ಮೂಡಬಿದಿರೆ : ಫುಟ್‌ಬಾಲ್ ಎಂದರೆ ವೇಗವಾಗಿ ಓಡುವ ಆಟ. ಹಾಗಾಗಿ ಕ್ರೀಡಾಳುಗಳು ಫುಟ್‌ಬಾಲ್ ಗಿಂತ ವೇಗವಾಗಿ ಓಡುವ ಮೂಲಕ ಕ್ರೀಡೆಯಲ್ಲಿ ಉತ್ತಮ ಸಾಧನೆಯನ್ನು ತೋರಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಬೆಳುವಾಯಿ ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆಯಲ್ಲಿ ಮೂಡಬಿದಿರೆಯ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮತ್ತು ಎಸ್‌ಎಂಪಿ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆದ 2018- 19ನೇ ಸಾಲಿನ ಮೂಡಬಿದಿರೆ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಫುಟ್ ಬಾಲ್ ಪಂದ್ಯದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲಾ ವಿದ್ಯಾರ್ಥಿಯಾಗಿದ್ದಾಗ ತಾನೂ ಓರ್ವ ಫುಟ್‌ಬಾಲ್ ಆಟಗಾರನಾಗಿದ್ದೆ ಎಂದು ಸ್ಮರಿಸಿಕೊಂಡ ಶಾಸಕರು, ತನ್ನ ಜವಾಬ್ದಾರಿಯ ನೆಲೆಯಲ್ಲಿ ಕ್ರೀಡಾಚಟುವಟಿಕೆಗಳಿಗೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಫುಟ್‌ಬಾಲ್ ಪಂದ್ಯದಲ್ಲಿ ಕಳೆದ ಸಾಲಿನಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಶಾಲೆಯ ಕ್ರೀಡಾಪಟುಗಳಾದ ಕಾವ್ಯಾ, ವೀಕ್ಷಿತಾ ಹಾಗೂ ಮನೀಶಾ ಅವರನ್ನು ಕಾರ್ಯಕ್ರಮದಲ್ಲಿ ಪುರಸ್ಕರಿಸಲಾಯಿತು.
ಬೆಳುವಾಯಿ ಗ್ರಾ.ಪಂ. ಅಧ್ಯಕ್ಷ ಭಾಸ್ಕರ ಆಚಾರ್ಯ, ಭಾರತ್ ಅಟೋಕಾರ್ನ ಶಿವಕೀರ್ತಿ, ನಿವೃತ್ತ ಶಾರೀರಿಕ ಶಿಕ್ಷಣ ಶಿಕ್ಷಕ ಕೆ. ಪ್ರಭಾಕರ ಶೆಟ್ಟಿ, ವಾಲ್ಪಾಡಿಗುತ್ತು ಗುಣಪಾಲ ಮುದ್ಯ, ನಿವೃತ್ತ ಮುಖ್ಯ ಶಿಕ್ಷಕ ಸದಾಶಿವ ಶೆಟ್ಟಿ ಎಸ್., ಶಾಲಾ ಆಡಳಿತ ಮಂಡಳಿ ಸದಸ್ಯ ಸುರೇಶ್ ಪೂಜಾರಿ ಗೋಲಾರ, ಸಿಆರ್‌ಪಿ ಪ್ರಸನ್ನ ಶೆಣೆ„ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕ ದೇವದಾಸ ಕಿಣಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ ಪ್ರಸ್ತಾವನೆಗೈದರು. ವಲೇರಿಯನ್ ಮೊಂತೆರೋ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ವಂದಿಸಿದರು.
ಮೈದಾನಕ್ಕೆ ಕಾಯಕಲ್ಪ
ಶಾಲೆಯ ಸ್ಥಾಪಕ ಜೆ.ಎಂ. ಪಡುಬಿದ್ರಿ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಸುಮಾರು 4.1 ಎಕ್ರೆ ವಿಸ್ತಾರವುಳ್ಳ, ಶತಮಾನದ ಚರಿತ್ರೆಯನ್ನು ಹೊಂದಿದ್ದೂ ನಿರ್ಗತಿಕವಾಗಿ ಬಿದ್ದಿರುವ ಇಲ್ಲಿನ ಮೈದಾನಕ್ಕೆ ಸೂಕ್ತ ಕಾಯಕಲ್ಪ ನೀಡಬೇಕಾಗಿದೆ ಎಂದು ಶಾಸಕರಲ್ಲಿ ಮನವಿ ಮಾಡಿದರು.