Advertisement

ಇ-ಖಾತಾ ಆಂದೋಲನಕ್ಕೆ ಚಾಲನೆ

11:49 AM May 03, 2019 | pallavi |

ದೊಡ್ಡಬಳ್ಳಾಪುರ: ಮನೆ ನಿರ್ಮಿಸಲು, ಮನೆ ಅಥವಾ ನಿವೇಶನದ ಹಕ್ಕು ವರ್ಗಾವಣೆ, ಬ್ಯಾಂಕಿನಿಂದ ಸಾಲ ಪಡೆಯುವುದು ಸೇರಿದಂತೆ ಎಲ್ಲದಕ್ಕೂ ಈಗ ಇ-ಖಾತೆ ಕಡ್ಡಾಯವಾಗಿದ್ದು, ನಗರಸಭೆಯಿಂದ ಆರಂಭವಾಗಿರುವ ಇ-ಖಾತಾ ಆಂದೋಲನದಲ್ಲಿ ನಾಗರಿಕರು ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ ಇ-ಖಾತೆಗಳನ್ನು ಪಡೆಯಬೇಕು ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

Advertisement

ಅವರು ಗುರುವಾರ ನಗರಸಭೆ ವತಿಯಿಂದ ನಗರದ 14ನೇ ವಾರ್ಡ್‌ ದೇವಲ ಮಹರ್ಷಿ ಶಾಲೆಯಲ್ಲಿ ನಡೆದ ಇ-ಖಾತೆ ಆಂದೋಲದಲ್ಲಿ ಇ-ಖಾತೆಯನ್ನು ಸ್ಥಳದಲ್ಲೇ ವಿತರಿಸಿ ಮಾತನಾಡಿದರು.

ಸಾರ್ವಜನಿಕರು ಮನೆ ನಿರ್ಮಿಸಲು, ಮನೆ ಅಥವಾ ನಿವೇಶನದ ಹಕ್ಕು ವರ್ಗಾವಣೆ, ಬ್ಯಾಂಕಿನಿಂದ ಸಾಲ ಪಡೆಯುವುದು ಸೇರಿದಂತೆ ಎಲ್ಲದಕ್ಕೂ ಈಗ ಇ-ಖಾತೆ ಕಡ್ಡಾಯವಾಗಿವೆ. ನಗರಸಭೆ ವ್ಯಾಪ್ತಿಯಲ್ಲಿನ ಎಲ್ಲ ಕಂದಾಯ ದಾಖಲೆಗಳು ಡಿಜಿಟಲೀಕರಣವಾಗಿವೆ. ಯಾವುದೇ ಸ್ವತ್ತನ್ನು ಮಾಲೀಕರಿಗೆ ತಿಳಿಯದಂತೆ ಮಾರಾಟ ಮಾಡಲು ಸಾಧ್ಯವೇ ಇಲ್ಲ. ಹೀಗಾಗಿ ಎಲ್ಲರು ಇ-ಖಾತೆಗಳಿಗೆ ಅರ್ಜಿ ಸಲ್ಲಿಸಿ ಇ-ಖಾತೆಗಳನ್ನು ಮಾಡಿಸಿಕೊಳ್ಳಬೇಕು. ಸರ್ಕಾರಿ ರಜಾ ದಿನ ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ ಎಂದರು.

ಇ-ಖಾತಾ ಕುರಿತು ಮಾಹಿತಿ ನೀಡಿದ ನಗರಸಭೆ ಪೌರಾಯುಕ್ತ ಆರ್‌.ಮಂಜುನಾಥ್‌ ಆಸ್ತಿ ಹಾಗೂ ಮಾಲೀಕರ ಭಾವ ಚಿತ್ರದ ಸಮೇತ ಆಧಾರ್‌ ಸಂಖ್ಯೆಯೊಂದಿಗೆ ಎಲ್ಲವೂ ಇ-ಖಾತಾ ಪತ್ರದಲ್ಲಿ ಇರಲಿವೆ. ಆಸ್ತಿ ಪರಭಾರೆಗೆ ಉಪನೋಂದಣಿ ಕಚೇರಿಗೆ ಹೋದರೆ ಅಲ್ಲಿ ಮಾಲೀಕರ ಭಾವಚಿತ್ರ ಸಮೇತ ಎಲ್ಲ ಮಾಹಿತಿಯು ಬರಲಿದೆ. ನಗರದಲ್ಲಿ ಇ-ಖಾತೆಗೆ ಹೆಚ್ಚು ಜನ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಆದರೆ ಸೂಕ್ತ ದಾಖಲೆಗಳು, ಸಿಬ್ಬಂದಿಗೆ ಕಾರ್ಯಾಭಾರದ ಒತ್ತಡದಿಂದಾಗಿ ಸಾರ್ವಜನಿಕರಿಗೆ ಸಕಾಲದಲ್ಲಿ ಇ-ಖಾತೆಗಳನ್ನು ನೀಡುವುದು ವಿಳಂಭವಾಗುತಿತ್ತು.

ಇದನ್ನು ಮನಗೊಂಡ ಜಿಲ್ಲಾಧಿಕಾರಿಗಳು ಹಾಗೂ ನಗರಸಭೆ ಆಡಳಿತಾಧಿಕಾರಿ ಕರೀಗೌಡ ಅವರ ಆದೇಶದ ಮೇರೆಗೆ ಪ್ರತಿ ವಾರ್ಡ್‌ಗಳಲ್ಲಿಯೂ ಇ-ಖಾತೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. 2019-20ನೇ ಸಾಲಿನ ನೀರು, ನಿವೇಶನ ಕಂದಯ ಪಾವತಿ ಸೇರಿದಂತೆ ಅಗತ್ಯ ದಾಖಲಾತಿಗಳ ಮಾಹಿತಿಯನ್ನು ಒಳಗೊಂಡ ಕರ ಪತ್ರವನ್ನು ಮುದ್ರಿಸಿ ಹಂಚಿಕೆ ಮಾಡಲಾಗಿದೆ. ಅರ್ಜಿ ಸಲ್ಲಿಸಿದ ಒಂದು ಗಂಟೆಯಲ್ಲೇ ಇ-ಖಾತಾ ಪತ್ರವನ್ನು ಸ್ಥಳದಲ್ಲೇ ವಿತರಿಸಲಾಗುತ್ತಿದೆ ಎಂದರು.

Advertisement

ನಗರ ವಾಸದ ಹಾಗೂ ವಾಣಿಜ್ಯ ಸೇರಿ ಒಟ್ಟು 17,739 ಅಸ್ತಿಗಳಿವೆ. ಇವುಗಳ ಪೈಕಿ ಇಲ್ಲಿಯವರೆಗೆ 4,000 ಆಸ್ತಿಗಳಿಗೆ ಮಾತ್ರ ಇ-ಖಾತೆಗಳಾಗಿವೆ. ಮೊದಲ ದಿನ ಇ-ಖಾತೆಗೆ 35 ಜನ ಅರ್ಜಿಗಳನ್ನು ಪಡೆದಿದ್ದಾರೆ. ಶುಕ್ರವಾರ15 ನೇ ವಾರ್ಡ್‌ ಇ-ಖಾತಾ ಆಂದೋಲನವು ಸಹ ದೇವಲ ಮಹರ್ಷಿ ಶಾಲೆಯಲ್ಲಿಯೇ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆವರೆಗೂ ನಡೆಯಲಿದೆ. ಉಳಿದ ವಾಡ್ಗರ್ಳಲ್ಲಿ ಯಾವ ದಿನಾಂಕ, ಸ್ಥಳ, ಸಮಯವನ್ನು ಕರಪತ್ರದ ಮೂಲಕ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಸಮಯಾವಕಾಶ ನೀಡಿ

ನಗರಸಭೆ ವತಿಯಿಂದ ಇ-ಖಾತಾ ಆಂದೋಲನ ಪ್ರಾರಂಭಿಸಿರುವುದು ಸಾರ್ವಜನಿಕರಿಗೆ ಅತ್ಯಂತ ಉಪಯುಕ್ತ ಹಾಗೂ ಅತ್ಯವಶ್ಯಕವಾದ ಕೆಲಸವಾಗಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಯ, ಕಚೇರಿಗೆ ಅಲೆದಾಟ ತಪ್ಪಲಿದೆ. ಆದರೆ, ಇ-ಖಾತೆ ಮಾಡಿಸಲು ಅಗತ್ಯ ದಾಖಲೆಗಳನ್ನು ಹೊಂದಿಸಿಕೊಳ್ಳಲು ಸಮಯಾವಕಾಶ ಸಾಲದು. ಕನಿಷ್ಠ ಒಂದು ವಾರಗಳ ಮುಂಚಿತವಾಗಿಯೇ ಸಾರ್ವಜನಿಕರಿಗೆ ಪ್ರಚಾರ ಮಾಡಿದ್ದರೆ ದಾಖಲೆಗಳನ್ನು ಹೊಂದಿಸಿಕೊಳ್ಳಲು ಅನುಕೂಲವಾಗುತ್ತಿತ್ತು ಎಂದು 14ನೇ ವಾರ್ಡ್‌ ನಿವಾಸಿ ಶ್ರೀನಿವಾಸ್‌ ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next