ಬೆಳಗಾವಿ: ಇಡೀ ರಾತ್ರಿ ನೂರಾರು ಕಿಮೀ ದೂರದಿಂದ ಪ್ರಯಾಣಿಕರನ್ನು ಕರೆದುಕೊಂಡು ಬಂದು ಇಲ್ಲಿಯ ಶಿವಾಜಿ ನಗರದ ಖಾಲಿ ಜಾಗದಲ್ಲಿ ನಿಲ್ಲಿಸುವ ಸಾರಿಗೆ ಇಲಾಖೆಯ ಚಾಲಕ-ನಿರ್ವಾಹಕರಿಗೆ ವಿಶ್ರಾಂತಿ ಪಡೆಯಲು ಸರಿಯಾದ ವ್ಯವಸ್ಥೆ ಇಲ್ಲ. ಕೆಂಪು ಮಣ್ಣಿನ ರಾಡಿ ಮಧ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ನಿತ್ಯವೂ ಸಾರಿಗೆ ಬಸ್‌ಗಳನ್ನು ನಿಲ್ಲಿಸುವ ಜಾಗದಲ್ಲಿ ನಡೆದುಕೊಂಡು ಹೋಗುವುದೇ ದುಸ್ತರ. ಇಂಥ ಜಾಗದಲ್ಲಿ ಚಾಲಕ-ನಿರ್ವಾಹಕರು ದಿನವಿಡೀ ಹಾಗೂ ರಾತ್ರಿ ಕಳೆಯುತ್ತಿರುವುದು ಕಳವಳಕರ ವಿಷಯ ಎನಿಸಿದೆ. ಏಕೆಂದರೆ ನಿರಂತರ ಮಳೆಯಿಂದಾಗಿ ಇಡೀ ಜಾಗವೆಲ್ಲ ರಾಡಿಯಾಗಿದೆ.
ಸಮಸ್ಯೆ ಏನು: ಈ ಮುಂಚೆ ಈ ಬಸ್‌ಗಳನ್ನು ತರಕಾರಿ ಮಾರುಕಟ್ಟೆ ಬಳಿಯ ಇಂದಿರಾ ಕ್ಯಾಂಟೀನ್ ಹಿಂಬದಿಯ ಖುಲ್ಲಾ ಜಾಗದಲ್ಲಿ ಪಾರ್ಕಿಂಗ್ ಮಾಡಲಾಗುತ್ತಿತ್ತು. ಈಗ ಹಳೆಯ ಕ್ವಾರ್ಟರ್ಸ್‌ಗಳನ್ನು ತೆರವುಗೊಳಿಸಿದ ಜಾಗ ಖಾಲಿಯಿದ್ದು, ಇದೇ ಸ್ಥಳದಲ್ಲಿ ಕಳೆದ 3-4 ತಿಂಗಳುಗಳಿಂದ ಬಸ್‌ಗಳನ್ನು ಪಾರ್ಕ್ ಮಾಡಲಾಗುತ್ತಿದೆ. ಆದರೆ ಇಲ್ಲಿ ಯಾವುದೇ ಮೂಲ ಸೌಕರ್ಯಗಳೇ ಇಲ್ಲ. ರಾತ್ರಿ ಬೆಳಕಿನ ವ್ಯವಸ್ಥೆಯೂ ಇಲ್ಲ. ಚಾಲಕ-ನಿರ್ವಾಹಕರು ವಿಶ್ರಾಂತಿ ಪಡೆದುಕೊಳ್ಳಲು ಕೊಠಡಿಗಳೂ ಇಲ್ಲ.
ರಾಯಚೂರು, ಔರಾದ, ಕಲಬುರ್ಗಿ, ಬೆಂಗಳೂರು, ಶಿವಮೊಗ್ಗ, ಮಂಗಳೂರು, ಮೈಸೂರು, ಭಟ್ಕಳ, ತುಮಕೂರು, ಮಂಡ್ಯ ಸೇರಿದಂತೆ ವಿವಿಧ ಕಡೆಯಿಂದ ಇಡೀ ರಾತ್ರಿ ಪ್ರಯಾಣ ಬೆಳೆಸಿ ಬೆಳಗ್ಗೆ ಬೆಳಗಾವಿಗೆ ಬಂದು ತಲುಪುತ್ತವೆ. ಈ ಬಸ್‌ಗಳು ಮತ್ತೆ ಅದೇ ದಿನ ರಾತ್ರಿ ವಾಪಸ್ ಹೋಗಬೇಕು. ಬೆಳಗ್ಗೆ ಬಂದು ಈ ಸ್ಥಳದಲ್ಲಿ ಬಸ್ ಪಾರ್ಕ್ ಮಾಡಲಾಗುತ್ತದೆ. ಆದರೆ ಕೇವಲ ವಾಹನ ನಿಲ್ಲಿಸುವ ಜಾಗ ಬಿಟ್ಟರೆ ಇನ್ನುಳಿದಂತೆ ಯಾವುದೇ ಸೌಲಭ್ಯಗಳು ಇಲ್ಲಿ ಇಲ್ಲ. ಇಂಥ ದುಸ್ಥಿತಿಯಲ್ಲಿಯೇ 12 ತಾಸು ಅವರು ಕಳೆಯಬೇಕಾಗಿದೆ. ಬಯಲು ಶೌಚಾಲಯವೇ ಅವರಿಗೆ ಗತಿಯಾಗಿದೆ. 1ನೇ ಅಥವಾ 2ನೇ ಡಿಪೋದಲ್ಲಿರುವ ಶೌಚಾಲಯಕ್ಕೆ ಹೋಗಲು ಆರ್‌ಟಿಒ ಕಚೇರಿ ಅಥವಾ ಕೋಟೆ ಕೆರೆ ಬಳಿಯ ಪ್ರವಾಸಿ ಮಂದಿರ ಸುತ್ತು ಹಾಕಿ ಹೋಗಬೇಕಾಗುತ್ತದೆ. ಇದು ಒಂದು ಕಿಮೀಗಿಂತ ಹೆಚ್ಚು ದೂರವಾಗುತ್ತದೆ.
ಮಳೆಯಿಂದಾಗಿ ಇಡೀ ಪ್ರದೇಶ ಕೆಂಪು ಮಣ್ಣಿನ ರಾಡಿಯಿಂದ ಕೂಡಿದೆ. ಮುಖ್ಯ ರಸ್ತೆಯಿಂದ ಒಳಗೆ ಬಸ್ ಪ್ರವೇಶಿಸಿದರೆ ನಡೆದುಕೊಂಡು ಬರಲು ಆಗುವುದೇ ಇಲ್ಲ. ಹಾಗೋ ಹೀಗೋ ಮಾಡಿ ಈ ರಾಡಿ ದಾಟಿಕೊಂಡು ಬರಬೇಕಾಗುತ್ತದೆ. ಕಾಲು ಜಾರಿ ಅನೇಕ ಸಲ ಚಾಲಕ-ನಿರ್ವಾಹಕರು ಬಿದ್ದ ಉದಾಹರಣೆಗಳಿವೆ ಎನ್ನುತ್ತಾರೆ ಚಾಲಕರು. ಬಾಟಲಿ ನೀರೇ ಗತಿ: ಇಲ್ಲಿಯ ಶೌಚಾಲಯ ಇದ್ದೂ ಇಲ್ಲದಂತಾಗಿದೆ. ಅದರ ಸುತ್ತಲೂ ಗಿಡಗಂಟಿಗಳು ಬೆಳೆದಿದ್ದರಿಂದ ಶೌಚಾಲಯವೂ ಕಾಣಿಸುವುದಿಲ್ಲ. ಬಾಟಲಿಯಲ್ಲಿ ನೀರು ತುಂಬಿಕೊಂಡು ಬಂದು ಬಯಲು ಶೌಚಕ್ಕೆ ಹೋಗಬೇಕಾಗುತ್ತದೆ. ಇಲ್ಲದಿದ್ದರೆ ಯಾವುದಾದರೂ ಪಕ್ಕದ ಹೊಟೇಲ್ ಗಳಿಗೆ ಹೋಗಿ ಸ್ನಾನ ಮಾಡಬೇಕಾಗುತ್ತದೆ. ಕೆಲವು ಸಲ ಹೊಟೇಲ್‌ನವರಿಂದಲೂ ಬೈಗುಳ ತಿಂದ ಉದಾಹರಣೆಗಳಿವೆ.
ಇಲ್ಲಿ ಸಮರ್ಪಕ ವ್ಯವಸ್ಥೆ ಮಾಡಲು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ತಮ್ಮ ಜಿಲ್ಲೆಯ ಆಯಾ ಡಿಪೋ ಮ್ಯನೇಜರ್ ಗಳಿಗೆ ಹೇಳಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ವೈಯಕ್ತಿಕವಾಗಿ ಕೇಳಲು ಹೋದರೆ ಸಮಸ್ಯೆ ನಿನಗಷ್ಟೇನಾ? ಅಲ್ಲಿರೋದೇ ಕೇವಲ 12 ತಾಸು, ಇನ್ನೇನು ಜೀವನಪೂರ್ತಿ ಕಳೆಯುತ್ತೀರಾ ಎಂದು ಬೆದರಿಕೆ ಹಾಕುತ್ತಾರೆ. ಯಾವ ಸಿಬ್ಬಂದಿಯೂ ಸಮಸ್ಯೆ ಬಗ್ಗೆ ಧ್ವನಿ ಎತ್ತಲು ಹೆದರುವಂಥ ಸ್ಥಿತಿ ಇದೆ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಾರೆ.
ಸುರಕ್ಷತೆಯೂ ಇಲ್ಲ: ಈ ಜಾಗದಲ್ಲಿ 20-25 ಬಸ್ ಗಳು ನಿಂತಿರುತ್ತವೆ. ಟಿಕೆಟ್ ಹಣ ಒಂದೊಂದು ಬಸ್‌ನಲ್ಲೂ ಸುಮಾರು 50-60 ಸಾವಿರ ರೂ. ಇರುತ್ತದೆ. ರಾತ್ರಿ ಹೊತ್ತಿನಲ್ಲಿ ಇಲ್ಲಿ ವಿದ್ಯುತ್ ವ್ಯವಸ್ಥೆ ಕೂಡ ಇಲ್ಲ. ಹೀಗಾಗಿ ಕಳ್ಳರ ಹಾವಳಿ ಸಾಧ್ಯತೆಯೂ ಇದೆ. ಬಸ್ ಒಳ ಪ್ರವೇಶಿಸಿದಾಗ ಇಲ್ಲಿ ಗೇಟ್ ಕೂಡ ಇಲ್ಲ. ಹೀಗಾದರೆ ಕಳ್ಳರ ಹಾವಳಿಯಿಂದ ರಕ್ಷಿಸಿಕೊಳ್ಳುವುದು ಕಷ್ಟಕರವಾಗಿದೆ ಎಂದು ಚಾಲಕರು ಸಮಸ್ಯೆ ಬಿಚ್ಚಿಡುತ್ತಾರೆ.
ಬಸ್ ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ಎಲ್ಲ ವ್ಯವಸ್ಥೆ ಇದೆ. ಮೂರನೇ ಡಿಪೋದಲ್ಲಿ ನೀರು, ವಿಶ್ರಾಂತಿ ಕೊಠಡಿ, ಶೌಚಾಲಯ, ಸ್ನಾನದ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಪ್ರವೇಶ ದ್ವಾರಕ್ಕೆ ಬಸ್ ಕಾಯಲು ಓರ್ವ ಸಿಬ್ಬಂದಿಯನ್ನೂ ನೇಮಿಸಿದ್ದೇವೆ. ಸಮಸ್ಯೆಯಂತೂ ಯಾವುದೇ ಇಲ್ಲ.
ಎಂ.ಆರ್. ಮುಂಜಿ, ವಿಭಾಗೀಯ
ನಿಯಂತ್ರಣಾಧಿಕಾರಿ, ಬೆಳಗಾವಿ
ಶಿವಾಜಿ ನಗರ ಬಳಿಯ ಪಾರ್ಕಿಂಗ್‌ನಲ್ಲಿ ಸಮಸ್ಯೆಗಳ ಆಗರವೇ ಇದೆ. ನೀರಿನ ವ್ಯವಸ್ಥೆ ಇಲ್ಲದೇ ಅಲೆದಾಡುತ್ತೇವೆ. ನಾವು ಬರುವ ಮಾರ್ಗ ಮಧ್ಯೆಯೇ ಬಾಟಲಿಯಲ್ಲಿ ನೀರು ತುಂಬಿಕೊಂಡು ಬರುತ್ತೇವೆ. ಶೌಚಾಲಯಕ್ಕೆ ಹೋಗುವುದಂತೂ ಕಷ್ಟಕರ. ಸುತ್ತು ಬಳಸಿ ಮೂರನೇ ಡಿಪೋಗೆ ಹೋಗಿ ಶೌಚಾಲಯ ಹಾಗೂ ಸ್ನಾನಕ್ಕೆ ಹೋಗಬೇಕಾಗುತ್ತದೆ. ಹಗಲು ಹೊತ್ತಿನಲ್ಲಿ ಬಹಿರ್ದೆಸೆಗೆ ಹೋಗುವಾಗ ಜನರಿಂದ ಉಗಿಸಿಕೊಂಡಿದ್ದೇವೆ.
ಹೆಸರು ಹೇಳಲಿಚ್ಛಿಸದ ಚಾಲಕ
ಭೈರೋಬಾ ಕಾಂಬಳೆ