ಮಹಾನಗರ: ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಉತ್ತಮ ಮಳೆ ಶೀಘ್ರ ಸುರಿಯದಿದ್ದರೆ ನಗರವಾಸಿಗಳ ಕುಡಿಯುವ ನೀರಿಗೆ ಆತಂಕ ಎದುರಾಗುವ ಎಲ್ಲ ಸಾಧ್ಯತೆಗಳಿವೆ.
ಮಂಗಳೂರು ಮೇಯರ್ ಜಯಾನಂದ ಅಂಚನ್ ಹಾಗೂ ಆಯುಕ್ತ ಚನ್ನಬಸಪ್ಪ ಅವರು ಗುರುವಾರ ತುಂಬೆ ಡ್ಯಾಂಗೆ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಸದಸ್ಯ ರಾಧಾಕೃಷ್ಣ ಜತೆಗಿದ್ದರು.
ಲಭ್ಯ ಇರುವ ನೀರಿನ ಪ್ರಮಾಣ ಹಾಗೂ ಅದರ ಸರಬರಾಜು ವಿಚಾರದ ಬಗ್ಗೆ ಅವರು ಅಧಿಕಾರಿಗಳ ಜತೆಗೆ ವಿವರವಾಗಿ ಚರ್ಚಿಸಿದರು. ಈಗಿನ ರೇಷನಿಂಗ್ ನಿಯಮವನ್ನೇ ಯಥಾಸ್ಥಿತಿಯಲ್ಲಿ ಮುಂದುವರಿಸುವುದು ಅಥವಾ ರೇಷನಿಂಗ್ ನಿಯಮದಲ್ಲಿ ಬದಲಾವಣೆ ತಂದರೆ ಆಗಬಹುದೇ? ಎಂಬ ವಿಚಾರದಲ್ಲಿ ಮಾತುಕತೆ ನಡೆಸಿದರು.
ಆಯುಕ್ತ ಚನ್ನಬಸಪ್ಪ ಅವರು “ಉದಯವಾಣಿ’ ಜತೆಗೆ ಮಾತನಾಡಿ, “ತುಂಬೆ ಡ್ಯಾಂನಲ್ಲಿ ಸದ್ಯ 3.41 ಮೀ. ನೀರು ಸಂಗ್ರಹವಿದೆ. ದಿನ ಬಿಟ್ಟು ದಿನ ಎಂಬಂತೆ ರೇಷನಿಂಗ್ ನಿಯಮ ಈಗಾಗಲೇ ಮಂಗಳೂರಿನಲ್ಲಿ ಜಾರಿಯಲ್ಲಿದೆ. ಮಳೆ ಬರುವ ನಿರೀಕ್ಷೆಯೂ ಇದೆ. ಹೀಗಾಗಿ ಸದ್ಯಕ್ಕೆ ರೇಷನಿಂಗ್ ನಿಯಮ ಪರಿಷ್ಕರಣೆ ಬಗ್ಗೆ ಯಾವುದೇ ಚಿಂತನೆಯಿಲ್ಲ. ಈಗಿನ ರೇಷನಿಂಗ್ ಕ್ರಮವನ್ನೇ ಸದ್ಯಕ್ಕೆ ಮುಂದುವರಿಸಲಾಗುವುದು’ ಎಂದರು.
Related Articles
ಡ್ಯಾಂನ ಕೆಳಭಾಗದಿಂದ 60 ಎಂಎಲ್‌ಡಿ ನೀರು
ಹೊಸ ಡ್ಯಾಂ ನಿರ್ಮಾಣದ ಬಳಿಕ ನೀರು ಹರಿಯುವ ರಭಸಕ್ಕೆ ಡ್ಯಾಂನ ಕೆಳಭಾಗದಲ್ಲಿ ಬೃಹತ್ ಹೊಂಡಗಳಾಗಿದ್ದು, ಇದರಲ್ಲಿ ಸುಮಾರು 4 ಮೀ.ನಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಿದೆ ಎಂದು ಅಂದಾಜಿಸಲಾಗಿದೆ. ಹರೇಕಳ ಡ್ಯಾಂ ನಿರ್ಮಾಣವಾದ ಕಾರಣದಿಂದ ಈ ವರ್ಷ ತುಂಬೆ ಡ್ಯಾಂನ ಕೆಳ ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆ ಇಲ್ಲ. ಹೀಗಾಗಿ ಬೃಹತ್ ಪಂಪ್ ಸಹಾಯದಿಂದ ಕೆಳಭಾಗದಿಂದ ನೀರು ಮೇಲಕ್ಕೆತ್ತುವ ಕಾರ್ಯ ಇಲ್ಲಿ ನಿರಂತರವಾಗಿ ನಡೆಯುತ್ತಿದೆ. ಪ್ರತೀದಿನ 50ರಿಂದ 60 ಎಂಎಲ್‌ಡಿ ನೀರು ಈ ರೀತಿ ಡ್ಯಾಂಗೆ ಪಂಪ್ ಮಾಡಲಾಗುತ್ತಿದೆ.
ಮಂಗಳೂರಿಗೆ ನಿತ್ಯ 160 ಎಂಎಲ್‌ಡಿ ನೀರು ಸರಬರಾಜು ಮಾಡುವ ಕಾರಣದಿಂದ ಶೇ.40ರಷ್ಟು ನೀರು ಡ್ಯಾಂನ ಕೆಳಭಾಗದಿಂದ ಪಡೆಯಲಾಗುತ್ತಿದೆ. ಸಾಮಾನ್ಯವಾಗಿ 1 ದಿನದಲ್ಲಿ 10 ಸೆಂ.ಮೀ. ನೀರು ತುಂಬೆ ಡ್ಯಾಂನಲ್ಲಿ ಕಡಿಮೆಯಾಗುತ್ತದೆ. ಆದರೆ ಈಗ ಡ್ಯಾಂನ ಕೆಳಭಾಗದ ನೀರು ಪಂಪಿಂಗ್ ಮಾಡುವ ಕಾರಣ ಸದ್ಯ 7 ಸೆಂ.ಮೀ.ನಷ್ಟು ನೀರು ಕಡಿಮೆಯಾಗುತ್ತಿದೆ. ಮಂಗಳೂರು ಪಾಲಿಕೆ ಅಧಿಕಾರಿಗಳ ತಂಡ, ಸಿಬಂದಿ ಇದಕ್ಕಾಗಿ ಹಗಲೂ-ರಾತ್ರಿ ಶ್ರಮಿಸುತ್ತಿದ್ದಾರೆ. ಎಂಆರ್‌ಪಿಎಲ್ ಸಂಸ್ಥೆ ಕೂಡ ಇದಕ್ಕಾಗಿ ನೆರವು ನೀಡಿದೆ.
ಸಾರ್ವಜನಿಕರ ಸಹಕಾರ ಮುಖ್ಯ
ತುಂಬೆ ಡ್ಯಾಂನಲ್ಲಿ ಸದ್ಯಕ್ಕೆ ಇರುವ ನೀರನ್ನು ಈಗಿನ ರೇಷನಿಂಗ್ ನಿಯಮದ ಪ್ರಕಾರವೇ ಸರಬರಾಜು ಮಾಡಲು ತೀರ್ಮಾನಿಸಲಾಗಿದೆ. ನೀರಿನ ಸಮರ್ಪಕ ಸರಬರಾಜಿಗಾಗಿ ವಿಶೇಷ ಪ್ರಯತ್ನ ನಡೆಸಲಾಗುತ್ತಿದೆ. ನೀರಿನ ಮಿತವಾದ ಬಳಕೆಗಾಗಿ ಸಾರ್ವಜನಿಕರು ಪಾಲಿಕೆಯ ಜತೆಗೆ ಕೈ ಜೋಡಿಸಿದರೆ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
– ಜಯಾನಂದ ಅಂಚನ್, ಮೇಯರ್, ಪಾಲಿಕೆ