Advertisement
ಈ ಸಂಬಂಧ ಚಾಲಕ ಸುನೀಲ್ ಕುಮಾರ್ ತಾಯಿ ರತ್ನಮ್ಮ, ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರು ಸ್ವೀಕರಿಸಿರುವ ಪೊಲೀಸರು ಗಂಭೀರ ಸ್ವರೂಪವಲ್ಲದ ಪ್ರಕರಣ(ಎನ್‌ಸಿಆರ್) ದಾಖಲಿಸಿಕೊಂಡಿದ್ದಾರೆ. ಗೂಡ್ಸ್ ವಾಹನ ಚಾಲಕರಾಗಿರುವ ಸುನೀಲ್ ಕುಮಾರ್, ಜರಗನಹಳ್ಳಿಯಲ್ಲಿ ತಾಯಿ ರತ್ನಮ್ಮ ಜತೆ ವಾಸವಾಗಿದ್ದಾರೆ. ಶುಕ್ರವಾರ ಹಲಸೂರು ಗೇಟ್ ಸಂಚಾರ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮಹಾಸ್ವಾಮಿ, ಚಲಿಸುವ ವಾಹನವನ್ನೇರಿ ಚಾಲಕ ಸುನೀಲ್ ಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಕೂಡ ನಡೆಸಿದ್ದರು. ಈ ವಿಚಾರವನ್ನು ತಾಯಿ ರತ್ನಮ್ಮಗೆ ಕರೆ ಮಾಡಿ ಹೇಳಿದ್ದ ಸುನೀಲ್ ಕುಮಾರ್ ಇದುವರೆಗೂ ಮನೆಗೆ ಬಂದಿಲ್ಲ.
Related Articles
Advertisement
ಮಹಾಸ್ವಾಮಿಯ ಮಾನಸಿಕ ಸ್ಥಿರತೆ ಪರೀಕ್ಷೆ: ಜತೆಗೆ ಥಣಿಸಂದ್ರದಲ್ಲಿರುವ ಸಂಚಾರ ತರಬೇತಿ ಸಂಸ್ಥೆಯಲ್ಲಿ (ಟ್ರಾಫಿಕ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್) ಒತ್ತಡ ನಿರ್ವಹಣೆ ಹಾಗೂ ಮೃಧುಕೌಶಲ್ಯ (ತಾಳ್ಮೆಯಿಂದ ವ್ಯವಹರಿಸುವ) ಕುರಿತ ಹತ್ತು ದಿನಗಳ ಕಡ್ಡಾಯ ತರಬೇತಿ ಪಡೆದು ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಲಾಗಿದೆ. ನಂತರ ಸಿಬ್ಬಂದಿಯ ಮಾನಸಿಕ ಸ್ಥಿರತೆ ಬಗ್ಗೆ ಪರೀಕ್ಷೆ ನಡೆಸಲಾಗುವುದು. ಈ ವೇಳೆ ಆತ ಅನುತ್ತೀರ್ಣಗೊಂಡರೆ ಮುಂದಿನ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿ ತಿಳಿಸಿದರು.
ಸಿಬ್ಬಂದಿ ಕೆಟ್ಟ ವರ್ತನೆ ಸಾಬೀತು: ಸಿಬ್ಬಂದಿ ಹಾಗೂ ಚಾಲಕನ ನಡುವಿನ ಹೊಡೆದಾಟದ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಿಬ್ಬಂದಿ ವಿರುದ್ಧ ವಿಚಾರಣೆ ನಡೆಸಿ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಈ ವರದಿ ಪ್ರಕಾರ ಹೆಡ್ ಕಾನ್‌ಸ್ಟೆಬಲ್ ಮಹಾಸ್ವಾಮಿ ಚಾಲಕನ ಜತೆ ನಡೆದುಕೊಂಡ ರೀತಿ ತಪ್ಪು ಎಂಬುದು ಸಾಬೀತಾಗಿದೆ. ಹೀಗಾಗಿ ಆತನನ್ನು ಪೊಲೀಸ್ ಠಾಣೆ ಕರ್ತವ್ಯದಿಂದ ತೆಗೆದು (ಎಕ್ಸಿಕ್ಯೂಟಿವ್ ಹುದ್ದೆ) ಹಾಕಲಾಗಿದೆ ಎಂದು ಅಧಿಕಾರಿ ವಿವರಿಸಿದರು.
ಚಾಲಕನ ವಿರುದ್ಧವೇ ಎಫ್ಐಆರ್ – ಸಾರ್ವಜನಿಕರ ಆಕ್ರೋಶ: ಹೆಡ್ ಕಾನ್‌ಸ್ಟೆಬಲ್ ಮಹಾಸ್ವಾಮಿ ಗೂಡ್ಸ್ ವಾಹನ ಚಾಲಕನ ಮೇಲಿನ ಹಲ್ಲೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಸಿಬ್ಬಂದಿಯನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದರು. ಈ ನಡುವೆಯೂ ಸಿಬ್ಬಂದಿ ಮಹಾಸ್ವಾಮಿ ನೀಡಿದ ದೂರಿನ ಮೇರೆಗೆ ಎಸ್.ಜೆ.ಪಾರ್ಕ್ ಪೊಲೀಸರು, ಚಾಲಕನ ವಿರುದ್ಧವೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದರಿಂದ ಸಾಮಾಜಿಕ ಜಾಲತಾಣ ಬಳಕೆದಾರರು, ನಗರ ಪೊಲೀಸರ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ ಸಿಬ್ಬಂದಿಗೆ ಯಾವುದೇ ಶಿಕ್ಷೆಯಾಗಿಲ್ಲ. ಸೂಕ್ತ ದಾಖಲೆಗಳನ್ನು ತೋರಿಸಿದರೂ ಹಲ್ಲೆಗೊಳಗಾದ ಅಮಾಯಕ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಾಲೆಂಜ್ ಮಾಡಿದ ಚಾಲಕ: ಈ ನಡುವೆ ಮೈಸೂರು ಮೂಲದ ಕ್ಯಾಬ್ ಚಾಲಕನೊಬ್ಬ ಸೆಲ್ಫಿ ವಿಡಿಯೋ ಮಾಡಿ, ನಗರ ಸಂಚಾರ ಪೊಲೀಸರಿಗೆ ಸವಾಲು ಹಾಕಿದ್ದಾರೆ. “ನಮ್ಮ ಚಾಲಕರ ಮೇಲೆ ನೀನು ಕೈ ಮಾಡಿದ್ದಿಯ. ನನ್ನ ಬಳಿ ಯಾವುದೇ ದಾಖಲೆಗಳಿಲ್ಲ. ನಾಲ್ಕು ವರ್ಷದ ಹಿಂದೆಯೇ ಎಲ್ಲ ದಾಖಲೆಗಳ ಅವಧಿ ಮುಗಿದಿವೆ. ನಾನು ಇದೇ ಅ.2ರಂದು ಬೆಂಗಳೂರಿಗೆ ಬರುತ್ತಿದ್ದೇನೆ. ತಾಕತ್ತಿದ್ರೆ ನನ್ನ ಕಾರು ತಡೆಯಿರಿ,’ ಎಂದು ತನ್ನ ಕಾರಿನ ನಂಬರ್ ಸಮೇತ ಸೆಲ್ಫಿ ವಿಡಿಯೋ ಮಾಡಿ ಫೇಸ್‌ಬುಕ್ ಮೂಲಕ ಹರಿ ಬಿಟ್ಟಿದ್ದಾರೆ.