ಚಿತ್ರದುರ್ಗ: ಜನರ ಚಲನವಲನಗಳ ಮೇಲೆ ಕಣ್ಣಿಡಲು ಪೊಲೀಸ್ ಇಲಾಖೆಗೆ ನೆರವಾಗುವ ಉದ್ದೇಶದಿಂದ ವೇದಾಂತ ಕಬ್ಬಿಣದ ಅದಿರು ಸಂಸ್ಥೆಯಿಂದ ಡ್ರೋಣ್ ಕ್ಯಾಮೆರಾ ಹಾಗೂ ಟ್ಯಾಬ್ ನೀಡಲಾಯಿತು. ಈ ವೇಳೆ ಮಾತನಾಡಿದ ಸಂಸ್ಥೆಯ ಕರ್ನಾಟಕ ಸಿಎಸ್‌ಆರ್ ಸದಸ್ಯ ರವಿ ನಾಯಕ್, ವೇದಾಂತ ಸಂಸ್ಥೆ ಸಾಧ್ಯವಿರುವ ಎಲ್ಲ ವಿಧಾನಗಳ ಮೂಲಕ ಎಲ್ಲ ಪಾಲುದಾರರ ಮತ್ತು ಸಮುದಾಯಗಳ ರಕ್ಷಣೆ ಮತ್ತು ಸುರಕ್ಷತೆಗಾಗಿ ಅವಿರತವಾಗಿ ಶ್ರಮಿಸುತ್ತಿದೆ. ಸಾಮಾಜಿಕ ಅಂತರದ ನಿಯಮಗಳು ಜಾರಿಯಲ್ಲಿರುವಾಗ, ಡಿಜೆಐ ಮ್ಯಾವಿಕ್ 2 ಪ್ರೊ ಡ್ರೋಣ್ ಕ್ಯಾಮೆರಾ ಚಿತ್ರದುರ್ಗ ಜಿಲ್ಲೆಯ ದೊಡ್ಡ ಪ್ರದೇಶದ ಎಸ್ಪಿ ಕಚೇರಿಗೆ ನೇರ ವೈಮಾನಿಕ ನೋಟವನ್ನು ಒದಗಿಸುತ್ತದೆ. ಇದು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಗರಿಷ್ಠ 65 ಕಿಮೀ ವೇಗ ಮತ್ತು ಗರಿಷ್ಠ ಟೇಕಾಫ್ ಎತ್ತರ 5000 ಮೀಟರ್ ಸಾಮರ್ಥ್ಯ ಹೊಂದಿದೆ. ಇದು ಅ ಧಿಕಾರಿಗಳಿಗೆ ನೆರವಾಗಲಿದೆ ಎಂದು ತಿಳಿಸಿದರು.
ಸಿಇಒ ಸೌವಿಕ್ ಮಜುಂದಾರ್ ಮಾತನಾಡಿ, ಸಂಕಟದ ಸಂದರ್ಭದಲ್ಲಿ ಸಮುದಾಯವನ್ನು ಬೆಂಬಲಿಸುವಲ್ಲಿ ವೇದಾಂತ ಸಂಸ್ಥೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಡ್ರೋಣ್ ಕ್ಯಾಮೆರಾ ಜನರ ಸಂಚಾರವನ್ನು ಸಮರ್ಥವಾಗಿ ಮೇಲ್ವಿಚಾರಣೆ ಮಾಡಲು ಅಧಿಕಾರಿಗಳಿಗೆ ಸಹಕಾರಿಯಾಗಲಿದೆ. ಈ ಮೂಲಕ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಕೃಷ್ಣಾ ರೆಡ್ಡಿ ಮಾತನಾಡಿ, ಕೋವಿಡ್ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುವವರಿಗೆ ಬೆಂಬಲ ನೀಡಿದ್ದೇವೆ. ಜಿಲ್ಲೆಯ ಜನತೆಗೆ ಸುರಕ್ಷಿತ ವಾತಾವರಣ ಒದಗಿಸುವ ಉದ್ದೇಶದಿಂದ ಅಗತ್ಯ ನೆರವನ್ನು ಸಾಧ್ಯವಾದ ರೀತಿಯಲ್ಲಿ ನಮ್ಮ ಸಂಸ್ಥೆಯ ಸಿಎಸ್‌ಆರ್ ನೀಡಲಾಗಿದೆ. ಈಗ ಒದಗಿರುವ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ಇದರ ಭಾಗವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ಗೆ 1 ಕೋಟಿ ರೂ. ದೇಣಿಗೆ ನೀಡಿದ್ದೇವೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಕೋವಿಡ್-19 ಚಿಕಿತ್ಸಾ ವಿಭಾಗದಲ್ಲಿ ಅಳವಡಿಸಲು 10 ಐಸಿಯು ಕೋಟ್‌ಗಳು ಮತ್ತು 10 ಮಲ್ಟಿ-ಪ್ಯಾರಾ ಮಾನಿಟರ್ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದೇವೆ. ಕೋವಿಡ್ -19 ರೋಗದ ವಿರುದ್ಧ ರಾಷ್ಟ್ರವ್ಯಾಪಿ ಹೋರಾಟವನ್ನು ಬೆಂಬಲಿಸುವ ಕೆಲವು ಉಪಕ್ರಮಗಳನ್ನು ವೇದಾಂತ ಯೋಜಿಸಿದೆ. ಗೋವಾ, ಕರ್ನಾಟಕ ಮತ್ತು ಜಾರ್ಖಂಡ್‌ನಲ್ಲಿ ಹೆಚ್ಚಿನ ಉಪಕ್ರಮಗಳ ಅನುಷ್ಠಾನವನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಡ್ರೋಣ್ ಕ್ಯಾಮೆರಾ ಪಡೆದುಕೊಂಡರು.