Advertisement

ಮದುವೆಗೆಂದು ಹಾರಿಬಿಟ್ಟ ಡ್ರೋಣ್‌ ಕೆಮರಾದಲ್ಲಿ ಬಯಲಾಯ್ತು ಗುಟ್ಟು!

10:45 PM Mar 17, 2020 | mahesh |

ಕೋಟ: ಐರೋಡಿ ಗ್ರಾ.ಪಂ. ವ್ಯಾಪ್ತಿಯ 1ನೇ ಹಾಗೂ 2ನೇ ವಾರ್ಡ್‌ಗೆ ನೀರು ಪೂರೈಕೆ ಮಾಡುವ ಗೋಳಿಬೆಟ್ಟಿನಲ್ಲಿರುವ ನೀರಿನ ಟ್ಯಾಂಕ್‌ನ ಮೇಲ್ಭಾಗಕ್ಕೆ ಹಾನಿಯಾಗಿದ್ದು ಸಂಪೂರ್ಣವಾಗಿ ತೆರೆದ ಸ್ಥಿತಿಯಲ್ಲಿದೆ. ಹೀಗಾಗಿ ಕಸಕಡ್ಡಿ ಮುಂತಾದವುಗಳು ನೀರು ಸೇರುತ್ತಿದ್ದು ಅಶುದ್ಧ ನೀರು ಪೂರೈಕೆಯಾಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಕಾಮಗಾರಿಯಲ್ಲಿ ಲೋಪ?
ಈ ಟ್ಯಾಂಕ್‌ ಕೇವಲ 14 ವರ್ಷದ ಹಿಂದೆ ನಿರ್ಮಿಸ ಲಾಗಿತ್ತು. ಆದರೆ ಕಾಮಗಾರಿ ಸಂದರ್ಭ ಸರಿಯಾದ ಗುಣಮಟ್ಟವನ್ನು ಅನುಸರಿಸದಿರುವುದರಿಂದ ಅಲ್ಪ ಅವಧಿಯಲ್ಲೇ ಟ್ಯಾಂಕ್‌ನ ಮೇಲ್ಭಾಗ ಕುಸಿದಿದ್ದು ಸಂಪೂರ್ಣ ಶಿಥಿಲವಾಗಿದೆ. ಕಾಮಗಾರಿ ಗುಣಮಟ್ಟ ಕುರಿತು ಆರಂಭದಲ್ಲೇ ಅಪಸ್ವರ ವ್ಯಕ್ತವಾಗಿ ದೂರು ಕೂಡ ನೀಡಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಹೊಸ ಟ್ಯಾಂಕ್‌ ನಿರ್ಮಿಸಿ
ಇದೀಗ ಟ್ಯಾಂಕ್‌ನ ಕುಸಿದ ಮೇಲ್ಭಾಗವನ್ನು ದುರಸ್ತಿಗೊಳಿಸಲು ಗ್ರಾಮ ಪಂಚಾಯತ್‌ ಯೋಜನೆ ರೂಪಿಸಿದೆ. ಆದರೆ ಟ್ಯಾಂಕ್‌ ಸಂಪೂರ್ಣ ಶಿಥಿಲಗೊಂಡಿರುವುದರಿಂದ ದುರಸ್ತಿಪಡಿಸಿದರೆ ಪ್ರಯೋಜನವಿಲ್ಲ, ಆದ್ದರಿಂದ ಇದನ್ನು ತೆರವು ಗೊಳಿಸಿ ಹೊಸ ಟ್ಯಾಂಕ್‌ ನಿರ್ಮಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಬಯಲಾದ ಗುಟ್ಟು !
ವಿವಾಹ ಕಾರ್ಯಕ್ರಮವೊಂದರ ವೀಡಿಯೋ ಚಿತ್ರೀಕರಣಕ್ಕಾಗಿ ಡ್ರೋಣ್‌ ಕೆಮರಾ ಉಪಯೋಗಿಸಲಾಗಿತ್ತು. ಆಗ ಟ್ಯಾಂಕ್‌ನ ಮೇಲ್ಭಾಗ ಸಂಪೂರ್ಣ ತೆರೆದ ಸ್ಥಿತಿಯಲ್ಲಿರುವುದು ಗಮನಕ್ಕೆ ಬಂದಿದೆ. ಅನಂತರ ಸ್ಥಳೀಯರು ಆ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ಯಾಂಕ್‌ನಿಂದ ಪೂರೈಕೆಯಾಗುತ್ತಿಲ್ಲ
ಅಶುದ್ಧ ನೀರು ಪೂರೈಕೆಯಾಗುತ್ತಿರುವ ಕುರಿತು ಯಾವುದೇ ಗ್ರಾಮಸ್ಥರಿಂದ ದೂರು ಬಂದಿಲ್ಲ. ಕಳೆದ ವರ್ಷ ಟ್ಯಾಂಕ್‌ ಸ್ವತ್ಛಗೊಳಿಸುವಾಗ ಸ್ವಲ್ಪಮಟ್ಟಿಗೆ ಹಾನಿಯಾಗಿರುವುದು ತಿಳಿದಿತ್ತು ಹಾಗೂ ಕಳೆದ ಎರಡು ತಿಂಗಳಿಂದ ಟ್ಯಾಂಕ್‌ ಮೂಲಕ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಿ ಪಂಪ್‌ನಿಂದ ನೇರವಾಗಿ ನೀಡುತ್ತಿದ್ದೇವೆ. ಇದರ ದುರಸ್ತಿಗಾಗಿ ಕ್ರಿಯಾ ಯೋಜನೆಯಲ್ಲಿ ಈಗಾಗಲೇ 1.5 ಲಕ್ಷ ಮೀಸಲಿರಿಸಿದ್ದೇವೆ. ಹೊಸ ಟ್ಯಾಂಕ್‌ ನಿರ್ಮಿಸಲು ಪಂಚಾಯತ್‌ ಅನುದಾನದಲ್ಲಿ ಅಸಾಧ್ಯ. ಶಾಸಕರು, ಜಿ.ಪಂ. ಅನುದಾನಕ್ಕೆ ಪ್ರಯತ್ನಿಸಲಾಗುವುದು.
-ಮೊಸೆಸ್‌ ರೋಡ್ರಿಗಸ್‌, ಅಧ್ಯಕ್ಷರು ಐರೋಡಿ ಗ್ರಾ.ಪಂ.

Advertisement

ಹೊಸ ಟ್ಯಾಂಕ್‌ ನಿರ್ಮಿಸಿ
ಹಲವು ಸಮಯದಿಂದ ಅಶುದ್ಧ ನೀರು ಪೂರೈಕೆಯಾಗುತ್ತಿದೆ. ಟ್ಯಾಂಕ್‌ ತೆರದ ಸ್ಥಿತಿಯಲ್ಲಿರುವುದರಿಂದ ಪಕ್ಷಿಗಳು ಮೀನು, ಹುಳುಹಪ್ಪಟೆ ಮುಂತಾದ ತ್ಯಾಜ್ಯಗಳನ್ನು ತಂದು ಟ್ಯಾಂಕಿಗೆ ಹಾಕುತ್ತವೆ. ಈಗಿರುವ ಟ್ಯಾಂಕ್‌ ಸಂಪೂರ್ಣ ಶಿಥಿಲಗೊಂಡಿದೆ. ಆದ್ದರಿಂದ ಹೊಸ ಟ್ಯಾಂಕ್‌ ನಿರ್ಮಿಸಿ ಶುದ್ಧ ನೀರು ಪೂರೈಕೆ ಮಾಡಬೇಕು.
-ಲೋಯಿದ್‌ ರೋಡ್ರಿಗಸ್‌, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next