ಗುಂಡ್ಲುಪೇಟೆ: ರೈತನೋರ್ವನನ್ನು ಕೊಂದು ತಿಂದ ಹುಲಿಯ ಸೆರೆಗಾಗಿ ತಾಲೂಕಿನ ಚೌಡಹಳ್ಳಿ ಹುಂಡೀಪುರ ಸುತ್ತಮುತ್ತ ಅರಣ್ಯ ಇಲಾಖೆ ಬೀಡು ಬಿಟ್ಟಿದ್ದು, ಎರಡನೇ ದಿನದ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.
ಬಂಡೀಪುರ ಉದ್ಯಾನವನದ ವ್ಯಾಪ್ತಿಯ ಕಾಡಂಚಿನ ಚೌಡಹಳ್ಳಿ-ಹುಂಡೀಪುರ ಗ್ರಾಮಗಳ ನಡುವಿನ ಬೆಟ್ಟ ಗುಡ್ಡಗಳು ಮತ್ತು ಜಮೀನಿನಲ್ಲಿ ಆಗಾಗ ಕಾಣಿಸಿಕೊಂಡು ಭಯಭೀತಿಗೊಳಿಸುತ್ತಿರುವ ಹುಲಿಯ ಹುಡುಕಾಟಕ್ಕೆ ಅರಣ್ಯ ಇಲಾಖೆ ಮೂರು ಸಾಕಾನೆಗಳು ಮತ್ತು ಡ್ರೋಣ್ ಕ್ಯಾಮರಾ ಬಳಕೆ ಮಾಡುತ್ತಿದೆ.
ರೈತ ಶಿವಮಾದಯ್ಯನನ್ನು ಕೊಂದು ತಿಂದಿದ್ದ ಜಾಗದ ಸುತ್ತಮುತ್ತ ಸೇರಿದಂತೆ ಸಮೀಪದ ಗುಡ್ಡ ಪ್ರದೇಶಗಳಲ್ಲಿ ಬಂಡೀಪುರ ಸಮೀಪದ ಶ್ರೀರಾಂಪುರ ಸಾಕಾನೆ ಶಿಬಿರದ ಲಕ್ಷ್ಮೀ, ರೋಹಿತ್ ಮತ್ತು ಜಯಪ್ರಕಾಶ್ ಹೆಸರಿನ ಸಾಕಾನೆಗಳ ಸಹಾಯದಿಂದ ಗುರುವಾರ ಹುಲಿಯ ಹುಡುಕಾಟ ನಡೆಸಲಾ ಯಿತು. ಆದರೆ, ಹುಲಿಯ ಸುಳಿವು ಪತ್ತೆಯಾಗಿಲ್ಲ.
ಡ್ರೋಣ್ ಕಣ್ಣಿಗೆ ಬಿದ್ದ ನಾಲ್ಕು ಹುಲಿಗಳು: ಚೌಡಹಳ್ಳಿ ಸಮೀಪದಲ್ಲಿ ಗುಡ್ಡದಲ್ಲಿ ಡ್ರೋಣ್ ಹಾರಿಸಿದಾಗ ಗುಡ್ಡದ ಅತೀ ಸಮೀಪದಲ್ಲಿಯೇ ನಾಲ್ಕು ಹುಲಿಗಳು ಹೋಗುತ್ತಿರುವುದು ಡ್ರೋಣ್ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಆದರೆ, ಯಾವ ಹುಲಿ ಒಂಟಿಯಾಗಿ ಬಂದು ದಾಳಿ ಮಾಡುತ್ತಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಗೆ ಗೊತ್ತಾಗುತ್ತಿಲ್ಲ. ಒಂಟಿ ಹುಲಿಯು ಕಂಡು ಬಂದರೆ ಮತ್ತು ಬರುವ ಇಂಜಕ್ಷನ್‌ನ್ನು ಶೂಟ್ ಮಾಡಿ ಸೆರೆ ಹಿಡಿಯಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದೆ. ಆದರೆ ಹುಲಿಯೇ ಕಾಣುತ್ತಿಲ್ಲ.
ಬೋನಿಗೂ ಬೀಳದ ವ್ಯಾಘ್ರ: ರೈತನನ್ನು ಕೊಂದು ತಿಂದು ನಾಪತ್ತೆಯಾಗಿರುವ ಹುಲಿರಾಯನ ಬಂಧನ ಕ್ಕಾಗಿ ಚೌಡಹಳ್ಳಿ ಸಮೀಪ ಬೋನನ್ನು ಇಟ್ಟು ಅದರಲ್ಲಿ ಮಾಂಸವನ್ನು ಕಟ್ಟಿ ಹುಲಿಯು ಮಾಂಸದ ವಾಸನೆಗಾಗಿ ಬಂದು ಬೋನಿಗೆ ಬೀಳು ತ್ತದೆ ಎಂದು ಕಾಯುತ್ತಿರುವ ಸಿಬ್ಬಂದಿಗಳಿಗೆ ಚಾಲಾಕಿ ಹುಲಿ ಚಳ್ಳೇಹಣ್ಣು ತಿನ್ನಿಸುತ್ತಿದೆ. ಕಳೆದ ಮೂರು ರಾತ್ರಿಯಿಂದಲೂ ಸಹ ಹುಲಿ ಈ ಬೋನಿನ ಪಕ್ಕದಲ್ಲಿ ಬಂದಿಲ್ಲದಿರುವುದು ಸಹ ಬೋನಿನ ಸಮೀಪದಲ್ಲಿ ಅಳವಡಿಸಿರುವ ಕ್ಯಾಮರಾದಲ್ಲಿ ಕಂಡು ಬಂದಿದೆ.
ನಿಲ್ಲದ ಆತಂಕ: ಈಗಾಗಲೇ ಕೇವಲ ಜಾನುವಾರು ಗಳನ್ನು ಕೊಲ್ಲುತ್ತಿದ್ದ ಹುಲಿ ವ್ಯಕ್ತಿಯೋರ್ವನನ್ನು ಬಲಿ ಪಡೆದಿದ್ದು, ಈ ಭಾಗದಲ್ಲಿ ಆತಂಕವಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಕಾಯಲು ಜಮೀನಿಗೆ ಹೋಗದಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರ ಒತ್ತಡಕ್ಕೆ ಮಣಿದ ಅರಣ್ಯ ಇಲಾಖೆ ತಾತ್ಕಾಲಿಕ ಕ್ಯಾಂಪ್ ಹಾಕಿ ಕೊಂಡು ಇಪ್ಪತ್ತನಾಲ್ಕು ಗಂಟೆಗಳ ಕಾಲ ಕಾರ್ಯಾ ಚರಣೆ ನಡೆಸುತ್ತಿದೆ. ಆದರೂ ಸಹ ಇತ್ತ ಹುಲಿಯು ಸೆರೆಯಾಗಿಲ್ಲ. ಅತ್ತ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಮೂಡಿರುವ ಆತಂಕ ಇನ್ನೂ ದೂರವಾಗಿಲ್ಲ.