ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ಗೋಕುಲ ಗಾರ್ಡನ್‌ನಲ್ಲಿ ಶುಕ್ರವಾರ ದ್ರಾಕ್ಷಾರಸ ಉತ್ಸವ (ವೈನ್ ಮೇಳ) ಆರಂಭಗೊಂಡಿತು.
ಕರ್ನಾಟಕ ದ್ರಾಕ್ಷಾರಸ ಮಂಡಳಿ, ತೋಟಗಾರಿಕಾ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೇಳದಲ್ಲಿ ವೈಟ್ ವೈನ್, ರೋಜ್ ವೈನ್ ಹಾಗೂ ರೆಡ್ ವೈನ್ ಮತ್ತು ಈ ಬಾರಿಯ ವಿಶೇಷ ಶಾಂಪೇನ್ ವೈನ್ ಪ್ರದರ್ಶನ ನಡೆದಿದೆ.
ಈ ಪ್ರದರ್ಶನದಲ್ಲಿ ಸುಮಾರು 99 ರಿಂದ 2500 ರೂ.ಗಳ ಬೆಲೆಯ ವಿವಿಧ ವೈನ್ ಗಳನ್ನು ಮಾರಾಟಕ್ಕೆ ಇಡಲಾಗಿದೆ. ಈ ಮೇಳದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಹತ್ತು ಕಂಪನಿಗಳು ಪಾಲ್ಗೊಂಡಿವೆ.
ಇದರಲ್ಲಿ ಹೇರಿಟೆಜ್ ವೈನರಿ, ಬ್ಲಾಕ್‌ಬಕ್ ವೈನ್ ಯಾರ್ಡ್, ಕೃಷ್ಣಾ ವಿಲ್ಲಾ ವೈನ್ ಗಾರ್ಡ್, ಸೋಲೊ ವೈನ್ ಗಾರ್ಡ್, ಪಾರ್ಟಿಲ್ ವೈನ್ ಯಾರ್ಡ, ಸುಡೋ ವೈನ್ಸ್, ಎಲೈಟ್ ವೈನಾರಿ, ವಾಲೆ ದಿ ಇಂಡಿಸ್, ಗ್ರೋವರ್ ಜಂಪಾ ವೈನ್ ಯಾರ್ಡ್, ರಿಕೊ ವೈನ್ಸ್ ಯಾರ್ಡ್ ಮಳಿಗೆಗಳನ್ನು ಹಾಕಲಾಗಿದೆ.
ವೈನ್ ಪ್ರಿಯರು ಪ್ರದರ್ಶನಕ್ಕೆ ಭೇಟಿ ನೀಡುತ್ತಿದ್ದು, ಹೆಚ್ಚಿನ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಶೇ.10ರಷ್ಟು ವಿಶೇಷ ರಿಯಾಯಿತಿ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ರವೀಂದ್ರ ಶಂಕರ ಮಿರ್ಜಿ, ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು, ಮಂಡಳಿ ಪ್ರಧಾನ ವ್ಯವಸ್ಥಾಪಕ ಸರ್ವೇಶ ಕುಮಾರ ಇದ್ದರು.