Advertisement

ಬರ ಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ

12:30 AM Jan 27, 2019 | Team Udayavani |

ಬೆಂಗಳೂರು: ಬರ ಪೀಡಿತ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಲು 14ನೇ ಹಣಕಾಸು ಆಯೋಗದ ಅನುದಾನವನ್ನು ಆದ್ಯತೆ ಮೇಲೆ ಹೆಚ್ಚಿನ ರೀತಿಯಲ್ಲಿ ಬಳಸಿಕೊಳ್ಳಲು ಗ್ರಾಮ ಪಂಚಾಯಿತಿಗಳಿಗೆ ರಾಜ್ಯ ಸರ್ಕಾರ ವಿಶೇಷ ಅನುಮತಿ ಕೊಟ್ಟಿದೆ.

Advertisement

ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆಯಾಗಿ ಬಿಡುಗಡೆಯಾಗಿರುವ 14ನೇ ಹಣಕಾಸು ಆಯೋಗದ ಅನುದಾನವನ್ನು ಸ್ಥಳೀಯ ಅಗತ್ಯತೆಗೆ ಅನುಸಾರವಾಗಿ ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗಾಗಿ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಅಧಿಕವಾಗಿ ಬಳಸಿಕೊಳ್ಳಲು ಪ್ರಸಕ್ತ ಸಾಲಿಗೆ ವಿಶೇಷ ಅನುಮತಿ ನೀಡಲಾಗಿದೆ. ಆದ್ದರಿಂದ ಕುಡಿಯುವ ನೀರಿನ ಕಾಮಗಾರಿಗಳಿಗೆ ನಿರ್ಬಂಧ ವಿಧಿಸುವ ಅಗತ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯು ಎಲ್ಲ ಗ್ರಾಪಂಗಳಿಗೆ ಸುತ್ತೋಲೆ ಹೊರಡಿಸಿದೆ.

ಹಣಕಾಸು ಆಯೋಗದ ಅನುದಾನ ಕೇಂದ್ರ ಸರ್ಕಾರದಿಂದ ನೇರವಾಗಿ ಗ್ರಾಪಂಗಳಿಗೆ ಹಂಚಿಕೆಯಾಗಿ ಬಿಡುಗಡೆಯಾಗುತ್ತದೆ. ಆ ಅನುದಾನ ಬಳಸಿಕೊಳ್ಳಲು ನಿರ್ದಿಷ್ಟ ಮಾರ್ಗಸೂಚಿಗಳಿರುತ್ತವೆ. ಅದರಂತೆ ಒಟ್ಟು ಅನುದಾನದಲ್ಲಿ ಶೇ.90ರಷ್ಟು ಅನುದಾನವನ್ನು ಮೂಲಭೂತ ಅನುದಾನವಾಗಿ ಆಸ್ತಿ ಸೃಜನೆ ಕಾಮಗಾರಿಗಳಿಗೆ ಮೀಸಲಿಟ್ಟು, ಉಳಿದ ಶೇ.10ರಷ್ಟು ಅನುದಾನವನ್ನು ಕಾರ್ಯಾಚರಣೆ ಮತ್ತು ನಿರ್ವಹಣಾ ಕಾಮಗಾರಿಗಳಿಗೆ ಉಪಯೋಗಿಸಬಹುದು.

ಅದರಂತೆ ಆಸ್ತಿ ಸೃಜನೆ ಕಾಮಗಾರಿಗಳಿಗೆ ಬಳಸುವ ಶೇ.90ರಷ್ಟು ಅನುದಾನದಲ್ಲಿ ನೈರ್ಮಲ್ಯ ಕಾಮಗಾರಿ, ಘನ ತ್ಯಾಜ್ಯ, ಬೀದಿ ದೀಪ ನಿರ್ವಹಣೆ, ಕಾರ್ಯಾಚರಣೆ ಮತ್ತು ನಿರ್ವಹಣೆಗೆ ತಲಾ ಶೇ.10, ಸಮುದಾಯ ಆಸ್ತಿಗಳ ನಿರ್ವಹಣೆ, ಗ್ರಾಪಂ ರಸ್ತೆಗಳ ನಿರ್ವಹಣೆ, ಪಾದಚಾರಿ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ, ಮಳೆ ನೀರಿನ ಚರಂಡಿಗಳ ನಿರ್ಮಾಣಕ್ಕೆ ತಲಾ ಶೇ.15ರಷ್ಟು, ಸ್ಮಶಾನಗಳು ಮತ್ತು ಜೀವವೈವಿಧ್ಯತೆ ರಕ್ಷಣೆಗೆ ತಲಾ ಶೇ.5ರಷ್ಟು ಅನುದಾನ ಬಳಸಿಕೊಳ್ಳ ಬಹುದು. ಈ ಒಟ್ಟು ಅನುದಾನದಲ್ಲಿ ಶೇ.25ರಷ್ಟು ಅನುದಾನವನ್ನು ಎಸ್ಸಿ, ಎಸ್ಟಿ ವರ್ಗದ ಕಾಮಗಾರಿಗಳಿಗೆ ಮೀಸಲಿಡಬೇಕು. ಜೊತೆಗೆ ಶೇ.20ರಷ್ಟು ಅನು ದಾನವನ್ನು ಕುಡಿಯುವ ನೀರಿನ ಕಾಮಗಾರಿಗಳಿಗೆ ಬಳಸಿಕೊಳ್ಳಲು ಅವಕಾಶವಿದೆ. ಆದರೆ, ತೀವ್ರ ಬರದ ಹಿನ್ನೆಲೆಯಲ್ಲಿ ಮಾರ್ಗ ಸೂಚಿಗಳನ್ನು ಸಡಿಲ ಗೊಳಿಸಿರುವ ಸರ್ಕಾರ ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ಅನುದಾನವನ್ನು ಬಳಸಿ ಕೊಳ್ಳುವಂತೆ ಹೇಳಿದೆ.

2 ಸಾವಿರ ಕೋಟಿ: 14ನೇ ಹಣಕಾಸು ಆಯೋಗದ ಶಿಫಾರಸ್ಸಿನ ಅನ್ವಯ 2018-19ನೇ ಸಾಲಿಗೆ ರಾಜ್ಯಕ್ಕೆ ಸುಮಾರು 2 ಸಾವಿರ ಕೋಟಿ ರೂ.ಅನುದಾನವನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ಈ ಅನುದಾನ ಎರಡು ಕಂತುಗಳಲ್ಲಿ ಈಗಾಗಲೇ ರಾಜ್ಯದ 6,020 ಗ್ರಾಪಂಗಳಿಗೆ ಹಂಚಿಕೆಯಾಗಿ, ಬಿಡುಗಡೆಯೂ ಆಗಿದೆ. ಪ್ರಸ್ತುತ ರಾಜ್ಯದ ಬಹುತೇಕ ತಾಲೂಕುಗಳು ಬರಗಾಲ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಹಣಕಾಸು ಆಯೋಗದ ಅನುದಾನವನ್ನು ಬಳಸಬೇಕಾದ ಬಾಬ್ತುಗಳ ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಬಳಸಿಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಸರ್ಕಾರದಿಂದ 150 ಕೋಟಿ ರೂ.ಅನುದಾನ
ಇದಲ್ಲದೇ ಮೊದಲ ಸುತ್ತಿನಲ್ಲಿ ಬರಪೀಡಿತ ಎಂದು ಘೋಷಿಸಲಾದ 100 ತಾಲೂಕುಗಳಿಗೆ ತಲಾ 1 ಕೋಟಿ ರೂ.ಹಾಗೂ ನಂತರ ಬರಪೀಡಿತ ಎಂದು ಘೋಷಿಸಲಾದ 62 ತಾಲೂಕುಗಳಿಗೆ ತಲಾ 50 ಲಕ್ಷ ರೂ.ಗಳಂತೆ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಈಗಾಗಲೇ 150 ಕೋಟಿ ರೂ.ವಿಶೇಷ ಅನುದಾನ ಬಿಡುಗಡೆ ಮಾಡಿದೆ.

Advertisement

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next