ಹುಬ್ಬಳ್ಳಿ: ಇಲ್ಲಿನ ದೇಸಾಯಿ ವೃತ್ತದ ಬಳಿ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಆದರೆ, ಹೊರ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ಬರುವ ಭಾರಿ ವಾಹನಗಳ ಚಾಲಕರಿಗೆ ಸಮರ್ಪಕ ಮಾಹಿತಿ ಇಲ್ಲದೆ ಇದೇ ಮಾರ್ಗದಲ್ಲಿ ಸಂಚರಿಸಿ ನಂತರ ಪರದಾಡುವಂತಾಗಿದೆ.
ಒಂದು ವಾರದಿಂದ ಕೋರ್ಟ್ ವೃತ್ತದಿಂದ ಕೇಶ್ವಾಪುರ ಮಾರ್ಗವಾಗಿ ತೆರಳುವ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದೆ. ಆದರೆ ಈ ಮಾರ್ಗದಿಂದ ತೆರಳುವ ವಾಹನಗಳಿಗೆ ಈ ಭಾಗದಲ್ಲಿ ರಸ್ತೆ ಬಂದ್ ಆಗಿದೆ ಎಂದು ಒಂದೇ ಒಂದು ಫಲಕವಿಲ್ಲ. ಅದೂ ಅಲ್ಲದೇ ದ್ವಿಪಥದಲ್ಲಿ ಒಂದು ರಸ್ತೆ ಬಂದ್ ಮಾಡಿ, ಇನ್ನೊಂದು ರಸ್ತೆ ತೆರೆದು ಬಿಟ್ಟಿದ್ದು, ಆ ರಸ್ತೆಯ ಮೂಲಕ ಸಾಗುವ ವಾಹನಗಳು ಮುಂದೆ ದಾರಿ ಇಲ್ಲದೆ ಸಿಕ್ಕಿಹಾಕಿಕೊಳ್ಳುತ್ತಿವೆ. ಸೋಮವಾರ ರಾತ್ರಿ ಭಾರಿ ವಾಹನವೊಂದು ರಸ್ತೆ ಮಧ್ಯದಲ್ಲಿ ಸಿಕ್ಕಿಕೊಂಡಿತ್ತು. ಹಿಂಬದಿ ವಾಹನ ಚಲಾಯಿಸಲೂ ಆಗದೆ, ಮುಂದೆ ಸಾಗಲೂ ಆಗದೆ ರಸ್ತೆಯ ಮಧ್ಯದಲ್ಲಿ ಸಿಕ್ಕಿಕೊಂಡಿತ್ತು.
ಮಾರ್ಗಸೂಚಿ ಅವಶ್ಯ: ದೇಸಾಯಿ ವೃತ್ತದಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡುವ ಕಾರಣಕ್ಕೆ ಕಳೆದ ಕೆಲವು ತಿಂಗಳಿಂದ ಕೇಶ್ವಾಪುರ ಮಾರ್ಗದಲ್ಲಿ ತೆರಳುವ ಭಾರಿ ವಾಹನಗಳನ್ನು ಬಂದ್ ಮಾಡಲಾಗಿತ್ತು. ಆದರೆ ಯಾವುದೇ ಮಾರ್ಗಸೂಚಿ ಇರಲಿಲ್ಲ. ಇದರಿಂದ ಸಾರಿಗೆ ಬಸ್ ಸೇರಿದಂತೆ ಹಲವು ವಾಹನಗಳು ಇದೇ ಮಾರ್ಗದಲ್ಲಿಯೇ ಸಾಗುತ್ತಿದ್ದವು. ಆದರೆ ಇದೀಗ ಸಂಪೂರ್ಣ ರಸ್ತೆ ಬಂದ್ ಮಾಡಲಾಗಿದೆ. ಆದರೆ ವಾಹನ ಚಾಲಕರು ಹೇಗೆ ತೆರಳಬೇಕು ಎನ್ನುವ ಒಂದೇ ಒಂದು ಫಲಕ ಹಾಕಲಾಗಿಲ್ಲ. ಸಂಬಂಧಿಸಿದ ಇಲಾಖೆಯವರು ಕೂಡಲೇ ವಾಹನ ಸಂಚಾರಕ್ಕೆ ಸೂಕ್ತ ಮಾರ್ಗಸೂಚಿ ಅಳವಡಿಡಿ ಆಗುತ್ತಿರುವ ತೊಂದರೆ ಸರಿಪಡಿಸಬೇಕು ಎಂಬುದು ವಾಹನ ಚಾಲಕರ ಅಳಲಾಗಿದೆ.
ದೇಸಾಯಿ ವೃತ್ತದಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿದ್ದು, ಸ್ಥಳೀಯರಿಗೆ ತಿಳಿದಿದೆ. ಆದರೆ ಪರ ಊರುಗಳಿಂದ ಆಗಮಿಸುವ ವಾಹನ ಚಾಲಕರಿಗೆ ತಿಳಿಯದೇ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಚನ್ನಮ್ಮ ವೃತ್ತದಲ್ಲಿ ಹಾಗೂ ಕೋರ್ಟ್ ವೃತ್ತದಲ್ಲಿ ರಸ್ತೆ ಬಂದ್ ಮಾಡಿರುವ ಕುರಿತು ದೊಡ್ಡ ಫಲಕಗಳನ್ನು ಅಳವಡಿಸುವ ಮೂಲಕ ವಾಹನ ಚಾಲಕರಿಗೆ ತಿರುವು ಪಡೆದುಕೊಂಡು ತೆರಳಲು ಅವಕಾಶ ಕಲ್ಪಿಸಿಕೊಡಬೇಕು.-
ಮಹ್ಮದ್ ಜುಬೇರ, ಲಾರಿ ಚಾಲಕ
ಚನ್ನಮ್ಮ ವೃತ್ತದಿಂದ ದೇಸಾಯಿ ವೃತ್ತದ ಮೂಲಕ 45 ದಿನಗಳ ವರೆಗೆ ಯಾವುದೇ ವಾಹನಗಳನ್ನು ಬಿಡುವುದಿಲ್ಲ. ಈಗಾಗಲೇ ಕ್ಲಬ್ ರಸ್ತೆ ಒಂದು ಭಾಗವನ್ನು ಬಂದ್ ಮಾಡಿದ್ದು, ಇನ್ನೊಂದು ಭಾಗವನ್ನು ಬಂದ್ ಮಾಡಿ ಯಾವುದೇ ದೊಡ್ಡ ವಾಹನಗಳನ್ನು ಬಿಡದಂತೆ ನೋಡಿಕೊಳ್ಳಲಾಗುವುದು. ಕೋರ್ಟ್ ವೃತ್ತದಲ್ಲಿ ಸಿಬ್ಬಂದಿ ನೇಮಿಸಿ ಮುಂಚಿತವಾಗಿ ವಾಹನ ಸವಾರರಿಗೆ ತಿಳಿಯುವಂತೆ ಮಾರ್ಗಸೂಚಿ ಅಳವಡಿಸಲಾಗುವುದು.
-ಎಸ್.ಎಂ. ಸಂದಿಗವಾಡ, ಸಂಚಾರಿ ಎಸಿಪಿ
ಮೇ 12ರಂದು ಅಂಡರ್‌ಪಾಸ್ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಅದು ಕೂಡಾ ದೇಶಪಾಂಡೆ ನಗರ ಕಡೆಯಿಂದ ಆಗಮಿಸುವ ಹಾಗೂ ಪಿಂಟೋ ರಸ್ತೆಯಿಂದ ಆಗಮಿಸುವ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ. ಇನ್ನುಳಿದಂತೆ ಕೇಶ್ವಾಪುರ ಮಾರ್ಗವಾಗಿ ಬಿಜಾಪುರ, ಬಾಗಲಕೋಟೆಗೆ ತೆರಳುವ ವಾಹನಗಳು ಗದಗ ರಸ್ತೆ ಅಂಡರ್‌ಪಾಸ್ ಮೂಲಕ ಹಾಯ್ದು ಕೇಶ್ವಾಪುರ ರಸ್ತೆ ಮೂಲಕ ತೆರಳುವುದು ಅನಿವಾರ್ಯವಾಗಿದೆ.