ದಾವಣಗೆರೆ: ವಿದ್ಯುತ್ ತಿದ್ದುಪಡಿ ಮಸೂದೆ ಜಾರಿಗೆ ತರಬಾರದು ಎಂದು ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ರೈತರು ತಹಶೀಲ್ದಾರ್ ಕಚೇರಿ ಎದುರು ಸುರಿಯುವ ಮಳೆಯಲ್ಲೇ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದ್ದನ್ನು ವಿರೋಧಿಸಿ ದೇಶದ ರಾಜಧಾನಿ ದೆಹಲಿಯಲ್ಲಿ ವಿವಿಧ ಸಂಘಟನೆಯಡಿ ರೈತರು ನಿರಂತರವಾಗಿ 1.4 ವರ್ಷ ನಡೆಸಿದ ಹೋರಾಟದ ಫಲವಾಗಿ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿದೆ. ಆ ಸಂದರ್ಭದಲ್ಲಿ ರೈತರ, ಜನಸಾಮಾನ್ಯರ ವಿರೋಧಿ ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವುದೇ ಇಲ್ಲ ಎಂಬುದಾಗಿ ರೈತ ಸಮಿತಿಯವರನ್ನು ಒಪ್ಪಿಸಿ ಮತ್ತೆ ಈ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿರುವುದು ಖಂಡನೀಯ ಮತ್ತು ಜನ ಹಾಗೂ ರೈತ ವಿರೋಧಿ ನೀತಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ತಿದ್ದುಪಡಿ ಮಸೂದೆ ವಿರೋಧಿಸಿ ದೇಶಾದ್ಯಂತ ರೈತ ಚಳವಳಿಗಳು ನಡೆಯುತ್ತಿವೆ. ಆದರೂ ಸಹ ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೆ ತರಲು ಹೊರಟಿರುವುದು ಸರಿಯಲ್ಲ. ಕೂಡಲೇ ರೈತರಿಗೆ ನೀಡಿರುವ ವಾಗ್ಧಾನದಂತೆ ನಡೆದುಕೊಳ್ಳಬೇಕು. ವಿದ್ಯುತ್ ತಿದ್ದುಪಡಿ ಮಸೂದೆ ಕೈಬಿಡಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ತಿದ್ದುಪಡಿ ಮಸೂದೆಯಡಿ ವಿದ್ಯುತ್ ಪೂರೈಕೆ ಉಪಗುತ್ತಿಗೆ ಹಾಗೂ ಫ್ರಾಂಚೈಸಿಗೆ ಅವಕಾಶವಿದೆ. ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡುವುದು ತಿದ್ದುಪಡಿಯ ಉದ್ದೇಶವಾಗಿದೆ. ಮಸೂದೆಯ ತಿದ್ದುಪಡಿ ರೈತರಿಗೆ ಮತ್ತು ಗ್ರಾಹಕರಿಗೆ ಮರಣಶಾಸನವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿದ್ಯುತ್ ಪೂರೈಕೆ ಖಾಸಗೀಕರಣಗೊಂಡರೆ ರೈತರು, ಕೂಲಿ ಕಾರ್ಮಿಕರಿಗೆ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಕೃಷಿ ಪಂಪ್‌ಸೆಟ್ ಬೀದಿದೀಪ, ನೀರು ಸರಬರಾಜಿಗೆ ನೀಡುತ್ತಿರುವ ಉಚಿತ ವಿದ್ಯುತ್ ಬಂದ್ ಆಗಲಿದೆ. ಗ್ರಾಹಕರು ಮೊದಲು ವಿದ್ಯುತ್ ಶುಲ್ಕ ಪಾವತಿಸಿ ಬಳಿಕ ಸರ್ಕಾರದ ಸಬ್ಸಿಡಿ ಕಾರ್ಯಕ್ರಮದಡಿ ಪರಿಹಾರ ನೀಡಿದರೆ ಪಡೆಯಬೇಕಾಗುತ್ತದೆ. ಈ ಹಿಂದೆ ಜನರು ಬಳಸುವ ಅಡುಗೆ ಅನಿಲಕ್ಕೆ ನಂತರ ಸಬ್ಸಿಡಿ ಕೊಡುವುದಾಗಿ ತಿಳಿಸಿ ಈಗ ಕೊಡದೆ ಮೋಸ ಮಾಡುತ್ತಿದೆ. ಅದೇ ರೀತಿ ಇದೂ ಕೂಡ ಆಗಲಿದೆ. ರೈತರು ಸಹ ಮೊದಲು ಹಣ ಪಾವತಿಸಿ ಬಳಿಕ ಕೃಷಿ ಪಂಪ್‌ಸೆಟ್ ಗಳಿಗೆ ವಿದ್ಯುತ್ ಬಳಕೆ ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಸಾಕಷ್ಟು ಜನ, ಗ್ರಾಹಕ ವಿರೋಧಿ ನೀತಿಗಳಿರುವ ಮಸೂದೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ಒತ್ತಾಯಿಸಿದರು. ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.