Advertisement

ನಳನಳಿಸುತ್ತಿದೆ ಅಕ್ಷರ ಕೈತೋಟ; ಸಮಗ್ರ ಶಿಕ್ಷಣದ ಗುರಿ

11:35 PM Apr 20, 2019 | mahesh |

ಬೆಳ್ತಂಗಡಿ: ಕಲಿಕೆ, ಕ್ರೀಡೆ ಜತೆಗೆ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯ ರೂಪಿಸುತ್ತದೆ ಎಂದಾದರೆ ಅದು ಸರಕಾರಿ ಶಾಲೆಯಿಂದ ಮಾತ್ರ ಸಾಧ್ಯ ಎಂಬುದನ್ನು ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದಲ್ಲಿನ ಪಿಲಿಗೂಡು ಸರಕಾರಿ ಹಿ.ಪ್ರಾ. ಶಾಲೆ ನಿರೂಪಿಸಿದೆ.

Advertisement

ಶಿಕ್ಷಕರು, ಹೆತ್ತವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಅಕ್ಷರ ಕೈತೋಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಜೀವನ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯ 1.54 ಎಕ್ರೆ ಜಾಗದಲ್ಲಿರುವ ಅಕ್ಷರ ಕೈತೋಟದ ಮಧ್ಯೆ ಮಕ್ಕಳು ಬೆರೆತು ತರಕಾರಿ, ಗಿಡಗಳ ಪಾಲನೆ, ನೀರೆರೆಯುವುದು, ಗೊಬ್ಬರ ಹಾಕುವುದು, ನಿರ್ವಹಣೆ, ತರಕಾರಿ ಕಟಾವು, ಕೃಷಿ ಕಾರ್ಯದಲ್ಲಿ ಸಮಯ ಕಳೆಯುತ್ತಿರುವುದರಿಂದ ಭವಿಷ್ಯದ ಭರವಸೆಯಾಗಿ ಮೂಡಿಬರುತ್ತಿದ್ದಾರೆ.

ನಳನಳಿಸುತ್ತಿರುವ 480 ಅಡಿಕೆ ಗಿಡ, ತೆಂಗು, ಬಾಳೆ, ಕಾಳುಮೆಣಸು, ಗೇರು ಬೀಜ, ಪಪ್ಪಾಯ, ಬೆಂಡೆಕಾಯಿ, ಬಸಳೆ, ನೆಲಬಸಳೆ, ನುಗ್ಗೆಕಾಯಿ, ತೊಂಡೆಕಾಯಿ ಮೊದಲಾದ ಹಣ್ಣು, ತರಕಾರಿ ಗಿಡಗಳ ಆರೈಕೆ ಮಾಡಿರುವ ಮಕ್ಕಳು ಹಾಗೂ ಶಿಕ್ಷಕರ ಶ್ರಮಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ಮಕ್ಕಳ ಸಂಖ್ಯೆ ವೃದ್ಧಿ
ಮುಖ್ಯ ಶಿಕ್ಷಕಿ ಲೀಲಾವತಿ ಕೆ., ಸಹಶಿಕ್ಷಕಿಯರಾಗಿ ಚಂದ್ರಕ್ಕಿ ಹಾಗೂ ಅನಿತಾ ಜತೆಗೆ ಒಬ್ಬರು ಅತಿಥಿ ಶಿಕ್ಷಕಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2011ರಲ್ಲಿ 26 ವಿದ್ಯಾರ್ಥಿಗಳಿದ್ದು, ಮುಚ್ಚುವ ಹಂತದಲ್ಲಿದ್ದ ಶಾಲೆ ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಯಾಗಿದೆ. ಶಿಕ್ಷಕರು, ಹೆತ್ತವರು, ವಿದ್ಯಾಭಿಮಾನಿಗಳು, ಹಳೆವಿದ್ಯಾರ್ಥಿಗಳ ಪ್ರಯತ್ನದೊಂದಿಗೆ 2014ರ ವೇಳೆಗೆ ವಿದ್ಯಾರ್ಥಿಗಳ ಸಂಖ್ಯೆ 37ಕ್ಕೆ ಏರಿದೆ. 2015ರಲ್ಲಿ ಹಿ.ಪ್ರಾ. ಶಾಲೆಯಾಗಿ ಮೇಲ್ದರ್ಜೆಗೇರಿದ್ದು, 2016ರಲ್ಲಿ 56 ವಿದ್ಯಾರ್ಥಿಗಳು ಶಾಲೆಯಲ್ಲಿ ಅಧ್ಯಯನ ನಡೆಸಿದ್ದಾರೆ. ಪ್ರಸಕ್ತ ವರ್ಷ 58 ವಿದ್ಯಾರ್ಥಿಗಳು ಅಧ್ಯಯನ ನಡೆಸಿದ್ದು, 2019ರಲ್ಲಿ ಮಕ್ಕಳ ಸಂಖ್ಯೆ ಹೆಚ್ಚುವ ನಿರೀಕ್ಷೆ ಶಾಲಾಭಿವೃದ್ಧಿ ಸಮಿತಿಯದ್ದು. ಶಾಲೆಯ ಕೆಲವು ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಹೊಸ ಕಟ್ಟಡಗಳಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕಂಪ್ಯೂಟರ್‌, ಇಂಗ್ಲಿಷ್‌ ಶಿಕ್ಷಣ
ದಾನಿಗಳು ನೀಡಿರುವ 2 ಕಂಪ್ಯೂಟರ್‌ಗಳ ಮೂಲಕ ಕಂಪ್ಯೂಟರ್‌ ಕಲಿಕೆಗೆ ಪ್ರತ್ಯೇಕ ಶಿಕ್ಷಕಿಯನ್ನೂ ನೇಮಿಸಲಾಗಿದ್ದು, ದಿನಂಪ್ರತಿ ಪ್ರಾಯೋಗಿಕ ತರಗತಿಗಳು ನಡೆಯುತ್ತಿವೆ. ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಇಂಗ್ಲಿಷ್‌ ಸ್ಪೀಕಿಂಗ್‌ ಕೋರ್ಸ್‌ ಕೆಲವು ತರಗತಿ ನಡೆಸಲಾಗಿದೆ. ಇಂಗ್ಲಿಷ್‌ ಮಾಧ್ಯಮ ಆರಂಭಿಸುವ ಚಿಂತನೆ ಶಾಲೆಯದು. ವಾರಕ್ಕೆರಡು ದಿನ ಯೋಗ ತರಬೇತಿಯನ್ನೂ ನೀಡುತ್ತಿರುವುದು ವಿಶೇಷ.

Advertisement

ಮಕ್ಕಳಿಂದ ಗಿಡ ನಾಟಿ
ವಿದ್ಯಾರ್ಥಿಗಳ ಹುಟ್ಟುಹಬ್ಬ ಹಾಗೂ 7ನೇ ತರಗತಿ ವಿದ್ಯಾರ್ಥಿಗಳ ವಿದಾಯ ಸಂದರ್ಭ ಫಲವಸ್ತುಗಳ ಗಿಡ ನಾಟಿ ಮಾಡುವ ಸಂಪ್ರದಾಯ ಪಾಲಿಸಲಾಗುತ್ತಿದೆ. ಈ ಮೂಲಕ ಮಕ್ಕಳು ಶಾಲಾ ವಾತಾವರಣ ಹಸುರು ಮಾಡುವ ಕಾರ್ಯಕ್ಕೆ ಕೈಜೋಡಿಸುವ ಜತೆಗೆ ಪರಿಸರ ಪ್ರೇಮ ಪ್ರದರ್ಶಿಸುತ್ತಿದ್ದಾರೆ.

ಸಮಾಜಮುಖಿ ಕಾರ್ಯಕ್ರಮ
ವರ್ಷಂಪ್ರತಿ ಮಧುಸೂದನ್‌ ಸ್ಮರಣಾರ್ಥ ರಕ್ತದಾನ ಶಿಬಿರ ನಡೆಸಲಾಗುತ್ತಿದೆ. ಸ್ವಾತಂತ್ರÂ ದಿನಾಚರಣೆಯಂದು ಊರಿನ ಯೋಧರನ್ನು ಗುರುತಿಸಿ ಗೌರವಿಸಲಾಗುತ್ತಿದೆ. 2 ವರ್ಷಗಳಿಗೊಮ್ಮೆ ಶಾಲೆಯಲ್ಲಿ ವಾರ್ಷಿಕೋತ್ಸವ ಹಮ್ಮಿಕೊಳ್ಳುವ ಮೂಲಕ ಊರಿನ ಜನತೆ ಶಾಲೆಯ ಕುರಿತು ಕಾಳಜಿ ವಹಿಸುವಂತೆ ಮಾಡಲಾಗುತ್ತಿದೆ.

ಪ್ರಶಸ್ತಿಗಳ ಗರಿ
ಶಾಲೆಗೆ 2013ರಲ್ಲಿ ತಾಲೂಕು ಮಟ್ಟದ ಉತ್ತಮ ಶಾಲಾ ಪ್ರಶಸ್ತಿ ಲಭಿಸಿದೆ. ಇಲ್ಲಿನ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ, ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿವಿಧ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.

18 ಲಕ್ಷಕ್ಕೂ ಹೆಚ್ಚು ಮೊತ್ತದ ಅಭಿವೃದ್ಧಿ
ಜೆಸಿಐ, ಗ್ರಾಮಾಭಿವೃದ್ಧಿ ಯೋಜನೆ, ಸೇವಾಭಾರತಿ ಕನ್ಯಾಡಿ-2, ರೈತಬಂಧು ಆಹಾರೋದ್ಯಮ ಸಹಿತ ವಿವಿಧ ಸಂಘ – ಸಂಸ್ಥೆಗಳು, ಉದ್ಯಮಿಗಳು, ಊರ-ಪರವೂರ ವಿದ್ಯಾಭಿಮಾನಿಗಳು, ಹಳೆವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಕಳೆದ 6 ವರ್ಷಗಳ ಅವಧಿಯಲ್ಲಿ ಸುಮಾರು 18 ಲಕ್ಷ ರೂ.ಗೂ ಹೆಚ್ಚಿನ ವೆಚ್ಚದಲ್ಲಿ ಕಂಪ್ಯೂಟರ್‌, ಫ್ಯಾನ್‌, ವಾಟರ್‌ ಫಿಲ್ಟರ್‌, ಧ್ವಜಸ್ತಂಭಕಟ್ಟೆ, ಊಟದ ಕೊಠಡಿ, ಕೊಳವೆ ಬಾವಿಗೆ ಪಂಪ್‌ ಅಳವಡಿಕೆ, ಗೇಟ್‌ ನಿರ್ಮಾಣ, ಪೀಠೊಪಕರಣ, ಅಕ್ಷರ ಕೈತೋಟ ನಿರ್ಮಾಣ, ರಂಗಮಂದಿರ ನಿರ್ಮಾಣ ಮೊದಲಾದ ಕೊಡುಗೆ ನೀಡಲಾಗಿದೆ.

ಗುಣಮಟ್ಟಕ್ಕೆ ಒತ್ತು
ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹಾಗೂ ಶಾಲೆಯ ವಾತಾವರಣ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿರುವಂತೆ ಯೋಜನೆ ರೂಪಿಸಲಾಗುತ್ತಿದೆ. ಸುಸಜ್ಜಿತ ರಂಗಮಂದಿರ ನಿರ್ಮಾಣ, ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ದೊರೆಯುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ.
ಇಸ್ಮಾಯಿಲ್‌ ಅಧ್ಯಕ್ಷರು, ಶಾಲಾ ಮೇಲುಸ್ತುವಾರಿ ಸಮಿತಿ

 ಹೆತ್ತವರ ಪ್ರೋತ್ಸಾಹ
ಶಿಕ್ಷಣ ಇಲಾಖೆ ಮಾರ್ಗದರ್ಶನದೊಂದಿಗೆ ಶಾಲೆಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಶಿಕ್ಷಣದಲ್ಲೂ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದು, ಶಿಕ್ಷಣದ ಜತೆಗೆ ಅಕ್ಷರ ಕೈತೋಟದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಹೆತ್ತವರ ಪ್ರೋತ್ಸಾಹವೂ ಉತ್ತಮವಾಗಿದೆ.
ಲೀಲಾವತಿ ಕೆ., ಮುಖ್ಯ ಶಿಕ್ಷಕರು, ಸ.ಹಿ.ಪ್ರಾ. ಶಾಲೆ ಪಿಲಿಗೂಡು

 ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next