ಕಲಬುರಗಿ: ಹನ್ನೊಂದು ದಿನಗಳ ಕಾಲ ಜರುಗುವ ಐತಿಹಾಸಿಕ ಮಹಾದಾಸೋಹಿ, ಭಕ್ತಿ ಭಂಡಾರಿ ಶರಣಬಸವೇಶ್ವರ ಜಾತ್ರಾ ಮಹೋತ್ಸವ ರವಿವಾರ ಸಂಜೆ ಉಚ್ಚಾಯಿ ಮೆರವಣಿಗೆಯೊಂದಿಗೆ ಚಾಲನೆಗೊಂಡಿತು. ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ ಎಂಟನೇ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ| ಶರಣಬಸವಪ್ಪ ಅಪ್ಪ ಸಾನ್ನಿಧ್ಯ ಹಾಗೂ ನೇತೃತ್ವದಲ್ಲಿ ಶರಣಬಸವೇಶ್ವರ 197ನೇ ಜಾತ್ರಾ ಮಹೋತ್ಸವ ಹಾಗೂ ಉಚ್ಚಾಯಿ ಕಾರ್ಯಕ್ರಮ ರವಿವಾರ ಸಂಜೆ 6ಕ್ಕೆ ಶುಭಾರಂಭಗೊಂಡಿತು.
ಭಕ್ತರು ಉಚ್ಚಾಯಿಗೆ ಕಾಯಿ ಕರ್ಪೂರ ಅರ್ಪಿಸಿ ಭಕ್ತಿ ಭಾವ ಮೆರೆದರು. ಉಚ್ಚಾಯಿ ಕಾರ್ಯಕ್ರಮಕ್ಕೆ ನಗರವಲ್ಲದೇ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರರು ಭಕ್ತರು ಪಾಲ್ಗೊಂಡಿದ್ದರು. ರವಿವಾರ ಸಂಜೆಯಿಂದಲೇ ದೇವಾಲಯಕ್ಕೆ ಗ್ರಾಮಾಂತರ ಪ್ರದೇಶಗಳಿಂದ ಭಕ್ತರು ಆಗಮಿಸುತ್ತಿದ್ದು, ದೇವಾಲಯ ಆವರಣದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಪರ ಗ್ರಾಮ ಹಾಗೂ ಪಟ್ಟಣಗಳಿಂದ ಆಗಮಿಸುವ ಭಕ್ತಾಧಿಗಳ ವಾಸ್ತವ್ಯಕ್ಕೆ 400 ಕೋಣೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಶುದ್ಧ ಕುಡಿಯುವ ನೀರಿಗಾಗಿ ಘಟಕಗಳನ್ನು ಸ್ಥಾಪಿಸಲಾಗಿದೆ.
ಇಂದು ರಥೋತ್ಸವ
ಮಹಾದಾಸೋಹಿ ಶರಣಬಸವೇಶ್ವರ 197ನೇ ರಥೋತ್ಸವ ಸೋಮವಾರ ಸಂಜೆ 6ಕ್ಕೆ ನೆರವೇರಲಿದೆ. ರಥೋತ್ಸವಕ್ಕೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶವಲ್ಲದೇ ಇತರ ರಾಜ್ಯಗಳ ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ರಥೋತ್ಸವಕ್ಕೆ ಜನ ಸಾಗರವೇ ಹರಿದು ಬರಲಿದ್ದು, ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಯುಗಾದಿ ಹಬ್ಬದ ದಿನವರೆಗೂ ಜಾತ್ರೆ ವಿಜೃಂಭಣೆಯಿಂದ ಜರುಲಿದೆ. ಜಾತ್ರಾ ಮಹೋತ್ಸವ ಅಂಗವಾಗಿ ಈಗಾಗಲೇ ಹಲವಾರು ಆಟಿಕೆ, ತಿಂಡಿ-ತಿನಿಸುಗಳ ಅಂಗಡಿಗಳು, ಮನೋರಂಜನಾ ಕೂಟಗಳು ಬಂದಿಳಿದಿವೆ. ಗ್ರಾಮೀಣ ಭಾಗದಿಂದ ಹೆಚ್ಚಿನ ಭಕ್ತರು ಜಾತ್ರಾ
ಮಹೋತ್ಸವಕ್ಕೆ ಆಗಮಿಸಲಿದ್ದಾರೆ.