Advertisement

ಚಾಲಕ, ನಿರ್ವಾಹಕರ ದಿಢೀರ್‌ ಪ್ರತಿಭಟನೆ

12:19 PM Sep 04, 2018 | Team Udayavani |

ಬೆಂಗಳೂರು: ಮೇಲಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಘಟಕ 34ರಲ್ಲಿ ಚಾಲಕರು ಮತ್ತು ನಿರ್ವಾಹಕರು ಸೋಮವಾರ ಕರ್ತವ್ಯಕ್ಕೆ ಹಾಜರಾಗದೆ ದಿಢೀರ್‌ ಪ್ರತಿಭಟನೆ ನಡೆಸಿದರು. ಇದರಿಂದ ಸುಮಾರು ಮೂರು ತಾಸು ಉದ್ದೇಶಿತ ಘಟಕದ ಬಸ್‌ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಯಿತು.

Advertisement

ಬೆಳಿಗ್ಗೆ 6 ಗಂಟೆಯಿಂದಲೇ ಘಟಕದ ಆವರಣದಲ್ಲಿ ಸೇರಿದ ನೂರಕ್ಕೂ ಅಧಿಕ ಸಿಬ್ಬಂದಿ ಕರ್ತವ್ಯಕ್ಕೆ ಗೈರುಹಾಜರಾದರು. ಇದರಿಂದ 120ಕ್ಕೂ ಹೆಚ್ಚು ಬಸ್‌ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಯಿತು. ಇದರ ಬಿಸಿ ಪ್ರಯಾಣಿಕರಿಗೂ ತಟ್ಟಿತು. ಉದ್ದೇಶಿತ ಘಟಕದಿಂದ ನಿತ್ಯ ಮೆಜೆಸ್ಟಿಕ್‌, ಬನಶಂಕರಿ, ಕೆ.ಆರ್‌. ಮಾರುಕಟ್ಟೆ, ಹತ್ತಿತರ ಮೆಟ್ರೋ ನಿಲ್ದಾಣಗಳಿಗೆ ತೆರಳುತ್ತವೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ತೆರಳುವವರು ಗಂಟೆಗಟ್ಟಲೆ ಬಸ್‌ಗಾಗಿ ಕಾಯಬೇಕಾಯಿತು.

ರಜೆ ಮಂಜೂರು, ಸೂಚನೆ ಧಿಕ್ಕರಿಸಿ ಮಹಿಳಾ ಸಿಬ್ಬಂದಿಯನ್ನು ಎರಡನೇ ಪಾಳಿಗೆ ನಿಯೋಜಿಸುವುದು, ಅನಾರೋಗ್ಯದ ಹಿನ್ನೆಲೆ ರಜೆ ಸೇರಿದಂತೆ ಹಲವು ಸೇವೆಗಳ ವಿಚಾರದಲ್ಲಿ ವಿನಾಕಾರಣ ಘಟಕದ ವ್ಯವಸ್ಥಾಪಕರು ಕಿರುಕುಳ ನೀಡುತ್ತಿದ್ದಾರೆ. ಈ ಸಂಬಂಧ ಮೇಲಧಿಕಾರಿಗಳಿಗೆ ದೂರು ಕೂಡ ಸಲ್ಲಿಸ
ಲಾಗಿತ್ತು. ಆದರೆ, ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಬೇಕಾಯಿತು ಎಂದು ಚಾಲಕ ಮಹೇಶ್ವರ್‌ ಆಕ್ರೋಶ ವ್ಯಕ್ತಪಡಿಸಿದರು. 

ಘಟಕ 34ರಲ್ಲಿ (ಜಂಬೂಸವಾರಿ ದಿನ್ನೆ) ಕಾರ್ಯನಿರ್ವಹಿಸುತ್ತಿರುವ ವ್ಯವಸ್ಥಾಪಕರು ಈಗಾಗಲೇ ನಾಲ್ಕು ಕಡೆ ವರ್ಗಾವಣೆಗೊಂಡಿದ್ದಾರೆ. ಅಲ್ಲೆಲ್ಲಾ ಸಿಬ್ಬಂದಿ ಇದೇ ರೀತಿಯ ಕಿರುಕುಳ ಅನುಭವಿಸಿದ್ದಾರೆ. ಈ ವ್ಯವಸ್ಥಾಪಕರನ್ನು ಕೂಡಲೇ ಎತ್ತಂಗಡಿ ಮಾಡಬೇಕು ಎಂದು ಸಿಬ್ಬಂದಿ ಪಟ್ಟುಹಿಡಿದರು. ಆಗ, ಎಐಟಿಯುಸಿ  ಪ್ರಧಾನ ಕಾರ್ಯದರ್ಶಿ ಅನಂತ ಸುಬ್ಬರಾವ್‌ ಮತ್ತು ಬಿಎಂಟಿಸಿ ನಿರ್ದೇಶಕ (ಭದ್ರತೆ ಮತ್ತು ಜಾಗೃತಿ) ಪ್ರಕಾಶಗೌಡ ಸ್ಥಳಕ್ಕೆ ಧಾವಿಸಿದರು.

ನಂತರ ಮನವೊಲಿಕೆ ಪ್ರಯತ್ನ ನಡೆಯಿತು. ಅಧಿಕಾರಿಗಳ ಭರವಸೆ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಸಿಬ್ಬಂದಿ ಹಲವು ದೂರುಗಳನ್ನು ಹೇಳಿಕೊಂಡಿದ್ದಾರೆ. ಲಿಖೀತವಾಗಿಯೂ ನನಗೆ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಸಿಬ್ಬಂದಿ ಪ್ರತಿಭಟನೆಯಿಂದ 120 ಬಸ್‌ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಪ್ರಕಾಶಗೌಡ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next