಸರಗೋಡು: ಬರಗಾಲ ಎದುರಿಸುವ ನಿಟ್ಟಿನಲ್ಲಿ ಹಿರಿಯ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಕೆಲವೆಡೆ ನದಿ, ತೊರೆ ಇತ್ಯಾದಿಗಳಲ್ಲಿ ಅಕ್ರಮವಾಗಿ ಪೈಪ್ ಅಳವಡಿಸಿ ನೀರು ಅಕ್ರಮ ಸಾಗಣೆ ನಡೆಸಲಾಗುತ್ತಿರುವ ಬಗ್ಗೆ ದೂರುಗಳು ಲಭಿಸಿದ್ದು, ಇದರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು. ಗ್ರಾಮ ಪಂಚಾಯತ್‌ಗಳು ಈ ಹೊಣೆ ಹೊರಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಹೇಳಿದರು.
ಕೆಲವೆಡೆ ಅಡಿಕೆ ತೋಟಗಳಿಗೆ ತಾಸುಗಟ್ಟಲೆ ನೀರು ಸಿಂಪಡಿಸುತ್ತಿರುವ ಪರಿಣಾಮ ಜಿಲ್ಲೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ ಕೆಲವು ಗ್ರಾಮ ಪಂಚಾಯತ್ ಅಧ್ಯಕ್ಷರು ಆರೋಪಿಸಿದರು. ವೈಜ್ಞಾನಿಕ ರೀತಿಯಲ್ಲಿ ಬಳಸಿದರೆ ಸಸಿಗಳಿಗೆ ಕೊಂಚ ನೀರು ಸಾಲುತ್ತದಾದರೂ ಈ ರೀತಿ ಜಲ ದುರುಪಯೋಗ ನಡೆಸುವುದು ಸರಿಯಲ್ಲ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಉತ್ತರಿಸಿ, ಈ ಸಂಬಂಧ ಹೊಣೆಯನ್ನು ಕೃಷಿ ಇಲಾಖೆ, ನೀರಾವರಿ ಇಲಾಖೆ ಅಧಿಕಾರಿಗಳಿಗೆ ನೀಡಿದರು.
ಬರಪೀಡಿತ ಪ್ರದೇಶವೆಂದು ಸರಕಾರ ಆದೇಶ ನೀಡಿದರೆ ಮಾತ್ರ ಎಸ್.ಡಿ.ಆರ್.ಎಫ್. ನಿಧಿ ಬಳಕೆ ಸಾಧ್ಯ. ಕಳೆದ ವರ್ಷ ನಡೆಸಿದ ರೀತಿ ಜಿ.ಪಿ.ಎಸ್. ಅಳವಡಿಸಿ ವಾಹನಗಳಲ್ಲಿ ಕುಡಿಯುವ ನೀರು ವಿತರಿಸುವಂತೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಆದೇಶ ನೀಡಿದರು. ಈ ಸಂಬಂಧ ಕಿ.ಮೀ. ಬಾಡಿಗೆ ರೂಪದಲ್ಲಿ ಕರಾರು ವಾಹನಕ್ಕಾಗಿ ಕೊಟೇಷನ್ ಕೋರಲೂ ತಿಳಿಸಲಾಗಿದೆ. ರಸ್ತೆ ನಿರ್ಮಾಣ ವೇಳೆ ಪೈಪು ಒಡೆದು ನೀರು ಪೋಲಾಗು ತ್ತಿರುವ ವಿಚಾರದ ಬಗ್ಗೆ ಜಲ ಪ್ರಾಧಿಕಾರ ಸಿಬಂದಿ ಸಭೆಯಲ್ಲಿ ಪ್ರಸ್ತಾವಿಸಿದರು. ಸ್ಥಳೀಯಾಡಳಿತ ಸಂಸ್ಥೆಗಳು ಕಾಮಗಾರಿ ವೇಳೆ ಈ ಕುರಿತು ಜಾಗ್ರತೆ ಪಾಲಿಸುವಂತೆ ಮತ್ತು ಜಲಾಶಯಗಳ ಪುನಶ್ಚೇತನ ನಡೆಸಿ ಬಳಸುವಂತೆ ಆದೇಶ ನೀಡಲಾಗಿದೆ.
ಸಭೆಯಲ್ಲಿ ಸಂಸದ ಪಿ. ಕರುಣಾಕರನ್, ಶಾಸಕ ರಾದ ಎನ್.ಎ. ನೆಲ್ಲಿಕುನ್ನು, ಕೆ. ಕುಂಞಿರಾಮನ್, ಉಪ ಜಿಲ್ಲಾಧಿಕಾರಿ ಅರುಣ್ ಕೆ. ವಿಜಯನ್, ಹೆಚ್ಚುವರಿ ದಂಡನಾಧಿಕಾರಿ ಎನ್. ದೇವಿದಾಸ್, ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರು, ಜನಪ್ರತಿನಿಧಿ ಗಳು, ಜಿಲ್ಲಾ ಮಟ್ಟದ ಸಿಬಂದಿ, ಆಡಳಿತ ನಿರ್ವಹಣೆ ಸಿಬಂದಿ ಮೊದಲಾದವರು ಉಪಸ್ಥಿತರಿದ್ದರು.