ಚಿತ್ರದುರ್ಗ: ಚಾಲಕ ರಹಿತ ಡ್ರೋಣ್ (ರುಸ್ತುಂ) ಮಾದರಿ ವಿಮಾನ ಮಂಗಳವಾರ ಬೆಳಗ್ಗೆ ಜೋಡಿಚಿಕ್ಕೇನಹಳ್ಳಿ ಬಳಿಯ ತೋಟದಲ್ಲಿ ಪತನಗೊಂಡಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜೋಡಿ ಚಿಕ್ಕೇನಹಳ್ಳಿ ಆನಂದಪ್ಪ ಎಂಬುವವರ ತೋಟದ ಬಳಿ ಬೆಳಗ್ಗೆ ಏಕಾಏಕಿ ವಿಮಾನ ಬಿದ್ದಿದ್ದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯ ರಕ್ಷಣಾ ಅಭಿವೃದ್ಧಿ ಹಾಗೂ ಸಂಶೋಧನಾ ಸಂಸ್ಥೆ (ಡಿಆರ್ ಡಿಓ) ಸಂಸ್ಥೆ ಪರೀಕ್ಷಾರ್ಥವಾಗಿ ಹಾರಿಸಿದ್ದ ವಿಮಾನ ಇದಾಗಿದ್ದು, ತಾಂತ್ರಿಕ ಸಮಸ್ಯೆ ಕಾರಣಕ್ಕೆ ನಿಯಂತ್ರಣ ಕಳೆದುಕೊಂಡು ಬಿದ್ದಿರಬಹುದು ಎನ್ನಲಾಗಿದೆ.
ದೇಶದ ಗಡಿ ಪ್ರದೇಶ ಹಾಗೂ ನೌಕಾ ಸೇನೆಗೆ ಸೇರಿಸುವ ಉದ್ದೇಶದಿಂದ ಡಿಆರ್ ಡಿಓ ಮಾನವ ರಹಿತ ಯುದ್ದ ವಿಮಾನವನ್ನು ಅಭಿವೃದ್ಧಿ ಮಾಡುತ್ತಿತ್ತು. ಈ ಹಿಂದೆ ನಡೆಸಿದ ಹಲವು ಪರೀಕ್ಷೆಗಳಲ್ಲಿ ತೇಜಸ್ ಯಶಸ್ವಿಯಾಗಿತ್ತು. ಆದರೆ, ಇಂದು ಬೆಳಗ್ಗೆ ಡಿಆರ್ ಡಿಓ ಏರೋನಾಟಿಕಲ್ ರೇಂಜ್ ನಿಂದ ಹೊರಟ ಕೆಲ ಕ್ಷಣದಲ್ಲೇ ಪತನವಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ಅರುಣ್ ಭೇಟಿ ನೀಡಿದ್ದಾರೆ.
ಬಿದ್ದಿರುವ ಡ್ರೋಣ್ ಮಾದರಿ ವಿಮಾನದ ಮೇಲೆ ತಪಸ್ -04 ಎಡಿಇ ವಿಮಾನ ಎಂದು ಬರೆಯಲಾಗಿದೆ. ಈ ಹಿಂದೆ ನಾಯಕನಹಟ್ಟಿ ಬಳಿ ಇದೇ ಮಾದರಿಯ ಡ್ರೋಣ್ ಮಾದರಿ ವಿಮಾನ ಜಮೀನಿನಲ್ಲಿ ಬಿದ್ದಿದ್ದನ್ನು ಸ್ಮರಿಸಬಹುದು.