Advertisement

ಕೆರೆ ಹೂಳೆತ್ತುವ ಯೋಜನೆಗೆ ಚಾಲನೆ

12:04 PM Feb 26, 2019 | Team Udayavani |

ಯಾದಗಿರಿ: ಜಿಲ್ಲೆಯ ಕೆರೆಗಳ ಸಂರಕ್ಷಿಸಿ ರೈತರಿಗೆ ಅನುಕೂಲ ಆಗುವಂತೆ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಸರ್ಕಾರದೊಂದಿಗೆ ಖಾಸಗಿ ಸಂಸ್ಥೆಗಳು ಕೈ ಜೋಡಿಸಿ ಒಂದು ಹೆಜ್ಜೆ ಜಲಸಾಕ್ಷರತೆಯ ಕಡೆಗೆ ಸಮುದಾಯ ಮುನ್ನಡೆಸಲು ಮುಂದಾಗಿವೆ.

Advertisement

ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆಯಾಗಿರುವ ಯಾದಗಿರಿ ಜಿಲ್ಲೆಯಲ್ಲಿ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಭಾರತೀಯ ಜೈನ್‌ ಸಂಘ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಜಿಲ್ಲೆಯ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ.

ಜಿಲ್ಲೆಯಲ್ಲಿ ಸುಮಾರು 400ರಷ್ಟು ಕೆರೆಗಳಿದ್ದು, ಶೇ. 80ರಷ್ಟು ಹಳ್ಳಿಯ ರೈತರಿಗೆ ಕೆರೆ ನೀರು ಉಪಯುಕ್ತವಾಗಿದೆ. ವಿಶೇಷವಾಗಿ ಯಾದಗಿರಿ ತಾಲೂಕು ಒಂದರಲ್ಲಿಯೇ 240 ಕೆರೆಗಳಿವೆ. 40 ಹೆಕ್ಟೇರ್‌ಗಿಂತ ವಿಸ್ತಾರವಾದ 57 ಕೆರೆಗಳಿದ್ದರೆ, ಸಣ್ಣ ನೀರಾವರಿ ಮತ್ತು ಪಂಚಾಯತ್‌ ರಾಜ್‌ ವ್ಯಾಪ್ತಿಯ 189 ಕೆರೆಗಳು ಇದಕ್ಕಿಂತ ಕಡಿಮೆ ವಿಸ್ತಾರ ಹೊಂದಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ, ಸಲಹೆ-ಸೂಚನೆಯಂತೆ ಮೊದಲು ಜಿಲ್ಲೆಯ 17 ಕೆರೆಗಳ ಹೂಳೆತ್ತಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. 

ಇದರಲ್ಲಿ ಭಾರತೀಯ ಜೈನ್‌ ಸಂಘ ಮಷಿನ್‌ಗಳನ್ನು ಬಳಸಿ ಕೆರೆಗಳ ಹೂಳೆತ್ತಿಕೊಡಲಿದ್ದು, ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಹೂಳನ್ನು ಹೊಲಗಳಿಗೆ ಸಾಗಿಸಿಕೊಳ್ಳಬೇಕಿದೆ. ಆಯ್ಕೆ ಮಾಡಿದ ಕೆರೆಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ರೈತರು ಹಾಗೂ ಸಾರ್ವಜನಿಕರೊಂದಿಗೆ ಈಗಾಗಲೇ ಸಭೆ-ಸಮಾರಂಭಗಳನ್ನು ಏರ್ಪಡಿಸಿ, ಜಾಗೃತಿ ಮೂಡಿಸಲಾಗಿದೆ. ಅವರು ತಮ್ಮ ಗ್ರಾಮಗಳಲ್ಲಿರುವ ಟ್ರ್ಯಾಕ್ಟರ್‌ಗಳ ಪಟ್ಟಿ ಮಾಡಿಕೊಂಡಿದ್ದು, ಯೋಜನೆ ಯಶಸ್ವಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ಜಿಲ್ಲಾಡಳಿತ ಹೊಂದಿದೆ

ಜಿಲ್ಲೆಯ ಕೆರೆಗಳನ್ನು ಹೂಳೆತ್ತಲು ಭಾರತೀಯ ಜೈನ್‌ ಸಂಘ ಯಂತ್ರಗಳನ್ನು ಅಳವಡಿಸಲಿದ್ದು, ಆಯಾ ವ್ಯಾಪ್ತಿಯ ರೈತರು ತಮ್ಮ ಜಮೀನುಗಳಿಗೆ ಸ್ವಂತ ಖರ್ಚಿನಲ್ಲಿ ಫಲವತ್ತಾದ ಹೂಳು ತೆಗೆದುಕೊಂಡು ಹೋಗಿ ಹಾಕಿಕೊಳ್ಳಬಹುದು. ರೈತರು ಜಮೀನಿಗೆ ಫಲವತ್ತಾದ ಮಣ್ಣು ಹಾಕುವುದರಿಂದ ಇಳುವರಿ ಹೆಚ್ಚಾಗಿ ಆದಾಯ ಹೆಚ್ಚಳಕ್ಕೂ ಸಹಕಾರಿ ಆಗುತ್ತದೆ. ಈ ಯೋಜನೆ ಯಶಸ್ವಿಗೆ ಸಾರ್ವಜನಿಕರು ಸಹಕರಿಸಬೇಕು. 
 ಎಂ. ಕೂರ್ಮಾರಾವ್‌, ಜಿಲ್ಲಾಧಿಕಾರಿ

Advertisement

ಯಾವ್ಯಾವ ಕೆರೆಗಳು ?
ಸುರಪುರ ವಿಧಾನಸಭಾ ಕ್ಷೇತ್ರದ ಬೈರಮಡ್ಡಿ, ಬೋಮನಳ್ಳಿ ಕೆ, ಬಲಶೆಟ್ಟಿಹಾಳ, ರಾಯನಪಾಳ್ಯ ಗ್ರಾಮದ ಕೆರೆಗಳು, ಶಹಾಪುರ ಕ್ಷೇತ್ರದ ಚಂದಾಪುರ, ಉಕ್ಕಿನಾಳ, ನಡಿಹಾಳ, ಗೋಗಿ ಕೆ, ಗೋಗಿ ಕೆ (ಕೆಳಗಿನ ಕೆರೆ), ಹೊಸಕೇರಾ, ಮಾವಿನ ಕೆರೆ ಮತ್ತು ಮೋಟ್ನಳ್ಳಿ ಹಾಗೂ ಜಿನಕೇರಾ ಹಾಗೂ ಯಾದಗಿರಿ ಕ್ಷೇತ್ರದ ಇಬ್ರಾಹಿಂಪೂರ, ಯಾದಗಿರಿ ಕೆ ಹಾಗೂ ಠಾಣಗುಂದಿಯ ಕೆರೆಗಳು ಸೇರಿವೆ. 

ಇಂದು ಯೋಜನೆಗೆ ಚಾಲನೆ
ಜಿಲ್ಲೆಯಗಳ ಮೊದಲ ಹಂತದ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಯಾದಗಿರಿ ತಾಲೂಕಿನ ಜಿನಕೇರಾ ಕೆರೆ ಆವರಣದಲ್ಲಿ ಫೆ. 26ರಂದು ಬೆಳಗ್ಗೆ 10:00 ಗಂಟೆಗೆ ಗಣಿ ಮತ್ತು ಭೂವಿಜ್ಞಾನ ಸಚಿವರೂ ಆಗಿರುವ ಯಾದಗಿರಿ ಜಿಲ್ಲಾ ಉಸ್ತುವಾರು ಸಚಿವ ರಾಜಶೇಖರ ಬಿ. ಪಾಟೀಲ ಚಾಲನೆ ನೀಡಲಿದ್ದಾರೆ. ಜೊತೆಗೆ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಸಲಿದ್ದಾರೆ.

ಕೆರೆ ಹೂಳಿನ ಉಪಯೋಗ ಏನು?
ಒಂದು ವರ್ಷ ಹೊಲಕ್ಕೆ ಹೂಳು ಹಾಕಿದರೆ 3 ವರ್ಷ ಉತ್ತಮ ಬೆಳೆ ತೆಗೆಯಲು ಸಾಧ್ಯವಾಗುತ್ತದೆ ಎನ್ನುವುದು ಬಹುತೇಕ ರೈತರ ಅನುಭವ. ಹೂಳು ಮಣ್ಣಿನ ಭೌತಿಕ ಮತ್ತು ರಾಸಾಯನಿಕ ಗುಣಗಳನ್ನು ಹೆಚ್ಚಿಸುತ್ತದೆ. ಮಣ್ಣಿನಲ್ಲಿ ನೀರು ಹಾಗೂ ಪೋಷಕಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಿಸುತ್ತದೆ. ಹೊಲಗಳ ಬದುವಿನಲ್ಲಿ ಹೂಳು ಹಾಕುವುದರಿಂದ ಬದುಗಳು ಗಟ್ಟಿಯಾಗುತ್ತದೆ ಮತ್ತು ಸಮೃದ್ಧ ಮಣ್ಣು ಅತಿವೃಷ್ಟಿ ಸಂದರ್ಭದಲ್ಲಿ ಕೊಚ್ಚಿ ಹೋಗುವುದನ್ನು ತಡೆಗಟ್ಟುತ್ತದೆ. ಸತತ ರಸಗೊಬ್ಬರ ಬಳಸಿದ ಪರಿಣಾಮ ಮಣ್ಣಿನ ರಚನೆಯೇ ಹಾಳಾಗಿದ್ದು, ಅದನ್ನು ಸರಿಪಡಿಸಲು ಹೂಳು ಉತ್ತಮ ಗೊಬ್ಬರವಾಗಿದೆ.

ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next