ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ನೀರು ಮತ್ತು ನೈರ್ಮಲ್ಯ ಕುರಿತು ಜನಜಾಗೃತಿ ಮಾಹಿತಿ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್ ರವಿವಾರ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಪ್ರದರ್ಶನದಲ್ಲಿ ಜನರ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿರುವುದು ಸಂತಸದ ವಿಚಾರ. ಕಾಯಿಲೆಗಳು, ಅವುಗಳ ಲಕ್ಷಣ ಹಾಗೂ ಸೂಕ್ತ ಚಿಕಿತ್ಸೆ ಕುರಿತು ಮಾಹಿತಿ ನೀಡಲಾಗಿದೆ. ಆರೋಗ್ಯ ಸೇವೆಗಳು ಮತ್ತು ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸುತ್ತಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಿರುವ ಪ್ರದರ್ಶನದಲ್ಲಿ ನವಜಾತ ಶಿಶುಗಳ ಆರೈಕೆ, ಮಕ್ಕಳ ಅಪೌಷ್ಟಿಕತೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ಪುನಶ್ಚೇತನಾ ಕೇಂದ್ರ ಸ್ಥಾಪನೆ, ಸಂಪೂರ್ಣ ಲಸಿಕೆ ಪರಿಪೂರ್ಣ ಆರೋಗ್ಯ, ಪೌಷ್ಟಿಕ ಆಹಾರ ಪುನಶ್ಚೇತನಾ ಕೇಂದ್ರಗಳ ಸ್ಥಾಪನೆ, ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ, ರಕ್ತಹೀನತೆ ತಡೆಗಟ್ಟುವುದು, ಕ್ಷಯರೋಗ ಲಕ್ಷಣಗಳು ಮತ್ತು ನಿಯಂತ್ರಣ ಕ್ರಮಗಳು, ಡೆಂಘೀ ಮತ್ತು ಚಿಕೂನ್ ಗುನ್ಯಾ ಲಕ್ಷಣಗಳು ಮತ್ತು ಮುನ್ನೆಚ್ಚರಿಕಾ ಕ್ರಮಗಳು, ಮಾನಸಿಕ ಆರೋಗ್ಯ, ಜನನಿ-ಶಿಶು ಸುರಕ್ಷಾ, ತಾಯಿ ಕಾರ್ಡ್, ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ಪೌಷ್ಟಿಕಾಂಶ ಆಹಾರ ಸೇವನೆ ಕ್ರಮಗಳ ಕುರಿತ ಆರೋಗ್ಯ ಮಾಹಿತಿ ಒದಗಿಸಲಾಗಿದೆ.
ವಿದ್ಯುತ್ ಅವಘಡ ತಪ್ಪಿಸುವ ಉದ್ದೇಶದಿಂದ ಕೆಲ ಸುರಕ್ಷತಾ ಕ್ರಮತಿಳಿಸಲಾಗಿದೆ. ರಾಷ್ಟ್ರೀಯ ಫ್ಲೋರೋಸಿಸ್ ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಕಾರ್ಯಕ್ರಮ, ಮನೆಯ ಹೊರಗಡೆ ಶೌಚಾಲಯ ನಿರ್ಮಾಣ ಸೇರಿದಂತೆ ಹಾಗೂ ಸರಕಾರದ ವಿವಿಧ ಯೋಜನೆಗಳನ್ನೊಳಗೊಂಡ ಮಾಹಿತಿಯನ್ನು ಫಲಕಗಳ ಮೂಲಕ ನೀಡಲಾಗಿದೆ.
ಬೀದಿನಾಟಕ, ಜಾಗೃತಿ ಗೀತೆಗಳು: ಧಾರವಾಡದ ಸಮುದಾಯ ತಂಡದ ಕಲಾವಿದರು ಹಾಗೂ ರಾಜ್ಯ ಪ್ರಶಸ್ತಿ ವಿಜೇತೆ ಫಕೀರವ್ವ ಗುಡಿಸಾಗರ ಜನಪದ ಸಂಸ್ಥೆ ಕಲಾವಿದರು ನೀರು ಹಾಗೂ ನೈರ್ಮಲ್ಯ ಹಾಗೂ ಆರೋಗ್ಯ ಕುರಿತು ಬೀದಿನಾಟಕ ಹಾಗೂ ಜಾಗೃತಿ ಗೀತೆಗಳ ಪ್ರದರ್ಶನ ನೀಡಿದರು.
ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಯಶವಂತ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ತಹಶೀಲ್ದಾರರಾದ ಶಶಿಧರ ಮಾಡ್ಯಾಳ, ಸಂಗಪ್ಪ ಬಾಡಗಿ, ವಾಯವ್ಯ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ ಪಾಟೀಲ, ಉಪ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಪಿ.ವೈ.ನಾಯಕ, ಘಟಕ ವ್ಯವಸ್ಥಾಪಕ ಆರ್.ಜಿ.ನಾಡಗೌಡ್ರ, ನಿಲ್ದಾಣಾಧಿಕಾರಿ ರೋಹಿಣಿ ಬೇವಿನಕಟ್ಟಿ, ವಾರ್ತಾ ಇಲಾಖೆ ಸಿಬ್ಬಂದಿ ಇನ್ನಿತರರಿದ್ದರು.