ಬೆಳಗಾವಿ: ಹಳ್ಳಿಗಳಲ್ಲಿ ಮೊದಲಿನಿಂದಲೂ ಹೊಂದಿರುವ ಒಟ್ಟು ಭೂಮಿಯ ಸರಿಯಾದ ಅಳತೆ, ವಿಸ್ತೀರ್ಣ ಹಾಗೂ ದಾಖಲೆ ಇಲ್ಲದೆ ವಿವಾದಕ್ಕೆ ಕಾರಣವಾಗಿದ್ದ ಆಸ್ತಿ ಕಲಹಕ್ಕೆ ಅಂತ್ಯ ಹಾಡಲು ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆ ಮೂಲಕ ಹೊಸ ಆಶಾಕಿರಣ ಮೂಡಿದ್ದು, ಜಿಲ್ಲೆಯಲ್ಲಿ ಸದ್ಯ ಪ್ರಾಯೋಗಿಕವಾಗಿ ಆರು ಹಳ್ಳಿಗಳಲ್ಲಿ ಡ್ರೋಣ್‌ಸರ್ವೇ ಮುಕ್ತಾಯಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಮಹಾತ್ವಾಕಾಂಕ್ಷಿ ಸ್ವಾಮಿತ್ವ ಯೋಜನೆ ಜಿಲ್ಲೆಯಲ್ಲಿ ಆರಂಭಗೊಂಡಿದ್ದು, ಆರು ಹಳ್ಳಿಗಳಲ್ಲಿರುವ ಸಂಪೂರ್ಣ ಆಸ್ತಿಗಳ ಡ್ರೋನ್ ಆಧಾರಿತ ಸರ್ವೇ ಮುಕ್ತಾಯಗೊಂಡಿದೆ. ಇನ್ನು ಮುಂದೆ ಹಂತ ಹಂತವಾಗಿ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಭೂ ದಾಖಲೆಗಳ ಇಲಾಖೆ, ಪ್ರತಿ ತಿಂಗಳಿಗೆ ಪ್ರತಿಯೊಂದು ತಾಲೂಕಿನಲ್ಲಿ ತಲಾ ಎಂಟು ಗ್ರಾಪಂಗಳನ್ನು ಮಾಡಬೇಕೆಂಬ ಗುರಿ ಹೊಂದಲಾಗಿದೆ. ಅಥಣಿ ತಾಲೂಕಿನ ಅರಟಾಳ ಹಾಗೂ ಬಡಚಿ ಗ್ರಾಪಂಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದೆ. ಈ ಎರಡೂ ಗ್ರಾಪಂಗಳ ವ್ಯಾಪ್ತಿಯ ಅರಟಾಳ, ಬಡಗಿ, ಹಾಲಹಳ್ಳಿ, ಬಡಚಿ, ದೇಸರಟ್ಟಿ ಹಾಗೂ ಪೋತನಟ್ಟಿ ಗ್ರಾಮಗಳಲ್ಲಿ ಡ್ರೋಣ್ ಆಧಾರಿತ ಸರ್ವೇ ಮುಗಿದಿದೆ.
ವಿಸ್ತರಣೆ ಆಗಲಿದೆ ಸ್ವಾಮಿತ್ವ: ಜಾಗದ ಹಕ್ಕುಪತ್ರ ಇಲ್ಲದೇ ಸಮಸ್ಯೆ ಅನುಭವಿಸುತ್ತಿದ್ದವರಿಗೆ ಈ ಯೋಜನೆ ಆಶಾಕಿರಣ ಮೂಡಿಸಿದೆ. ಕಂದಾಯ ಇಲಾಖೆ ಮತ್ತು ಭಾರತೀಯ ಸರ್ವೇಕ್ಷಣ ಸಂಸ್ಥೆಯ ಸಹಭಾಗಿತ್ವದಲ್ಲಿ ಈಗಾಗಲೇ ಆರು ಗ್ರಾಮಗಳಲ್ಲಿ 15 ದಿನಗಳ ಅವ ಧಿಯಲ್ಲಿ ಡ್ರೋಣ್ ಆಧಾರಿತ ಆಸ್ತಿ ಸರ್ವೇ ಮುಗಿದಿದ್ದು, ಇನ್ನು ಇದು ಎಲ್ಲ ಗ್ರಾಮಗಳಿಗೂ ವಿಸ್ತರಣೆ ಆಗಲಿದೆ. ಜಿಪಂ ಸಿಇಒ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಸೂಚನೆ ಬಂದಿದ್ದು, ಎಲ್ಲ ಗ್ರಾಪಂಗಳಲ್ಲಿ ಸೆಪ್ಟೆಂಬರ್ ಎರಡನೇ ವಾರದಲ್ಲಿ ಸಭೆ ನಡೆಸಬೇಕು. ಯೋಜನೆ ಅನುಷ್ಠಾನ ಬಗ್ಗೆ ಜಾಗೃತಿ ಮೂಡಿಸಬೇಕು. ಆಸ್ತಿ ಗುರುತು ಮಾಡುವ ವೇಳಾಪಟ್ಟಿ ಹಾಗೂ ಗ್ರಾಮಸಭೆಗಳ ಬಗ್ಗೆ ಮಾಹಿತಿಯನ್ನು ಪ್ರತಿ ತಿಂಗಳ 5ನೇ ತಾರೀಖೀನೊಳಗೆ ಸಲ್ಲಿಸಬೇಕು ಎಂಬ ಸೂಚನೆ ಬಂದಿದೆ.
ಹಳ್ಳಿಗರಲ್ಲಿ ಆಶಾಭಾವನೆ: ಹಳ್ಳಿಗಳಲ್ಲಿ ವಾಸಿಸುತ್ತಿರುವ ಅನೇಕರಿಗೆ ತಮ್ಮ ಆಸ್ತಿಯ ಒಟ್ಟು ವಿಸ್ತೀರ್ಣ ಹಾಗೂ ಹದ್ದುಬಸ್ತಿನ ಬಗ್ಗೆ ಯಾವುದೇ ದಾಖಲಾತಿಗಳಿಲ್ಲ. ಗ್ರಾಪಂನ ದಾಖಲೆಗಳಲ್ಲಿ ಆಸ್ತಿ ಮಾಲೀಕತ್ವದ ಹೆಸರಿದ್ದರೂ ಅಳತೆ ಹಾಗೂ ದಾಖಲೆ ಇಲ್ಲದೇ ಸಮಸ್ಯೆ ಅನುಭವಿಸುವಂತಾಗಿತ್ತು. ಇದರಿಂದ ತಮ್ಮ ಆಸ್ತಿ ಮೇಲೆ ಸಾಲ ಪಡೆಯುವುದಾಗಲಿ, ಮಾರಾಟ ಮಾಡಲು ಆಗುತ್ತಿಲ್ಲ. ಹೀಗಾಗಿ ಹಕ್ಕುಪತ್ರ ನೀಡುವ ಸ್ವಾಮಿತ್ವ ಯೋಜನೆ ಜನರಲ್ಲಿ ಆಶಾಭಾವನೆ ಮೂಡಿಸಿದೆ. ಜಿಲ್ಲೆಯ ಎಲ್ಲ ಹಳ್ಳಿಗಳಲ್ಲಿ ಡ್ರೋಣ್ ಆಧಾರಿತ ಸರ್ವೇ ನಡೆಸಿ, ನಿಖರವಾದ ಸ್ಥಳ ಗುರುತಿಸಿ ಹಕ್ಕುಪತ್ರ ವಿತರಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ಇದಕ್ಕಾಗಿ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಈಗಾಗಲೇ ಪ್ರತಿ ತಾಲೂಕಿನ ಎಂಟು ಗ್ರಾಪಂಗಳಲ್ಲಿ ಸರ್ವೇ ನಡೆಸುವ ಬಗ್ಗೆ ಸೂಚನೆ ಬಂದಿದ್ದರಿಂದ ಎಲ್ಲ ಇಲಾಖೆಗಳು ಜತೆಗೂಡಿ ಕಾರ್ಯಪ್ರವೃತ್ತಗೊಂಡಿವೆ. ಸರ್ವೇ ಆಫ್ ಇಂಡಿಯಾ ನೇತೃತ್ವದಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಂದಾಯ ಇಲಾಖೆ ಸಹಯೋಗದೊಂದಿಗೆ ಗ್ರಾಪಂ ಪಿಡಿಒ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಸರ್ವೇಯರ್‌ಗಳು ಮತ್ತು ಭಾರತೀಯ ಸರ್ವೇಕ್ಷಣ ಸಂಸ್ಥೆ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ.
ಡ್ರೋಣ್ ಸರ್ವೇ ಕಾರ್ಯ ಹೇಗೆ?
ಗ್ರಾಪಂ ಅಧಿಕಾರಿಗಳ ಜತೆಗೆ ಭೂಮಾಪಕರು ಗ್ರಾಮದ ಗಡಿ ಮತ್ತು ಪ್ರತಿ ಆಸ್ತಿಯನ್ನು ಮಾಲೀಕರ ಸಮ್ಮುಖದಲ್ಲಿಯೇ ಪರಿಶೀಲಿಸಿ ಬಿಳಿ ಬಣ್ಣದಲ್ಲಿ ಗುರುತು ಮಾಡುತ್ತಾರೆ. ನಂತರ ಡ್ರೋಣ್ ಆಧಾರಿತ ಸರ್ವೇ ನಡೆಸಿ ಸೊತ್ತುಗಳ ವಿವಿಧ ಫೋಟೋಗಳನ್ನು ಸೆರೆ ಹಿಡಿಯಲಾಗುತ್ತದೆ. ಈ ಫೋಟೋಗಳನ್ನು ಸಂಸ್ಕರಿಸಿ, ಬಿಳಿ ಬಣ್ಣದಲ್ಲಿ ಗುರುತಿಸಲಾದ ಆಸ್ತಿಗಳ ಕೈ ನಕಾಶೆ ತಯಾರಿಸಲಾಗುತ್ತದೆ. ಇದೆಲ್ಲವೂ ಸರಿಯಾಗಿದ್ದರೆ ಸರ್ಕಾರದ ದಾಖಲಾತಿಗೆ ರವಾನಿಸಲಾಗುತ್ತದೆ. ದಾಖಲಾತಿ ಮುಗಿದ ನಂತರ ಸಂಬಂಧಿ ಸಿದವರಿಗೆ ಹಕ್ಕುಪತ್ರ ನೀಡಲಾಗುತ್ತದೆ.