ಮುಂಬಯಿ:ರಾಯನ್ ಇಂಟರ್‌ನ್ಯಾಷನಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ಸ್‌ನ ವಾರ್ಷಿಕ 158ನೇರಾಯನ್ ಮಿನಿಥಾನ್ ಅ. 21 ರಂದು ನಡೆಯಿತು. ಸಂಸ್ಥೆಯ ಬೊರಿವಲಿ ಪಶ್ಚಿಮದಲ್ಲಿನ ಸೈಂಟ್ ಲಾರೆನ್ಸ್ ಶಾಲಾ ಸಭಾಂಗಣದಲ್ಲಿ ಬೆಳಗ್ಗೆ ರಾಯನ್ ಇಂಟರ್‌ನ್ಯಾಷನಲ್ ಸಮೂಹ ಸಂಸ್ಥೆಯ ಸಿಇಒ ರಾಯನ್ ಎ. ಪಿಂಟೋ ಮತ್ತು ಗಣ್ಯರು ಹಸಿರು ನಿಶಾನೆ ತೋರಿಸಿ “ರಾಯನ್ ಮಿನಿಥಾನ್-2018ಕ್ಕೆ ಚಾಲನೆ ನೀಡಿ ಶುಭಹಾರೈಸಿದರು.
ಮೂರು ವಿಭಾಗಗಳಲ್ಲಿ ನಡೆದ ಮಿನಿಥಾನ್ ಸ್ಪರ್ಧೆಯಲ್ಲಿ ರಾಷ್ಟ್ರ ದಾದ್ಯಂತದ ಸುಮಾರು 41 ಶಾಲೆಗಳ ಸುಮಾರು 11,706 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬೊರಿವಲಿ ಪ್ರದೇಶದ ಸುಮಾರು 4 ಕಿ.ಮೀ ಮಾರ್ಗದಲ್ಲಿ ಸ್ಥಾನೀಯ ಕ್ರೀಡಾ ಭಿಮಾನಿಗಳ ಪ್ರೋತ್ಸಾಹದ ನಡುವೆ ಪಾಲಕರು ಮತ್ತು ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡು ಮಿನಿಥಾನ್‌ಗೆ ಮೆರುಗು ನೀಡಿದರು.
ಸಂಸ್ಥೆಯ ಕಾರ್ಯಾಧ್ಯಕ್ಷ ಅಗ ಸ್ಟಿನ್ ಎಫ್. ಪಿಂಟೋ ಅವರ ಸಮರ್ಥ ನಾಯಕತ್ವದಲ್ಲಿ 1998ರಲ್ಲಿಆರಂಭಗೊಂಡು ರಾಷ್ಟ್ರದ ವಿವಿಧ ಮಹಾನಗರಗಳಲ್ಲಿ ವಾರ್ಷಿಕವಾಗಿ ಮಿನಿಥಾನ್ ಓಟ ಆಯೋಜಿಸಲಾಗುತ್ತದೆ. ರಾಷ್ಟ್ರೀಯ ಹಾಗೂ ಅಂತಾ ರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಿಗಾಗಿ ಯುವ ವಿದ್ಯಾರ್ಥಿಗಳನ್ನು ಸನ್ನದ್ಧ ಗೊಳಿಸುವುದಕ್ಕಾಗಿ ಮತ್ತು ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಅಭಿವೃದ್ಧಿಗೊಳಿಸಲು ಇಂತಹ ಓಟವನ್ನು ನಡೆಸಲಾಗುತ್ತದೆ. ಆ ಮೂಲಕ ರಾಷ್ಟ್ರದ ಭವಿಷ್ಯತ್ತಿನ ಭವ್ಯ ಪ್ರಜೆಗಳಾದ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳಿಗೆ ಅವಕಾಶ, ಪ್ರತಿಭಾನ್ವೇ ಷಣೆ ನಡೆಸಲು ಇಂತಹ ಮಿನಿಥಾನ್‌ಗಳು ಪೂರಕವಾಗಿವೆ. ವಾರ್ಷಿಕವಾಗಿ ಆಯೋಜಿಸುವ ವಿವಿಧೆಡೆಯ ಮಿನಿಥಾನ್‌ನಲ್ಲಿ ಸುಮಾರು 1,00,000 ವಿದ್ಯಾರ್ಥಿಗಳು ಭಾಗ ವಹಿಸುತ್ತಿದ್ದಾರೆ ಎಂದು ನುಡಿದು, ಸ್ಪರ್ಧೆಯಲ್ಲಿ ವಿಜೇತ ಎಲ್ಲಾ ವಿದ್ಯಾರ್ಥಿಗಳಿಗೆ ಸಮೂಹ ಸಂಸ್ಥೆಯ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಶುಭಹಾರೈಸಿದರು.
ವಿಜೇತ ಸ್ಪರ್ಧಿಗಳಿಗೆ ಪ್ರಶಸ್ತಿ, ನಗದು, ಸ್ಮರಣಿಕೆ, ಪ್ರಮಾಣ ಪತ್ರವನ್ನಿತ್ತು ಅತಿಥಿ-ಗಣ್ಯರು ಮತ್ತು ಕ್ರೀಡಾ ಸಂಘಟಕರು ಗೌರವಿಸಿದರು. ಸ್ಪರ್ಧೆಯಲ್ಲಿ ಅಂಡರ್-12, ಅಂಡರ್-14 ಅಂಡರ್-16 ಬಾಲಕ ಮತ್ತು ಬಾಲಕಿಯರ ಸ್ಪರ್ಧೆಯಲ್ಲಿ ಸೈಂಟ್ ಅಲೋಶಿಯಸ್ ಹೈಸ್ಕೂಲ್ ನಲಸೋಪರ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಸೈಂಟ್ ಕ್ಸೇವಿಯರ್ ಅಂಧೇರಿ ಪ್ರಥಮ ಸ್ಥಾನ ಗಳಿಸಿದರೆ, ಸೈಂಟ್ ಕ್ಸೇವಿಯರ್ ಹೈಸ್ಕೂಲ್ ಗೋರೆಗಾಂವ್ ಹಾಗೂ ಸೈಂಟ್ ಜೋಸೆಫ್ ಹೈಸ್ಕೂಲ್ ಪನ್ವೇಲ್ ದ್ವಿತೀಯ ಸ್ಥಾನ ಗಳಿಸಿತು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್