ವಿಜಯಪುರ: ಕ್ರೀಡಾಕ್ಷೇತ್ರದ ಬಲವರ್ಧನೆಗಾಗಿ ಆಯಾ ರಾಜ್ಯ ಸರ್ಕಾರಗಳು ತಮ್ಮ ಬಜೆಟ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಕಾಯ್ದಿರಿಸುವುದು ಅವಶ್ಯವಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಡಾ| ಎಂ.ಬಿ. ಪಾಟೀಲ ಹೇಳಿದರು.
ನಗರದ ಡಾ| ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ 63ನೇ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಅವರು, 125 ಕೋಟಿ ಜನಸಂಖ್ಯೆ ಹೊಂದಿದ್ದರೂ ಸಹ ಕ್ರೀಡಾಕ್ಷೇತ್ರದಲ್ಲಿ ಭಾರತದ ಸಾಧನೆ ತೃಪ್ತಿಕರವಾಗಿಲ್ಲ. ಈ
ನಿಟ್ಟಿನಲ್ಲಿ ಕ್ರೀಡಾಪಟುಗಳಿಗೆ, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ಅವಶ್ಯವಾಗಿದೆ ಎಂದರು.
ವಿಜಯಪುರದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಜಲ ಸಂಪನ್ಮೂಲ ಇಲಾಖೆ ವತಿಯಿಂದಲೂ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಕಾರಣಕ್ಕಾಗಿ ಸಿಂಥೆಟಿಕ್ ಟ್ರಾಫಿಕ್ ನಿರ್ಮಾಣ, ಮಿನಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಸೇರಿದಂತೆ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದಂತಹ ವಿವಿಧ ಕಾಮಗಾರಿಗಳಿಗೆ 10 ಕೋಟಿ ರೂ. ಅನುದಾನ ಒದಗಿಸುವುದಾಗಿ ಘೋಷಿಸಿದರು. ನಗರಾಭಿವೃದ್ಧಿ ಖಾತೆ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕ ಡಾ| ಮಕ್ಬೂಲ್ ಬಾಗವಾನ, ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ, ಮೇಯರ್ ಸಂಗೀತಾ ಪೋಳ, ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ.ಎಸ್. ಗುರಿಕಾರ ಇದ್ದರು.
ವರ್ಣರಂಜಿತ ಚಾಲನೆ: 63ನೇ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ವರ್ಣರಂಜಿತ ಚಾಲನೆ ದೊರಕಿತು. ಜಮ್ಮುಕಾಶ್ಮೀರ, ಮಧ್ಯಪ್ರದೇಶ, ಓಡಿಸ್ಸಾ, ತೆಲಂಗಾಣ, ಗುಜರಾತ, ತಮಿಳುನಾಡು, ಜಾರ್ಖಂಡ್ ಸೇರಿದಂತೆ ಹಲವಾರು ರಾಜ್ಯಗಳಿಂದ ಆಗಮಿಸಿದ ಕ್ರೀಡಾಪಟುಗಳು ಕ್ರೀಡಾ ಜಾಗೃತಿ ಜಾಥಾ ನಡೆಸಿದರು. ವಿದ್ಯಾರ್ಥಿನಿಯರು ಬಂಜಾರಾ ನೃತ್ಯ ಪ್ರದರ್ಶಿಸಿದರು.