Advertisement

ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯಕ್ಕೆ ಚಾಲನೆ

05:07 PM May 04, 2022 | Team Udayavani |

ಬಳ್ಳಾರಿ: ಬಳ್ಳಾರಿಯ ಬಿಎಸ್‌ಎನ್‌ಎಲ್‌ ಕಚೇರಿಯ ಆವರಣದಲ್ಲಿರುವ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯಕ್ಕೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ ಅವರು ಬೆಂಗಳೂರಿನಿಂದ ವರ್ಚುವಲ್‌ ಮೂಲಕ ಮಂಗಳವಾರ ಉದ್ಘಾಟಿಸಿದರು.

Advertisement

ಬೆಂಗಳೂರಿನಲ್ಲಿ ಪೊಲೀಸ್‌ ಗಸ್ತು ನಿರ್ವಹಣೆಗಾಗಿ ನವೀನ ತಂತ್ರಜ್ಞಾನದ ಸ್ಮಾರ್ಟ್‌ ಇ-ಬಿಟ್‌ ಗೆ ಚಾಲನೆ ನೀಡುವುದರ ಜೊತೆಗೆ ಬಳ್ಳಾರಿಯ ಎಫ್‌ಎಸ್‌ಎಲ್‌ ಸೆಂಟರ್‌ಗೂ ವರ್ಚುವಲ್‌ ಮೂಲಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಚಾಲನೆ ನೀಡಿದರು.

ಈ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವು ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಬಳ್ಳಾರಿಯಲ್ಲಿ ಫೋರೆನ್ಸಿಕ್‌ ಸೈನ್ಸ್‌ ಲ್ಯಾಬೋರೇಟರಿ ಸ್ಥಾಪನೆಯಾಗುವುದರಿಂದ ಇದುವರೆಗೆ ಕಲಬುರಗಿ ಎಫ್‌ ಎಸ್‌ಎಲ್‌ ಮೇಲಿದ್ದ ಒತ್ತಡ ಕಡಿಮೆಯಾಗಲಿದ್ದು, ತ್ವರಿತ ಫೋರೆನ್ಸಿಕ್‌ ವರದಿಗಳು ಲಭ್ಯವಾಗಲಿವೆ. ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.

ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪವನಕುಮಾರ್‌ ಮಾಲಪಾಟಿ ಮಾತನಾಡಿ, ಇನ್ಮುಂದೆ ಎಫ್‌ಎಸ್‌ಎಲ್‌ ವರದಿಗಳು ಬೇಗ ಬರಲಿವೆ. ಪ್ರಕರಣಗಳಲ್ಲಿ ಆರೋಪಗಳು ದೃಢಪಡುವಿಕೆಯ ಶೇಕಡಾವಾರು ಪ್ರಮಾಣ ತೀರಾ ಕಡಿಮೆ ಇದ್ದು. ಎಫ್‌ ಎಸ್‌ಎಲ್‌ ಬಲಪಡಿಸಿದರೇ ಪೊಲೀಸರ ಸಾಕ್ಷಾಧಾರಗಳು ಮತ್ತಷ್ಟು ಗಟ್ಟಿಯಾಗಲು ಮತ್ತು ಶಿಕ್ಷೆ ಪ್ರಮಾಣ ಹೆಚ್ಚಾಗಲು ಸಾಧ್ಯವಾಗಲಿದೆ. ಇದರಿಂದ ಅಪರಾಧಗಳ ಪ್ರಮಾಣವೂ ಕಡಿಮೆಯಾಗಲು ಸಹಕಾರಿಯಾಗಲಿದೆ ಎಂದರು.

ರಾಜ್ಯ ಸರ್ಕಾರ ಈ ಎಫ್‌ಎಸ್‌ಎಲ್‌ ಕೇಂದ್ರಕ್ಕೆ ವಿಜ್ಞಾನಿಗಳು, ಸಿಬ್ಬಂದಿ ಹಾಗೂ ಅಗತ್ಯ ಸೌಕರ್ಯ ಸೇರಿ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದು, ಇನ್ನೂ ಅಗತ್ಯವಿದ್ದಲ್ಲಿ ಸ್ಥಳೀಯವಾಗಿ ಜಿಲ್ಲಾಡಳಿತ ಒದಗಿಸಲಿದೆ ಎಂದರು.

Advertisement

ಎಸ್ಪಿ ಸೈದುಲು ಅಡಾವತ್‌ ಮಾತನಾಡಿ, ಇದುವರೆಗೆ ಒಂದು ವರದಿ ಬರಬೇಕಾದರೆ ಎರಡು ತಿಂಗಳಾಗುತ್ತಿತ್ತು. ಇನ್ನುಮುಂದೆ ಹದಿನೈದು ದಿನಗಳಿಂದ ತಿಂಗಳೊಳಗೆ ವರದಿ ಕೈಸೇರಲಿದೆ. ಬಜೆಟ್‌ನಲ್ಲಿ ಘೋಷಣೆಯಾದ ಎರಡು ತಿಂಗಳಲ್ಲಿಯೇ ಎಫ್‌ಎಸ್‌ಎಲ್‌ ಕೇಂದ್ರವನ್ನು ಬಳ್ಳಾರಿಯಲ್ಲಿ ಅನುಷ್ಠಾನಗೊಳಿಸಲಾಗಿದೆ. ನಾಳೆಯಿಂದಲೇ ಈ ಲ್ಯಾಬ್‌ ಕಾರ್ಯನಿರ್ವಹಿಸಲಿದೆ. ಎಲ್ಲ ಅಗತ್ಯ ಸಿಬ್ಬಂದಿ ಹಾಗೂ ಸೌಕರ್ಯಗಳನ್ನು ಸರ್ಕಾರ ಒದಗಿಸಿದೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಜೆ. ಲಿಂಗಮೂರ್ತಿ, ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್‌, ಸಹಾಯಕ ಆಯುಕ್ತ ಡಾ| ಆಕಾಶ್‌, ಡಿವೈಎಸ್ಪಿ ರಮೇಶಕುಮಾರ್‌ ಸೇರಿದಂತೆ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next