Advertisement

ಶ್ರೀಶೈಲ ಕಂಬಿ ಪಾದಯಾತ್ರೆಗೆ ಚಾಲನೆ

12:02 PM Mar 20, 2022 | Team Udayavani |

ಮಹಾಲಿಂಗಪುರ: ಪಟ್ಟಣದ ಮಹಾಲಿಂಗೇಶ್ವರ ದೇವಸ್ಥಾನದಿಂದ ಸುಕ್ಷೇತ್ರ ಶ್ರೀಶೈಲವರೆಗೆ ಜರುಗುವ ಶ್ರೀಶೈಲ ಕಂಬಿ ಪಾದಯಾತ್ರೆ ಶುಕ್ರವಾರ ಆರಂಭಗೊಂಡಿತು.

Advertisement

ಶ್ರೀಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮುಧೋಳ ರಸ್ತೆಯ ಮಹಾದ್ವಾರರದ ಹತ್ತಿರ ಮಲ್ಲಯ್ಯನ ಕಂಬಿಗೆ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು. ಕಂಬಿಯೊಂದಿಗೆ ಮಹಾಲಿಂಗ ಹೆಸರಿನ ಗೋವು ಕೂಡಾ ಪಾದಯಾತ್ರೆ ಕೈಗೊಂಡಿದ್ದು ವಿಶೇಷ.

ಪಾದಯಾತ್ರೆಯಲ್ಲಿ ಮಹಿಳೆಯರು, ವಯೋವೃದ್ಧರು, ಯುವಕರು ಸೇರಿದಂತೆ ಸಾವಿರಕ್ಕೂ ಹೆಚ್ಚು ಪಾದಯಾತ್ರಿಗಳು ಮುಧೋಳ ಮಾರ್ಗವಾಗಿ ಸುಕ್ಷೇತ್ರ ಶ್ರೀಶೈಲಕ್ಕೆ ಕಂಬಿಯೊಂದಿಗೆ ಪಾದಯಾತ್ರೆ ಬೆಳೆಸಿದರು. ಮಹಾಲಿಂಗಪುರದಿಂದ ವಜ್ಜರಮಟ್ಟಿ, ಯಡಹಳ್ಳಿ, ಕಲಾದಗಿ, ಬಾಗಲಕೋಟ, ಕಮತಗಿ, ಕರಡಿ, ಸಜ್ಜಲಗುಡ್ಡ, ಕೈಲಾಸಬಾಗಿಲು ಮಾರ್ಗವಾಗಿ ಮಾ.31ರಂದು ಸುಕ್ಷೇತ್ರ ಶ್ರೀಶೈಲಕ್ಕೆ ತಲುಪಲಿದ್ದಾರೆ. ಸ್ಥಳೀಯ ಬಸವನಗರದ ಸದ್ಭಕ್ತರು ಗುರುವಾರ ರಾತ್ರಿಯಿಂದ ಶುಕ್ರವಾರ ಮಧ್ಯಾಹ್ನದವರೆಗೆ ಪಾದಯಾತ್ರಿಕರಿಗೆ ಅನ್ನಪ್ರಸಾದ ಸೇವೆ ಏರ್ಪಡಿಸಿದ್ದರು.

ಮುಧೋಳವರೆಗೆ ಭಕ್ತರ ದಂಡು: ಪಟ್ಟಣದಲ್ಲಿ ಹೋಳಿಹುಣ್ಣಿಮೆಯ ಬಣ್ಣದ ಹಬ್ಬ, ಅದನ್ನು ತಪ್ಪಿಸಿಕೊಳ್ಳುವದಕ್ಕಾಗಿ ಯುವಕರು, ರಾಜಕೀಯ ಮುಖಂಡರು ಹಾಗೂ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಾವಿರಾರು ಜನರು ಮುಧೋಳವರೆಗೆ ಪಾದಯಾತ್ರೆ ಕೈಗೊಂಡು ಮುಧೋಳದಿಂದ ಪರತ್‌ ಊರಿಗೆ ಮರಳಿದ್ದಾರೆ. ಕಂಬಿಯು ಹೋಗುವ ಸಮಯದಲ್ಲಿ ಮಹಾಲಿಂಗಪುರದಿಂದ ಬೆಳಗಲಿವರೆಗೆ ಅಂದಾಜು 6 ಕೀಮಿವರೆಗೂ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಸಾವಿರಾರು ಭಕ್ತರ ದಂಡು ಕಾಣಿಸುತ್ತಿತ್ತು.

ಏ.28ವರೆಗೆ ಶುಭ ಕಾರ್ಯಗಳಿಲ್ಲ: ಕಂಬಿ ಮಲ್ಲಯ್ಯ ಶ್ರೀಶೈಲಕ್ಕೆ ತೆರಳಿದ ಮಾ. 18ರಿಂದ ಏ. 28ರವರೆಗೆ ಪಟ್ಟಣದ ಜನತೆ ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ. ಇದು ಅನಾದಿಕಾಲದಿಂದಲೂ ನಡೆದುಕೊಂಡು ಬಂದ ವಿಶಿಷ್ಟ ಪದ್ದತಿಯಾಗಿದೆ. ಈ ಸಮಯದಲ್ಲಿ ಮದುವೆ, ಸೀಮಂತ, ಗೃಹ ಪ್ರವೇಶ, ಹೊಸ ಕಟ್ಟಡ ನಿರ್ಮಾಣ ಸೇರಿದಂತೆ ಯಾವು ಶುಭ ಕಾರ್ಯ ಆಚರಿಸುವುದಿಲ್ಲ. ಮನೆಗೆ ಬಳಸುವ ಕಸಬರಿಗೆ ಹಾಗೂ ಹೊಸ ಪಾದರಕ್ಷೆಗಳ ಖರೀದಿ ಮಾಡುವಂತಿಲ್ಲ. ಕಂಬಿ ಪಾದಯಾತ್ರೆ ಹೊರಡುವ ದಿನ ಮಹಾಲಿಂಗಪುರದಲ್ಲಿ ಇದ್ದವರು ಕಂಬಿ ಬಂದ ನಂತರ ಜರುಗುವ ಐದೇಶಿ ಉತ್ಸವಕ್ಕೆ ಕಡ್ಡಾಯವಾಗಿ ಭಾಗವಹಿಸಲೇಬೇಕು ಎಂಬುದು ಇಲ್ಲಿನ ವಾಡಿಕೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next