ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿದ ಡಸ್ಟರ್ ಕಾರೊಂದು ಪ್ರಪಾತಕ್ಕೆ ಬೀಳುವ ಮೂಲಕ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನ. 18ರಂದು ಅಪರಾಹ್ನ ಬಿ.ಸಿ.ರೋಡಿನಲ್ಲಿ ನಡೆದಿದೆ.
ಮೃತರನ್ನು ಅನಂತಾಡಿ ಗ್ರಾಮ ಬಾಬನಕಟ್ಟೆ ನಿವಾಸಿ, ದಿ| ಮಾದವ ನಾಯ್ಕರ ಪುತ್ರ, ನೇರಳಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉದ್ಯೋಗಿ ರಾಕೇಶ್ ನಾಯ್ಕ (28) ಎಂದು ಗುರುತಿಸಲಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಅವರು ಸಹಕಾರಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬೆಳಗ್ಗೆ ಸಂಘಕ್ಕೆ ಬಂದಿದ್ದ ಅವರು ರಜೆ ಮಾಡುವುದಾಗಿ ತಿಳಿಸಿ ಹೋಗಿದ್ದರು ಎಂದು ಮಾಹಿತಿ ಮೂಲಗಳು ತಿಳಿಸಿದೆ.
ನೇತ್ರಾವತಿ ನದಿ ಕಾಂಕ್ರಿಟ್ ಸೇತುವೆಯನ್ನು ದಾಟಿ ಬಿ.ಸಿ.ರೋಡ್ ಕಡೆಗೆ ಬಂದಿದ್ದ ಡಸ್ಟರ್ ಕಾರು ಎದುರಿಂದ ಬಂದಿದ್ದ ಕಾರೊಂದಕ್ಕೆ ಢಿಕ್ಕಿಯಾಗಿದೆ. ಅಲ್ಲಿಂದ ಅಟೋರಿಕ್ಷಾಕ್ಕೆ ಹೊಡೆದು ಅನಂತರ ವಿದ್ಯುತ್ ಕಂಭಕ್ಕೆ ತಾಗಿದ್ದು ಪ್ರಪಾತದ ಬಂಡೆಕಲ್ಲಿಗೆ ಗುದ್ದಿರುವುದರಿಂದ ತಲೆಗೆ ತೀವ್ರ ಸ್ರರೂಪದ ಗಾಯವಾಗಿ ರಕ್ತ ಚೆಲ್ಲಿದ್ದು ಘಟನೆಯ ಬೀಭತ್ಸಕ್ಕೆ ಸಾಕ್ಷಿಯಾಗಿತ್ತು.
ಘಟನೆ ಬಳಿಕ ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು. ಇದೇ ಸಂದರ್ಭ ಸ್ಥಳೀಯ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಸಚಿವ ಬಿ.ರಮಾನಾಥ ರೈ ಕೂಡಾ ಆಗಮಿಸಿ ತುರ್ತು ಕ್ರಮಕ್ಕೆ ಆದೇಶ ನೀಡಿದರು.
ಮೃತರ ಹಿರಿಯ ಸಹೋದರ ಕಡಬ ಉಪ ತಹಶೀಲ್ದಾರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕಾರು ಅವರಿಗೆ ಸೇರಿದ್ದಾಗಿದೆ. ಮೃತರು ಶನಿವಾರ ಬೆಳಗ್ಗೆ ಸೊಸೈಟಿಯಿಂದ ರಜೆ ಮಾಡುವುದಾಗಿ ಹೇಳಿ ಹೋಗಿದ್ದು, ಸುಮಾರು ಹೊತ್ತು ಮಾಣಿ ಸಂತೆಯಲ್ಲಿದ್ದು ಅನಂತರ ಬಿ.ಸಿ.ರೋಡ್ ಕಡೆಗೆ ತೆರಳಿದ್ದಾಗಿ ವಿವರ ತಿಳಿಸಿದೆ. ಮೃತರು ತಾಯಿ, ಸಹೋದರ , ಸಹೋದರಿಯನ್ನು ಅಗಲಿದ್ದಾರೆ. ಮೆಲ್ಕಾರ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.