ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಎನ್ನಲಾದ ಜೈವಿಕ ಇಂಧನವನ್ನೇ ಬಳಸಿದ ಕಾರು (ಡೀಸೆಲ್ ಕಾರ್ ಡ್ರೈವಥಾನ್) ಜಾಥಾಗೆ ಕೇಂದ್ರ ಸಚಿವ ಅನಂತಕುಮಾರ್ ಶುಕ್ರವಾರ ಚಾಲನೆ ನೀಡಿದರು.
ಶೃಂಗೇರಿ ಶಾರದಾ ಪೀಠ ಹಾಗೂ ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ ಸ್ಥಾಪಿಸಿರುವ ಸೆಂಟರ್ ಫಾರ್ ಇನೋವೇಶನ್, ರಿಸರ್ಚ್ ಕನ್‌ಸಲ್ಟೆನ್ಸಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ಜಾಥಾದಲ್ಲಿ 35 ಕಾರುಗಳು ಪಾಲ್ಗೊಂಡಿದ್ದವು. ಜಾಥಾ ಬೆಂಗಳೂರಿನಿಂದ ಶೃಂಗೇರಿಗೆ ತೆರಳಿ ಭಾನುವಾರ ನಗರಕ್ಕೆ ಹಿಂತಿರುಗಲಿವೆ.
ಈ ವೇಳೆ ಶೃಂಗೇರಿ ಸೇರಿ ಪವಿತ್ರ ಕ್ಷೇತ್ರಗಳಲ್ಲಿ ಜೈವಿಕ ಇಂಧನಕ್ಕಾಗಿ ಬೆಳೆಸುವ ಗಿಡಗಳನ್ನು ನೆಟ್ಟು ಸ್ಥಳೀಯರಲ್ಲಿ ಜಾಗೃತಿ ಮೂಡಿಸುವುದು ಜಾಥಾದ ಉದ್ದೇಶವಾಗಿದೆ. ಜಾಥಾಗೆ ಚಾಲನೆ ನೀಡಿದ ಕೇಂದ್ರ ಸಚಿವ ಅನಂತಕುಮಾರ್, “ದೇಶದಲ್ಲಿ ಮಾಲಿನ್ಯ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಜೈವಿಕ ಇಂಧನ ಬಳಕೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ.
ಈಗಾಗಲೇ ಪೆಟ್ರೋಲ್‌ಗೆ ಶೇ.5ರಷ್ಟು ಮದ್ಯಸಾರ ಮಿಶ್ರಣ ಮಾಡಿ ಬಳಸಲು ಪ್ರೋತ್ಸಾಹಿಸುತ್ತಿದ್ದು, ಈ ಪ್ರಮಾಣವನ್ನು ಶೇ.10ಕ್ಕೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಡೀಸೆಲ್‌ಗೂ ಜೈವಿಕ ಡೀಸೆಲ್ ಅನ್ನು ಶೇ.5 ಇಲ್ಲವೇ ಶೇ.10ರಷ್ಟು ಮಿಶ್ರಣ ಮಾಡಿ ಬಳಸುವ ಸಂಬಂಧ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೆàಂದ್ರ ಪ್ರಧಾನ್ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ದೆಹಲಿ, ಬೆಂಗಳೂರು ಸೇರಿ ಇತರೆ ಮಹಾನಗರಗಳಲ್ಲಿ ಜೈವಿಕ ಡೀಸೆಲ್ ಬಳಕೆ ಬಗ್ಗೆ ಯೋಜನೆ ರೂಪಿಸಿ ನಂತರ ಇತರೆ ನಗರಗಳಿಗೆ ವಿಸ್ತರಿಸಲಾಗುವುದು. ಒಂದು ಕೋಟಿ ಜನ ನೆಲೆಸಿರುವ ಬೆಂಗಳೂರಿನಲ್ಲಿ 75 ಲಕ್ಷ ವಾಹನಗಳಿದ್ದು, ಮಾಲಿನ್ಯ ಪ್ರಮಾಣ ತಗ್ಗಿಸಲು ಜೈವಿಕ ಇಂಧನ ಬಳಕೆಯೇ ಪರಿಹಾರ ಎಂದು ತಿಳಿಸಿದರು.
ನ್ಯಾಷನಲ್ ಬಯೋಡೀಸೆಲ್ ವರ್ಕಿಂಗ್ ಗ್ರೂಪ್ ಅಧ್ಯಕ್ಷ ವೈ.ಬಿ.ರಾಮಕೃಷ್ಣ, “ಬಯೋಡೀಸೆಲ್ ಪಿತಾಮಹ ಉಡುಪಿ ಶ್ರೀನಿವಾಸ್ ಅವರೊಂದಿಗೆ ರಾಜ್ಯದಲ್ಲಿ 2003ರಲ್ಲೇ ರಾಷ್ಟ್ರೀಯ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಆಗ ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದ ಅನಂತಕುಮಾರ್ ನೆರವು ನೀಡಿದ್ದರು. ಇದೀಗ ಕೇಂದ್ರ ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳು ಜೈವಿಕ ಇಂಧನ ಬಳಕೆಗೆ ಪ್ರೇರಣೆ ನೀಡುವಂತಿವೆ ಎಂದರು.
ಶೃಂಗೇರಿ ಮಠದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ವಿ.ಆರ್.ಗೌರಿಶಂಕರ್, ಸಿಐಐಆರ್‌ಸಿ ಕೇಂದ್ರ ಸ್ಥಾಪನೆಯಾಗಿ ಐದು ತಿಂಗಳು ಕಳೆಯುವುದರೊಳಗೆ ಇಂತಹ ಜಾಥಾ ಹಮ್ಮಿಕೊಂಡಿರುವುದು ಸಂತಸದ ಸಂಗತಿ ಎಂದು ಹೇಳಿದರು.